ಸಾರಾಂಶ
ರೈತರ ಖಾತೆಗಳಿಗೆ ಸರ್ಕಾರದ ಹಣ ಮಂಜೂರು ಮಾಡುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕ ವತಿಯಿಂದ ಗುರುಮಠಕಲ್ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಉಪ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಗುರುಮಠಕಲ್
ಕರ್ನಾಟಕ ಸರ್ಕಾರ ಬರಪೀಡಿತ ಜಿಲ್ಲೆ ಹಾಗೂ ತಾಲೂಕುಗಳೆಂದು ಘೋಷಿಸಿ ಹಣ ಬಿಡುಗಡೆ ಮಾಡಿದೆ. ಆದರೆ, ಹಣ ಮಂಜೂರಾಗಿ ತಿಂಗಳುಗಳು ಕಳೆದರೂ ಗುರುಮಠಕಲ್ ತಾಲೂಕಿನ ರೈತರ ಖಾತೆಗಳಿಗೆ ಹಣ ಕೂಡ ಜಮಾ ಆಗಿಲ್ಲ ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಲಾಲಪ್ಪ ತಲಾರಿ ದೂರಿದರು.ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಉಪ ತಹಸೀಲ್ದಾರ ನರಸಿಂಹಸ್ವಾಮಿ ಮೂಲಕ ಜಿಲ್ಲಾಧಿಕಾರಿಗಳಿಗೆ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕ ವತಿಯಿಂದ ಮನವಿ ಸಲ್ಲಿಸಿ ಮಾತನಾಡಿದರು.
ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗದೇ ರೈತನ ಜೀವನ ಕಂಗಾಲಾಗಿದೆ. ಕೂಲಿ-ನಾಲಿ ಮಾಡಿಕೊಂಡು ಜೀವನ ಮಾಡಬೇಕೆಂದರೆ, ಕಲ್ಯಾಣ ಕರ್ನಾಟಕ ಗಡಿಭಾಗದ ಅತೀ ಹಿಂದುಳಿದ ಯಾದಗಿರಿ ಜಿಲ್ಲೆಯ ನೂತನವಾಗಿ ಘೋಷಣೆಯಾದ ಗುರುಮಠಕಲ್ ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ. ರೈತರ ಮಕ್ಕಳ ಶಿಕ್ಷಣ ಕುಂಠಿತವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯ ಗಂಭೀರವಾಗಿ ಪರಿಗಣಿಸಿ ರೈತರ ಖಾತೆಗಳಿಗೆ ಸರ್ಕಾರದಿಂದ ಮಂಜೂರಾದ ಹಣವನ್ನು ಶೀಘ್ರವಾಗಿ ಜಮಾಮಾಡಿ, ರೈತರನ್ನು ಮಾನಸಿಕ ಮನಃಸ್ಥಿತಿಯಿಂದ ತಪ್ಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರೊಂದಿಗೆ ಜಿಲ್ಲಾಧಿಕಾರಿ ಕಾರ್ಯಾಲಯದ ಮುಂದೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ವೇಳೆ ನರಸಿಂಹ ಎಂಟಿಪಲ್ಲಿ, ಸಾಬಣ್ಣ ಗಾಜರಕೊಟ, ಶೇಕರ್ ಲಿಕ್ಕಿ, ಸಾಯಿಕುಮಾರ್ ಸೇರಿದಂತೆ ಇತರರಿದ್ದರು.