ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಸಂಬಂಧಿಸಿದ ಇಲಾಖೆಗಳ ಅಗತ್ಯ ಮಾಹಿತಿಗಳು ಮತ್ತು ದಾಖಲೆಗಳೊಂದಿಗೆ ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು.
ಗದಗ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಸೆ. 1ರಂದು ಜಿಲ್ಲೆಗೆ ಭೇಟಿ ನೀಡಿ ಜಿಲ್ಲೆಯ ಬರ ಪರಿಸ್ಥಿತಿಯ ಕುರಿತು ಅವಲೋಕನ ಸಭೆ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.ನಗರದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಖ್ಯಮಂತ್ರಿಗಳು ಸೆ. 1ರಂದು ಹುಬ್ಬಳ್ಳಿಯಿಂದ ಗದಗಕ್ಕೆ ಆಗಮಿಸಿ ಬರ ಪರಿಸ್ಥಿತಿ ಕುರಿತು ಅವಲೋಕನ ಸಭೆ ನಡೆಸಲಿದ್ದು, ಬಳಿಕ ಬರಪೀಡಿತ ಪ್ರದೇಶಗಳ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ. ನಂತರ ಲಕ್ಷ್ಮೇಶ್ವರಕ್ಕೆ ತೆರಳಲಿರುವ ಹಿನ್ನೆಲೆ ಪ್ರವಾಸದ ಎಲ್ಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಸಂಬಂಧಿಸಿದ ಇಲಾಖೆಗಳ ಅಗತ್ಯ ಮಾಹಿತಿಗಳು ಮತ್ತು ದಾಖಲೆಗಳೊಂದಿಗೆ ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದರು.ಬರ ಪರಿಸ್ಥಿತಿ ಪರಿಶೀಲನಾ ಸಭೆಯಲ್ಲಿ ಸಂಬಂಧಿಸಿದ ಎಲ್ಲ ಇಲಾಖೆಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಸಂಪೂರ್ಣ ಹಾಗೂ ನಿಖರ ಮಾಹಿತಿಯೊಂದಿಗೆ ಹಾಜರಾಗಬೇಕು. ಬರ ನಿರ್ವಹಣೆ, ಕುಡಿಯುವ ನೀರು, ಕೃಷಿ, ಬೆಳೆಹಾನಿ ಸೇರಿದಂತೆ ಸಂಬಂಧಿತ ವಿಷಯಗಳ ಕುರಿತು ಅಗತ್ಯ ಮಾಹಿತಿಯನ್ನು ಸಿದ್ಧಪಡಿಸಿಕೊಳ್ಳುವಂತೆ ಸೂಚಿಸಿದರು.ಅಲ್ಲದೆ, ಭಾರತ್ ಜೋಡೋ ಯುವ ಸಂಘಗಳು, ಪ್ರಜಾ ಸೇವೆ ಹಾಗೂ ಪ್ರತಿ ಶನಿವಾರ ನಡೆಯುವ ಜನಸ್ಪಂದನ ಸಭೆಗಳಿಗೆ ಸಂಬಂಧಿಸಿದ ಮಾಹಿತಿಯನ್ನೂ ಸಿದ್ಧಪಡಿಸಿಕೊಂಡು ಸಂಬಂಧಿತ ಅಧಿಕಾರಿಗಳು ಸಭೆಗೆ ಹಾಜರಾಗಬೇಕು ಎಂದರು.ಮುಖ್ಯಮಂತ್ರಿಗಳ ಕಾರ್ಯಕ್ರಮದ ಸಂದರ್ಭದಲ್ಲಿ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಮುಖ್ಯಮಂತ್ರಿಗಳು ಜಿಲ್ಲೆಯ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿ ತೆರಳುವವರೆಗೆ ಯಾವುದೇ ರೀತಿಯ ಸಂಚಾರ ವ್ಯತ್ಯಯ ಉಂಟಾಗದಂತೆ ಸಂಬಂಧಿತ ಇಲಾಖೆಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮಾತನಾಡಿ, ಮುಖ್ಯಮಂತ್ರಿಗಳ ಪ್ರವಾಸದ ಸಂದರ್ಭದಲ್ಲಿ ಶಿಷ್ಟಾಚಾರ ಪಾಲನೆಗೆ ಪ್ರಮುಖ ಆದ್ಯತೆ ನೀಡಲಾಗುವುದು. ಸಂಚಾರ ವ್ಯವಸ್ಥೆ ಸುಗಮವಾಗಿರುವಂತೆ ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.ಅಪರ ಜಿಲ್ಲಾಧಿಕಾರಿ ಡಾ. ದುರುಗೇಶ್ ಕೆ.ಆರ್. ಅವರು, ವಿವಿಧ ಇಲಾಖೆಗಳ ಅಧಿಕಾರಿಗಳು ಮುಖ್ಯಮಂತ್ರಿಗಳ ಪ್ರವಾಸದ ಹಿನ್ನೆಲೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರವಾದ ಮಾಹಿತಿ ನೀಡಿದರು.ಈ ವೇಳೆ ಜಿಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರ, ಡಿಡಿಎಲ್‌ಆರ್ ಜಿ.ಜೆ. ರುದ್ರಣ್ಣಗೌಡ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಶೈಲ್ ಸೋಮನಕಟ್ಟಿ, ಡಿಡಿಪಿಐ ಆರ್.ಎಸ್. ಬುರಡಿ, ಆರ್‌ಟಿಒ ವಿಶಾಲ್, ರಾಜಾರಾಮ್ ಪವರ್, ವಸಂತ ಮಡ್ಲೂರ, ಕೊಟ್ರೇಶ್ ವಿಭೂತಿ, ಶರಣು ಗೊಗೇರಿ, ಡಾ. ಎಚ್.ಬಿ. ಹುಲಗಣ್ಣವರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.