ಬರಗಾಲ, ಸಂಭ್ರಮವಿಲ್ಲದ ಸೀಗಿ ಹುಣ್ಣಿಮೆ

| Published : Oct 28 2023, 01:15 AM IST

ಬರಗಾಲ, ಸಂಭ್ರಮವಿಲ್ಲದ ಸೀಗಿ ಹುಣ್ಣಿಮೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ಜಿಲ್ಲೆಯಲ್ಲಿ ಬರಗಾಲದಿಂದ ಬಿತ್ತನೆಯಾಗಿದ್ದ 3.27 ಲಕ್ಷ ಹೆಕ್ಟೇರ್‌ನಲ್ಲಿ 2.68 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಫಸಲು ನಳನಳಿಸುತ್ತಿದ್ದ ಈ ವೇಳೆಯಲ್ಲಿ ಎಲ್ಲೆಡೆ ಬೆಳೆ ಬಾಡಿದೆ. ಇದರಿಂದ ಸೀಗೆ ಹುಣ್ಣಿಮೆ ಆಚರಣೆ ಸಂಭ್ರಮವಿಲ್ಲದಿದ್ದರೂ ಸಾಂಪ್ರದಾಯಿಕವಾಗಿ ಆಚರಿಸಲು ರೈತರು ಅಣಿಯಾಗಿದ್ದಾರೆ. ಶನಿವಾರ ಜಿಲ್ಲೆಯಲ್ಲಿ ಸೀಗೆ ಹುಣ್ಣಿಮೆ ಆಚರಣೆ ನಡೆಯುತ್ತಿದೆ.

ಹಾವೇರಿ: ಜಿಲ್ಲೆಯಲ್ಲಿ ಬರಗಾಲದಿಂದ ಬಿತ್ತನೆಯಾಗಿದ್ದ 3.27 ಲಕ್ಷ ಹೆಕ್ಟೇರ್‌ನಲ್ಲಿ 2.68 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಫಸಲು ನಳನಳಿಸುತ್ತಿದ್ದ ಈ ವೇಳೆಯಲ್ಲಿ ಎಲ್ಲೆಡೆ ಬೆಳೆ ಬಾಡಿದೆ. ಇದರಿಂದ ಸೀಗೆ ಹುಣ್ಣಿಮೆ ಆಚರಣೆ ಸಂಭ್ರಮವಿಲ್ಲದಿದ್ದರೂ ಸಾಂಪ್ರದಾಯಿಕವಾಗಿ ಆಚರಿಸಲು ರೈತರು ಅಣಿಯಾಗಿದ್ದಾರೆ.

ಶನಿವಾರ ಜಿಲ್ಲೆಯಲ್ಲಿ ಸೀಗೆ ಹುಣ್ಣಿಮೆ ಆಚರಣೆ ನಡೆಯುತ್ತಿದೆ. ಸಮರ್ಪಕ ಮಳೆ ಆಗಿದ್ದರೆ ಸೀಗಿ ಹುಣ್ಣಿಮೆಯನ್ನು ರೈತರು ಭರ್ಜರಿಯಾಗಿಯೇ ಆಚರಿಸುತ್ತಿದ್ದರು. ಈ ಸಲ ಮಳೆ ಕೈಕೊಟ್ಟಿದ್ದರಿಂದ ಬರಡು ಭೂಮಿಗೆ ಪೂಜೆ ಸಲ್ಲಿಸಿ ಚರಗ ಚೆಲ್ಲಿ ಸೀಗಿ ಹುಣ್ಣಿಮೆ ಆಚರಿಸುವ ಸ್ಥಿತಿ ರೈತರಿಗೆ ಬಂದಿದೆ.

ಈಗ ಹಿಂಗಾರು ಮಳೆಯ ಸುಳಿವೂ ಇಲ್ಲದಿರುವುದು ರೈತರನ್ನು ಆತಂಕಕ್ಕೆ ದೂಡಿದೆ. ಇದೇ ಚಿಂತೆಯ ನಡುವೆ ರೈತರು ಭೂತಾಯಿಗೆ ಪೂಜೆ ಮಾಡುವಂತಾಗಿದೆ.

2.67 ಲಕ್ಷ ಹೆಕ್ಟೇರ್‌ ಬೆಳೆ ಹಾನಿ: ಜಿಲ್ಲೆಯಲ್ಲಿ ಮಳೆ ಕೈಕೊಟ್ಟು ಬಿತ್ತನೆ ಮಾಡಿದ್ದ ಬೆಳೆಗಳಲ್ಲಿ ಬಹುತೇಕವು ಹಾನಿಯಾಗಿದೆ. ಜಿಲ್ಲೆಯ ೮ ತಾಲೂಕುಗಳಲ್ಲಿ ಸುಮಾರು ಕೃಷಿ ಹಾಗೂ ತೋಟಗಾರಿಕೆ ಬೆಳೆ ಸೇರಿ ೨,೬೮,೯೩೯ ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಎನ್‌ಡಿಆರ್‌ಎಫ್ ಮಾರ್ಗಸೂಚಿಯನ್ವಯ ಬರೋಬ್ಬರಿ ₹೨೫೩.೬೨ ಕೋಟಿ ಮೌಲ್ಯದ ಬೆಳೆ ನಷ್ಟ ಸಂಭವಿಸಿದೆ.

ಜಿಲ್ಲೆಯಲ್ಲಿ ೩.೩೦ ಲಕ್ಷ ಹೆಕ್ಟೇರ್ ಬಿತ್ತನೆ ಕ್ಷೇತ್ರದ ಗುರಿಗೆ ಈ ಬಾರಿ ೩.೨೭ ಲಕ್ಷ ಹೆಕ್ಟೇರ್ ಬಿತ್ತನೆಯಾಗಿತ್ತು. ಮಳೆ ಕೊರತೆಯಿಂದ ಬೆಳೆಗಳು ಒಣಗಿ ಹೋದ ಪರಿಣಾಮ ರೈತರು ಬೆಳೆಗಳನ್ನು ಹರಗಿ, ಎರಡು ಮೂರು ಬಾರಿ ಬಿತ್ತನೆ ಮಾಡಿದ್ದರು. ಆದರೂ ಮಳೆಯ ತೀವ್ರ ಕೊರತೆಯಿಂದ ಬೆಳೆಗಳು ಕೆಂಪಗಾಗಿವೆ. ಪ್ರಮುಖವಾಗಿ ಮೆಕ್ಕೆಜೋಳ ಕಾಳು ಕಟ್ಟದ್ದರಿಂದ ಬಿತ್ತನೆ ಖರ್ಚು ಕೂಡ ರೈತರಿಗೆ ಸಿಗುದಂತಾಗಿದೆ.

ಕೈಕೊಟ್ಟ ಮಳೆ: ಜನವರಿಯಿಂದ ಮೇ ತಿಂಗಳವರೆಗೆ ೧೨೦ ಮಿ.ಮೀ. ವಾಡಿಕೆ ಮಳೆಗೆ ೮೩ ಮಿ.ಮೀ. ಮಳೆಯಾಗಿತ್ತು. ಶೇ. ೩೧ರಷ್ಟು ಕೊರತೆಯಾಗಿತ್ತು. ಜೂನ್ ತಿಂಗಳಲ್ಲಿ ೧೧೯ ಮಿ.ಮೀ. ವಾಡಿಕೆ ಮಳೆಗೆ ೪೮ ಮಿ.ಮೀ. ಮಳೆ ಬಿದ್ದು, ಶೇ. ೬೦ರಷ್ಟು ಮಳೆ ಕೊರತೆಯಾಯಿತು. ಇದರಿಂದ ಕೃಷಿ ಚಟುವಟಿಕೆ ಮಂದಗತಿಯಲ್ಲಿ ಸಾಗಿದವು.

ಜುಲೈನಲ್ಲಿ ೧೬೪ ಮಿ.ಮೀ. ವಾಡಿಕೆ ಮಳೆಗೆ ಬರೋಬ್ಬರಿ ೨೨೯ ಮಿ.ಮೀ. ಧಾರಾಕಾರ ಮಳೆ ಸುರಿಯಿತು. ಆಗ ಕೃಷಿ ಚಟುವಟಿಕೆ ಗರಿಗೆದರಿ ರೈತರ ಮುಖದಲ್ಲಿ ಮಂದಹಾಸ ಮೂಡಿತ್ತು. ಬಿತ್ತನೆ ಬೀಜಗಳು ಚಿಗುರಿ, ಹುಲುಸಾಗಿ ಬೆಳೆಯುವ ಹೊತ್ತಿನಲ್ಲಿ ಮಳೆ ಕೈಕೊಟ್ಟಿತು. ಆಗಸ್ಟ್‌ನಲ್ಲಿ ೧೨೭ ಮಿ.ಮೀ. ವಾಡಿಕೆ ಮಳೆಗೆ ಕೇವಲ ೨೭ ಮಿ.ಮೀ. ಮಳೆಯಾದ ಕಾರಣ ಬೆಳೆಗಳು ಒಣಗಿದವು. ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರು ಕೈಸುಟ್ಟು ಕೊಳ್ಳುವಂತಾಗಿದೆ.

ಸೆಪ್ಟೆಂಬರ್ ತಿಂಗಳಲ್ಲಿ ೧೦೭ ಮಿ.ಮೀ. ವಾಡಿಕೆ ಮಳೆಗೆ ಕೇವಲ ೩೯ ಮಿ.ಮೀ. ಮಳೆಯಾಗಿದ್ದು, ಶೇ. ೬೩ರಷ್ಟು ಮಳೆ ಕೊರತೆಯಾಗಿದೆ. ಅಕ್ಟೋಬರ್‌ನಲ್ಲಿ ಹನಿ ಮಳೆಯೂ ಸುರಿದಿಲ್ಲ.

ಸಂಪೂರ್ಣ ಜಿಲ್ಲೆ ಬರಪೀಡಿತ: ಮಳೆ ಕೈಕೊಟ್ಟ ಹಿನ್ನೆಲೆ ಜಿಲ್ಲೆಯಲ್ಲಿ ಬೆಳೆಗಳು ನೆಲಕಚ್ಚಿದ್ದರಿಂದ ರೈತರು ಆತಂಕಗೊಂಡಿದ್ದರು. ಸರ್ಕಾರ ಮೊದಲ ಹಂತದಲ್ಲಿ ಜಿಲ್ಲೆಯ ಹಾವೇರಿ, ಸವಣೂರು, ರಾಣಿಬೆನ್ನೂರು, ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು. ಎರಡನೇ ಹಂತದಲ್ಲಿ ಹಾನಗಲ್ಲ, ಶಿಗ್ಗಾಂವಿ ಹಾಗೂ ಬ್ಯಾಡಗಿ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ.

ಪರಿಹಾರ ಹೆಚ್ಚಿಸಿ: ಕೃಷಿ ಇಲಾಖೆ ನಡೆಸಿದ ಸಮೀಕ್ಷೆ ನಿಖರವಾಗಿಲ್ಲ. ಬೀಜ, ಗೊಬ್ಬರದ ದರಗಳು ನಾಲ್ಕು ಪಟ್ಟು ಹೆಚ್ಚಾಗಿವೆ. ಆದರೆ, ಪರಿಹಾರ ಮಾತ್ರ ಹೆಚ್ಚಳವಾಗಿಲ್ಲ. ಬೆಳೆದ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ದರ ಸಿಗುತ್ತಿಲ್ಲ. ದೇಶದಲ್ಲಿ ಶೇ. ೭೨ರಷ್ಟಿದ್ದ ಒಕ್ಕಲುತನ, ಶೇ. ೪೨ಕ್ಕೆ ಇಳಿದಿದೆ. ಯುವಕರು ಕೃಷಿಯತ್ತ ನಿರಾಸಕ್ತಿ ತೋರುತ್ತಿದ್ದಾರೆ. ಯಾವುದೇ ಪಕ್ಷ ಆಡಳಿತಕ್ಕೆ ಬಂದರೂ, ರೈತ ವಿರೋಧಿ ಧೋರಣೆ ಅನುಸರಿಸುತ್ತವೆ. ಎನ್‌ಡಿಆರ್‌ಎಫ್ ನಿಯಮಗಳನ್ನು ಸಡಿಲಿಸಿ, ಸಂಕಷ್ಟದಲ್ಲಿರುವ ರೈತರಿಗೆ ಹೆಚ್ಚಿನ ನೆರವು ನೀಡಬೇಕು ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸಿದ್ದಾರೆ. ಬೆಳೆ ಹಾನಿ (ಹೆಕ್ಟೇರ್‌ಗಳಲ್ಲಿ): ಹಾವೇರಿ ತಾಲೂಕಿನಲ್ಲಿ ೪೩೯೮೫, ಸವಣೂರು ತಾಲೂಕಿನಲ್ಲಿ ೩೫೨೨೭ ಹೆಕ್ಟೇರ್‌, ಹಿರೇಕೆರೂರು ೨೩೯೦೪, ರಾಣಿಬೆನ್ನೂರು ತಾಲೂಕಿನಲ್ಲಿ ೪೩೧೭೮ ಹೆಕ್ಟೇರ್‌, ರಟ್ಟೀಹಳ್ಳಿ ತಾಲೂಕಿನಲ್ಲಿ ೨೨೫೩೧, ಹಾನಗಲ್ಲ ೩೮೮೫೯, ಬ್ಯಾಡಗಿ ೨೭೫೪೪ ಹಾಗೂ ಶಿಗ್ಗಾಂವಿ ತಾಲೂಕಿನಲ್ಲಿ ೩೩೭೧೦ ಸೇರಿದಂತೆ ಒಟ್ಟು ೨೬೪೪೭೭ ಹೆಕ್ಟೇರ್‌ ಕೃಷಿ ಬೆಳೆ, ೪೪೬೨ ಹೆಕ್ಟೇರ್‌ ತೋಟಗಾರಿಕಾ ಬೆಳೆ ಹಾನಿಯಾಗಿದೆ.