ರಾಜ್ಯದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ಇರುವುದರಿಂದ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ್ ಹೇಳಿದರು.
ಹಿರೇಕೆರೂರು: ರಾಜ್ಯದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ಇರುವುದರಿಂದ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ್ ಹೇಳಿದರು.
ತಾಲೂಕಿನ ಭೋಗಾವಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಸರ್ಕಾರವು ರೈತರಿಗೆ ರು. 2,500 ಪರಿಹಾರ ನೀಡಲು ನಿರ್ಧರಿಸಿರುವುದು ಸಾಕಾಗುವುದಿಲ್ಲ. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ರೈತರಿಗೆ ರು. 25,000ದಿಂದ ರು. 30,000ದವರೆಗೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಹಾವೇರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿದರೂ ರೈತರಿಗೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕು ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ರೈತ ಮುಖಂಡ ಮಾಲತೇಶ ಪೂಜಾರ್ ಮಾತನಾಡಿ, ಪ್ರತಿಯೊಂದು ಗ್ರಾಮದಲ್ಲಿಯೂ ರೈತ ಸಂಘದ ಘಟಕಗಳನ್ನು ಸ್ಥಾಪಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ರೈತ ಸಂಘದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಘಟಿತ ಹೋರಾಟ ಅಗತ್ಯವಾಗಿದೆ. ಇಲ್ಲವಾದಲ್ಲಿ ಕೃಷಿ ಕ್ಷೇತ್ರವು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ರೈತ ಮುಖಂಡ ಪರಮೇಶಪ್ಪ ಬಾವಿ, ತಾಲೂಕು ಅಧ್ಯಕ್ಷ ಪ್ರಭುಗೌಡ ಪ್ಯಾಟಿ, ಗಂಗನಗೌಡ, ಮದಿಗೌಡರ,ಈರಪ್ಪ, ಮಲ್ಲೂರು, ಪರಮೇಶ ಪಾಟೀಲ್, ಯಶವಂತ್ ತಿಮ್ಮಕಾಪುರ, ಶಾಂತನಗೌಡ ಪಾಟೀಲ್, ವೀರೇಶ್ ಪೂಜಾರ್, ನವೀನ್ ಹುಲ್ಲತ್ತಿ ಸೇರಿದಂತೆ ಭೋಗಾವಿ ಗ್ರಾಮ ಘಟಕದ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.