ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ: ಡಾ.ಪ್ರಸನ್ನಕುಮಾರ್

| Published : Jul 07 2025, 11:48 PM IST

ಸಾರಾಂಶ

ತರೀಕೆರೆ, ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಉಂಟಾಗುತ್ತದೆ ಎಂದು ರಂಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಪ್ರಸನ್ನಕುಮಾರ್ ಹೇಳಿದರು.

- ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸೇವನೆ, ಅಕ್ರಮ ಕಳ್ಳಸಾಕಾಣಿಕೆ ವಿರೋಧಿ ದಿನಾಚರಣೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಉಂಟಾಗುತ್ತದೆ ಎಂದು ರಂಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಪ್ರಸನ್ನಕುಮಾರ್ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಮೀಪದ ಬಾವಿಕೆರೆ ಗ್ರಾಮದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಕಳ್ಳಸಾಕಾಣಿಕೆ ವಿರೋಧಿ ದಿನಾಚರಣೆ ಯಲ್ಲಿ ಮಾತನಾಡಿದರು. ಅಮಲು ಬರಿಸುವ ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯೊಬ್ಬ ದೈಹಿಕ ಹಾಗೂ ಮಾನಸಿಕ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚು, ಇದರಿಂದ ಆರ್ಥಿಕವಾಗಿ ದಿವಾಳಿಯಾಗಿ ಕುಟುಂಬ ಮತ್ತು ಸಮಾಜದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂದರು.

ವಿಶ್ವದಾದ್ಯಂತ ಮಾದಕ ವಸ್ತು ಜಾಲಕ್ಕೆ ಮಕ್ಕಳು ಮತ್ತು ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಭವಿಷ್ಯ ಮುಖ್ಯ ಆದರೆ ಮಾದಕ ವಸ್ತು ಸೇವನೆಯಿಂದ ವ್ಯಕ್ತಿಯ ಮೆದುಳು, ದೇಹ, ಮಾನಸಿನ ಆರೋಗ್ಯ ಹಾಗೂ ಸಾಮಾಜಿಕ ಬದುಕಿಗೂ ಮಾರಕವಾಗಿದೆ ಎಂದು ಹೇಳಿದರು.ಆರಂಭದಲ್ಲಿ ಕುತೂಹಲ ಅಥವಾ ಕಡಿಮೆ ಬೆಲೆಗೆ ಸಿಗುವ ಪಾನ್ ವಸ್ತುಗಳ ಸೇವನೆ ಕೊನೆಗೆ ಮಾರಕ ಗಾಂಜಾ, ಅಫೀಮು, ಕೊಕೇನ್ ದಾಸರನ್ನಾಗಿಸುತ್ತದೆ. ಇದು ಇನ್ನು ಹೆಚ್ಚು ಸೇವಿಸುವಂತೆ ಪ್ರೇರೆಪಿಸಿ ಕೊನೆಗೆ ವ್ಯಸನಿಗಳನ್ನಾಗಿಸುತ್ತದೆ, ಅಪರಾಧ ಕೃತ್ಯಗಳಿಗೆ ಪ್ರಚೋದನೆ ನೀಡುವ ಈ ವ್ಯಸನ ಅಪಘಾತಗಳಿಗೆ ಕಾರಣವಾಗುವುದು ಎಂದು ಹೇಳಿದರು. ಯೂನಿಯನ್ ಬ್ಯಾಂಕ್ ಸಾಕ್ಷರತಾ ಅಧಿಕಾರಿ ಜಯಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಾತು ಮಾದಕ ವಸ್ತುಗಳ ವಿರೋಧಿ ದಿನವನ್ನು ಅನೇಕ ರಾಷ್ಟ್ರಗಳಲ್ಲಿ ಆಚರಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ತಾಲೂಕು ಯೋಜನಾಧಿಕಾರಿ ಕುಸುಮಾಧರ್ ಮಾತನಾಡಿ ಯೋಜನೆ ತಾಲೂಕಿನ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಅರಿವು ಮೂಡಿಸುವ ಅಂಗವಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಜನ ಜಾಗೃತಿ ಕಾರ್ಯಕ್ರಮ ಮೂಲಕ ಶಿಬಿರ ಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.ಪಾಲಿಟೆಕ್ನಿಕ್ ಕಾಲೇಜಿನ ಹಿರಿಯ ಉಪನ್ಯಾಸಕಿ ಮಮತಾ, ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತಾ, ಶಾಲಾ ಮಕ್ಕಳು ಉಪಸ್ಥಿತರಿದ್ದರು,-

7ಕೆಟಿಆರ್.ಕೆ.2ಃ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಮೀಪದ ಬಾವಿಕೆರೆ ಗ್ರಾಮದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಕಳ್ಳಸಾಕಾಣಿಕೆ ವಿರೋಧಿ ದಿನಾಚರಣೆ ನಡೆಯಿತು.