ದ.ಕ. ಜಿ.ಪಂ. ನೇತ್ರಾವತಿ ಸಂಭಾಗಣದಲ್ಲಿ ಬುಧವಾರ ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದರಲ್ಲೂ ಮಂಗಳೂರು ಭಾಗದ ಶಾಲೆ, ಕಾಲೇಜುಗಳಲ್ಲಿ ಹದಿಹರೆಯದ ಮಕ್ಕಳು ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವುದು ಬಹಳ ಕಳವಳಕಾರಿ. ವಿಶೇಷವಾಗಿ ವೈದ್ಯಕೀಯ ಶಿಕ್ಷಣ ಪಡೆದ ವಿದ್ಯಾರ್ಥಿಗಳೇ ಇಂತಹ ದುಶ್ಚಟಕ್ಕೆ ಗುರಿಯಾಗಿ ಜೈಲು ಸೇರುತ್ತಿರುವುದು ಬೇಸರ ತರಿಸುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್‌ ನ್ಯಾಯಾಧೀಶೆ ಶೋಭಾ ಬಿ.ಜಿ. ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ಜಿಲ್ಲಾ ಪೊಲೀಸ್‌ ಇಲಾಖೆ, ಜಿಲ್ಲಾ ಮಹಿಳಾ ಮತ್ತು ಪುನರ್‌ವಸತಿ ಕೇಂದ್ರ ಬಜಾಲ್‌ ಸಂಯುಕ್ತ ಆಶ್ರಯದಲ್ಲಿ ದ.ಕ. ಜಿ.ಪಂ. ನೇತ್ರಾವತಿ ಸಂಭಾಗಣದಲ್ಲಿ ಬುಧವಾರ ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾದಕ ವ್ಯಸನ ತಡೆಗಟ್ಟುವಲ್ಲಿ ತಂದೆ ತಾಯಿಗಿಂತ ಹೆಚ್ಚಾಗಿ ಶಿಕ್ಷಕರ ಪಾತ್ರ ಬಹಳ ದೊಡ್ಡದು. ಶಾಲೆ ಕಾಲೇಜು ವಿದ್ಯಾರ್ಥಿಗಳ ಚಲನವಲನಗಳಲ್ಲಿ ಬದಲಾವಣೆ ಆದರೆ ಶಿಕ್ಷಕರು ಸುಲಭವಾಗಿ ಗುರುತಿಸುತ್ತಾರೆ. ಈ ವಿಚಾರದಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು ಎಂದರು.

ಮುಖ್ಯ ಅತಿಥಿ, ಜಿಲ್ಲಾ ವೈದ್ಯಕೀಯ ಅಧೀಕ್ಷಕಿ ಡಾ. ಜೆಸಿಂತಾ ಡಿಸೋಜ, ಜಿಲ್ಲಾ ಮಹಿಳಾ ಮತ್ತು ಪುನರ್ವಸತಿ ಕೇಂದ್ರ ಬಜಾಲ್‌ ಮಂಗಳೂರು ಇದರ ಆಡಳಿತಾಧಿಕಾರಿ ಲಿಡಿಯಾ ಲೋಬೋ, ಡಯಟ್‌ನ ಅಧಿಕಾರಿ ಅಲ್ವಿನ್‌ ಅಂದ್ರಾದೆ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಎಸಿಪಿ ದಿನೇಶ್‌ ಕುಮಾರ್‌ ಪ್ರತಿಜ್ಞಾ ವಿಧಿ ಬೋಧಿಸಿ, ಮಾದಕ ವ್ಯಸನ ಹಾಗೂ ಅಕ್ರಮ ಕಳ್ಳ ಸಾಗಾಣಿಕೆ ನಿಯಂತ್ರಣ ಕೇವಲ ಪೊಲೀಸ್‌ ಇಲಾಖೆ ಮಾತ್ರವಲ್ಲ, ಪ್ರತಿಯೊಬ್ಬರ ಜವಾಬ್ದಾರಿ. ಇಲಾಖೆ ಜತೆ ಎಲ್ಲರೂ ಕೈಜೋಡಿಸಬೇಕು ಎಂದರು.

ಲಿಂಕ್‌ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದ ಅಧ್ಯಕ್ಷ ಡಾ.ಸತೀಶ್‌ ರಾವ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಉಸ್ಮಾನ್‌ ಎ., ಪಿಯುಡಿಡಿ ಜಯಣ್ಣ, ಡಿಡಿಪಿಐ ವೆಂಕಟೇಶ ಎಸ್‌. ಪಟಗಾರ್‌, ಪದವಿ ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿ ಶ್ರೀದೇವಿ ಪ್ರಸಾದ್‌, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಸುದರ್ಶನ್‌ ಇದ್ದರು. ಡಿಎಚ್‌ಒ ಡಾ.ಎಚ್‌.ಆರ್‌. ತಿಮ್ಮಯ್ಯ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ ಉಳೆಪಾಡಿ ನಿರೂಪಿಸಿದರು.