ಮಾದಕ ವಸ್ತು ಸೇವನೆಯಿಂದ ಅಮೂಲ್ಯ ಜೀವನ ಹಾಳು

| Published : Nov 14 2025, 03:30 AM IST

ಸಾರಾಂಶ

ಮಾದಕ ವಸ್ತುಗಳ ಬಳಕೆ ಮನುಷ್ಯನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಜತೆಗೆ ನೆರೆಹೊರೆಯ ವಾತಾವರಣ ಕಲುಷಿತಗೊಳಿಸುತ್ತದೆ

ಕುಷ್ಟಗಿ: ಮಾದಕ ವಸ್ತು ಸೇವನೆಯಿಂದ ಯುವಜನರು ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಿದ್ದು, ಇದು ಸಮಾಜ,ದೇಶದ ಅಭಿವೃದ್ಧಿಗೆ ಮಾರಕ ಎಂದು ಡಿವೈಎಸ್ಪಿ ಜೆ ನ್ಯಾಮಗೌಡ್ರ ಹೇಳಿದರು.

ಪಟ್ಟಣದ ಬಸವ ಭವನದಲ್ಲಿ ಕುಷ್ಟಗಿ ಪೊಲೀಸ್‌ ಇಲಾಖೆಯಿಂದ ನಡೆದ ಮಾದಕ ವಸ್ತು ನಿಷೇಧ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಯುವ ಜನತೆ ಮಾದಕ ವಸ್ತುಗಳ ಸೇವನೆಯಿಂದ ತಮ್ಮ ಕುಟುಂಬವನ್ನೂ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ. ದೃಢ ನಿರ್ಧಾರದ ಮೂಲಕ ಮಾದಕ ವಸ್ತು ಸೇವನೆಯಿಂದ ದೂರ ಉಳಿದು ಆರೋಗ್ಯಯುತ ಜೀವನ ನಡೆಸಬೇಕು ಎಂದು ತಿಳಿಸಿದರು.

ಮಾದಕ ವಸ್ತುಗಳ ಬಳಕೆ ಮನುಷ್ಯನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಜತೆಗೆ ನೆರೆಹೊರೆಯ ವಾತಾವರಣ ಕಲುಷಿತಗೊಳಿಸುತ್ತದೆ.ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಬಹುತೇಕ ಅಪಘಾತಗಳು ನಡೆಯುವುದು ಮದ್ಯವ್ಯಸನದಿಂದ ಹಾಗಾಗಿ ಮಾದಕ ವಸ್ತು ದೂರವಿಟ್ಟು,ಚಟಕ್ಕೆ ಒಳಗಾಗಿರುವ ಜನರನ್ನು ಹೊರತರಲು ಸರ್ಕಾರ ರೂಪಿಸಿರುವ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದ್ದು, ಸಂಘ ಸಂಸ್ಥೆಗಳ ಜತೆಗೆ ಸಾರ್ವಜನಿಕರು ಕೈಜೋಡಿಬೇಕು ಎಂದರು.

ಸಿಪಿಐ ಯಶವಂತ ಬಿಸನಳ್ಳಿ ಮಾತನಾಡಿ, ವ್ಯಸನ ಎನ್ನುವುದು ಒಂದು ಸಂಕೀರ್ಣ ಸಮಸ್ಯೆಯಾಗಿದೆ. ತಾತ್ಕಾಲಿಕವಾಗಿ ಆನಂದ ನೀಡುವ ಮಾದಕ ದ್ರವ್ಯ ವಸ್ತುಗಳ ಅವಲಂಬನೆಗೆ ಒಳಗಾಗುವುದನ್ನು ಹೆಚ್ಚಾಗಿ ಸಮಾಜದಲ್ಲಿ ಕಾಣುತ್ತಿದ್ದೇವೆ.

ಸ್ನೇಹಿತರ ಒತ್ತಾಯ ದೈಹಿಕ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಹೀಗೆ ಅನೇಕ ಕಾರಣಗಳಿಂದ ಜನರು ಮಾದಕ ವ್ಯಸನಿಗಳಿಗೆ ದಾಸರಾಗಿದ್ದಾರೆ ಇಂತಹ ಹವ್ಯಾಸ ಬಿಟ್ಟು ಹೊರ ಬರಲಾರದ ಸ್ಥಿತಿಯಲ್ಲಿ ಬಳಲುತ್ತಿದ್ದಾರೆ. ಇದು ಅಪಾಯಕಾರಿಯಾಗಿದ್ದು ಮಾದಕ ವ್ಯಸನದಿಂದ ದೂರವಿದ್ದು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಕೈಜೋಡಿಸಬೇಕು ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಮೇಲೆ ದೌರ್ಜನ್ಯಗಳು ಕಂಡು ಬಂದಲ್ಲಿ 112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ನಿಯಂತ್ರಣ ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಕುಷ್ಟಗಿ ಪಿಎಸೈ ಹನಮಂತಪ್ಪ ತಳವಾರ, ತಾವರಗೇರಾ ಪಿಎಸೈ ಚಂದ್ರಪ್ಪ ಸೇರಿದಂತೆ ಅನ್ನದಾನೇಶ್ವರ ಕಾಲೇಜಿನ ವಿದ್ಯಾರ್ಥಿಗಳು ಇದ್ದರು. ಕಾಲೇಜು ಸಿಬ್ಬಂದಿಗಳು, ಪೊಲೀಸ್‌ ಠಾಣೆಯ ಸಿಬ್ಬಂದಿಗಳು ಇದ್ದರು.