ಮಾದಕ ವ್ಯಸನದಿಂದ ಕುಟುಂಬ ಸ್ವಾಸ್ಥ್ಯ ಹಾಳು

| Published : Aug 02 2025, 12:15 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ ದುರ್ವ್ಯಸನಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಸ್ಸು ಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಹಾಕಿ ಎಂದು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ.ಮಹಾಂತ ಶಿವಯೋಗಿಗಳು ಎಂದು ತಹಸೀಲ್ದಾರ್‌ ಕರೆಪ್ಪ ಬೆಳ್ಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ದುರ್ವ್ಯಸನಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಸ್ಸು ಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಹಾಕಿ ಎಂದು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ.ಮಹಾಂತ ಶಿವಯೋಗಿಗಳು ಎಂದು ತಹಸೀಲ್ದಾರ್‌ ಕರೆಪ್ಪ ಬೆಳ್ಳಿ ಹೇಳಿದರು.

ಪಟ್ಟಣದ ಎಚ್‌.ಜಿ.ಕಾಲೇಜ್ ಸಭಾಭವನದಲ್ಲಿ ಶುಕ್ರವಾರ ತಾಲೂಕು ಆಡಳಿತ ಹಮ್ಮಿಕೊಂಡಿರುವ ವ್ಯಸನ ಮುಕ್ತ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯ ಇಲಾಖೆಯ ಅಧಿಕಾರಿ ಎಸ್.ಡಿ.ಕುಲಕರ್ಣಿ ಮಾತನಾಡಿ, ಅಪ್ರಾಪ್ತ ವಯಸ್ಸಿನಲ್ಲಿ ಮಾದಕ ವ್ಯಸನಕ್ಕೆ ತುತ್ತಾದಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರಿ ಕಿನ್ನತೆಗೆ ಒಳಗಾಗುತ್ತಾರೆ. ಇದರಿಂದ ಮಕ್ಕಳ ಬೆಳೆವಣಿಗೆ ಕುಂಠಿತಗೊಳ್ಳುವುದಲ್ಲದೇ ಕುಟುಂಬದ ಸ್ವಾಸ್ಥ್ಯ ಹಾಳಾಗುತ್ತದೆ. ಸಾಮಾಜಿಕ, ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಸಾಧ್ಯವಾಗುವುದಿಲ್ಲ. ಉತ್ತಮ ಬದುಕಿನಡೆಗೆ ಕನಸು ಕಾಣಬೇಕೆ ಹೊರತು ಕೆಟ್ಟ ಚಟಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಮಾತನಾಡಿ, ರಾಷ್ಟ್ರದ ಭವಿಷ್ಯ ರೂಪಿಸಬೇಕಾಗಿರುವ ಯುವ ಸಮೂಹ ವ್ಯಸನಿಗಳ ಸಹವಾಸ ಹಾಗೂ ಮೋಜು ಮಸ್ತಿಗಾಗಿ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ. ವಿದ್ಯಾರ್ಥಿಗಳು, ಯುವ ಪೀಳಿಗೆ ಮಾದಕ ಪದಾರ್ಥಗಳ ಗೀಳು ಅಂಟಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ವ್ಯಸನಿಗಳಿಂದ ಆತನ ಕುಟುಂಬ ಹಾಗೂ ಸಮಾಜ ಕೂಡ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.

ಈ ವೇಳೆ ನೂತನ ತಹಸೀಲ್ದಾರ್ ಕರೆಪ್ಪ ಬೆಳ್ಳಿ ಅವರಿಗೆ ಎಚ್.ಜಿ.ಕಾಲೇಜಿನ ಪರವಾಗಿ ಸಿಬ್ಬಂದಿ ಸನ್ಮಾನಿಸಿ, ಗೌರವಿಸಿದರು. ವೇದಿಕೆ ಮೇಲೆ ಪೊಲೀಸ್ ಸಿಬ್ಬಂದಿ ವೈ.ಸಿ.ಬನಸೋಡೆ, ಶಿಕ್ಷಣ ಇಲಾಖೆಯ ಎ.ಎಸ್.ಪಾಟೀಲ್ ಇದ್ದರು.ಉಪನ್ಯಾಸಕ ಎಸ್.ಪಿ. ಬಿರಾದಾರ್ ಪ್ರತಿಜ್ಞಾವಿಧಿ ಬೋಧಿಸಿದರು.

ಉಪನ್ಯಾಸಕ ಸಿದ್ಧಲಿಂಗ ಕಿಣಗಿ ನಿರೂಪಿಸಿ, ವಂದಿಸಿದರು.ಈ ವೇಳೆ ವಿದ್ಯಾರ್ಥಿಗಳಿಂದ ವ್ಯಸನ ಮುಕ್ತ ಆಂದೋಲನದ ಜಾಥಾ ಜರುಗಿತು.