ಡ್ರಗ್ಸ್ ಬೇಟೆ ಬಿರುಸು: 7.7 ಕೋಟಿ ಮಾಲು ಜಪ್ತಿ...

| Published : Nov 19 2025, 02:45 AM IST

ಸಾರಾಂಶ

ಡ್ರಗ್ಸ್ ದಂಧೆ ವಿರುದ್ಧ ಸಿಸಿಬಿ ಕಾರ್ಯಾಚರಣೆ ಮತ್ತಷ್ಟು ಬಿರುಸುಗೊಂಡಿದ್ದು, ವಿದೇಶಿ ಮಹಿಳೆಯರು ಸೇರಿದಂತೆ 19 ಮಂದಿಯನ್ನು ಪ್ರತ್ಯೇಕವಾಗಿ ಬಂಧಿಸಿ 7.7 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಸಿಸಿಬಿ ಜಪ್ತಿ ಮಾಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಡ್ರಗ್ಸ್ ದಂಧೆ ವಿರುದ್ಧ ಸಿಸಿಬಿ ಕಾರ್ಯಾಚರಣೆ ಮತ್ತಷ್ಟು ಬಿರುಸುಗೊಂಡಿದ್ದು, ವಿದೇಶಿ ಮಹಿಳೆಯರು ಸೇರಿದಂತೆ 19 ಮಂದಿಯನ್ನು ಪ್ರತ್ಯೇಕವಾಗಿ ಬಂಧಿಸಿ 7.7 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಸಿಸಿಬಿ ಜಪ್ತಿ ಮಾಡಿದೆ.

ಸದ್ದುಗುಂಟೆಪಾಳ್ಯ, ಮಹದೇವಪುರ, ವರ್ತೂರು, ಕೆ.ಜಿ. ನಗರ ಹಾಗೂ ಹೆಬ್ಬಗೋಡಿ ಠಾಣೆಯಲ್ಲಿ ಸಿಸಿಬಿ ಡಿಸಿಪಿ-2 ರಾಜಾ ಇಮಾಮ್ ಕಾಸಿಂ ನೇತೃತ್ವದಲ್ಲಿ ಸಿಸಿಬಿ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳಿಂದ 2.804 ಕೆಜಿ ಎಂಡಿಎಂಎ, 2.1 ಕೆಜಿ, ಮೊಬೈಲ್ ಹಾಗೂ ಬೈಕ್‌ ಸೇರಿದಂತೆ ಒಟ್ಟು 7.7 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ.

ಕೇಶ ವಿನ್ಯಾಸಕಿ ಬಳಿ ಕೋಟಿ ಡ್ರಗ್ಸ್ ಪ್ರವಾಸಿ ವೀಸಾದಲ್ಲಿ ಐಟಿ ನಗರಿಗೆ ಬಂದು ಡ್ರಗ್ಸ್ ದಂಧೆಗಿಳಿದಿದ್ದ ನೈಜೀರಿಯಾ ದೇಶದ ಕೇಶ ವಿನ್ಯಾಸಕಿ ಪೊಬೈನಾ ಮುಸೈ ಸಿಸಿಬಿ ಬಲೆಗೆ ಬಿದ್ದಿದ್ದಾಳೆ. ಆರೋಪಿಯಿಂದ 4.08 ಕೋಟಿ ರು. ಮೌಲ್ಯದ ಎಂಡಿಎಂಎ ಡ್ರಗ್ಸ್ ಸಿಕ್ಕಿದೆ. ಕಳೆದ ವರ್ಷ ನಗರಕ್ಕೆ ಬಂದಿದ್ದ ಆಕೆ, ಕಮ್ಮನಹಳ್ಳಿ ಬಳಿ ನೆಲೆಸಿದ್ದಳು. ಮೊದಲು ಸಲೂನ್‌ನಲ್ಲಿ ಕೇಶ ವಿನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ಮುಸೈ, ತಾಂಜೇನಿಯಾ ಹಾಗೂ ನೈಜಿರಿಯಾದ ಇಬ್ಬರು ಸ್ನೇಹಿತರ ಜತೆ ಡ್ರಗ್ಸ್ ಮಾರಾಟಕ್ಕಿಳಿದಿದ್ದಳು. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಆಕೆಯ ಸ್ನೇಹಿತರ ಪತ್ತೆಗೆ ಸಿಸಿಬಿ ತನಿಖೆ ಮುಂದುವರೆಸಿದೆ.

ಸುದ್ದಗುಂಟೆಪಾಳ್ಯ ಠಾಣಾ ಸರಹದ್ದಿನಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಮತ್ತೊಬ್ಬ ವಿದೇಶಿ ಮಹಿಳೆ ಸಿಸಿಬಿ ಗಾಳಕ್ಕೆ ಸಿಕ್ಕಿದ್ದಾಳೆ. ನೈಜಿರಿಯಾದ ಅನ್ವುಲೆ ಮಾರ್ವೆಕಸ್‌ ಗ್ಲೋರಿ ಬಂಧಿತಳಾಗಿದ್ದು, ಆರೋಪಿಯಿಂದ 1.52 ಕೋಟಿ ರು ಮೌಲ್ಯದ ಎಂಡಿಎಂಎ ಕ್ರಿಸ್ಟೆಲ್‌ ಹಾಗೂ ಸ್ಕೂಟರ್ ಜಪ್ತಿಯಾಗಿದೆ.

ಮತ್ತೆ ವಿದೇಶಿ ಅಂಚೆ ಕಚೇರಿಯಲ್ಲಿ ಡ್ರಗ್ಸ್

ಚಾಮರಾಜಪೇಟೆಯ ವಿದೇಶಿ ಅಂಚೆ ಕಚೇರಿಯಲ್ಲಿ ಮತ್ತೆ ತಪಾಸಣೆ ನಡೆಸಿದ ಸಿಸಿಬಿ, ಅಲ್ಲಿ ವಿದೇಶದಿಂದ ಕಾನೂನು ಬಾಹಿರವಾಗಿ ಬಂದಿದ್ದ 1.5 ಕೋಟಿ ರು. ಮೌಲ್ಯದ ಒಂದೂವರೆ ಕೆ.ಜಿ ಹೈಡ್ರೋ ಗಾಂಜಾ ಜಪ್ತಿ ಮಾಡಿದ್ದಾರೆ. ಫ್ರಾನ್ಸ್‌ ಹಾಗೂ ಥಾಯ್ಲೆಂಡ್‌ನಿಂದ ಬಿಸ್ಕೆಟ್‌ ಹಾಗೂ ಚಾಕೊಲೇಟ್‌ ಪೊಟ್ಟಣಗಳಲ್ಲಿ ಅಡಗಿಸಿ ಹೈಡ್ರೋ ಗಾಂಜಾವನ್ನು ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾ ಡ್ರಗ್ಸ್ ಪಾರ್ಸಲ್ ಕಳುಹಿಸಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಇನ್ಸ್‌ಪೆಕ್ಟರ್‌ ರಕ್ಷಿತ್ ನೇತೃತ್ವದ ತಂಡ ದಾಳಿ ನಡೆಸಿ. ಈ ಡ್ರಗ್ಸ್ ಖರೀದಿಗೆ ಡಾರ್ಕ್ ವೆಬ್ ಮೂಲಕ ಬಿಟ್ ಕಾಯಿನ್ ಬಳಸಿ ವ್ಯವಹಾರ ನಡೆದಿದೆ. ಬೆಂಗಳೂರಿನ ನಕಲಿ ವಿಳಾಸ ಬಳಸಿ ಪಾರ್ಸಲ್ ಅನ್ನು ಪೆಡ್ಲರ್ ತರಿಸಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ನೇಹಿತರು ಜೈಲಿಗೆ

ಸುಲಭವಾಗಿ ಹಣ ಸಂಪಾದನೆಗೆ ಡ್ರಗ್ಸ್ ದಂಧೆಗಿಳಿದಿದ್ದ ಐವರು ಸ್ನೇಹಿತರು ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.

ಮಹದೇವಪುರ ಬಿ.ನಾರಾಯಣಪುರದ ಪ್ರವೀಣ್‌ಕುಮಾರ್‌, ಯಶವಂತ್‌, ರಾಹುಲ್‌ ಕೃಷ್ಣ, ಅಕ್ಷಯ್‌, ಸಂತೋಷ್‌ ಕುಮಾರ್‌ ಹಾಗೂ ರೋಹನ್‌ ಕುಮಾರ್‌ ಬಂಧಿತರಾಗಿದ್ದು, ಆರೋಪಿಗಳಿಂದ 60 ಲಕ್ಷ ರು.ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ.

ಎಸ್‌ಎಸ್‌ಎಲ್‌ಸಿಗೆ ಓದು ಬಿಟ್ಟಿದ್ದ ಈ ಸ್ನೇಹಿತರು, ಬೆವರು ಹರಿಸದೆ ನಿರಾಯಾಸವಾಗಿ ಹಣ ಸಂಪಾದನೆಗೆ ಡ್ರಗ್ಸ್ ಮಾರಾಟಕ್ಕಿಳಿದಿದ್ದರು. ಹೀಗೆ ಸಂಪಾದಿಸಿದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮನೆ ಮಾಲಿಕರಿಗೆ ಸಂಕಷ್ಟ: ಕಾನೂನು ಬಾಹಿರವಾಗಿ ವಿದೇಶಿ ಪ್ರಜೆಗಳಿಗೆ ಬಾಡಿಗೆ ನೀಡಿದ ಆರೋಪದ ಮೇರೆಗೆ ಇಬ್ಬರು ಮನೆ ಮಾಲಿಕರ ವಿರುದ್ಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಬ್ಬಗೋಡಿಯ ಶಿವ ರಾಮಕೃಷ್ಣ ಹಾಗೂ ಸಂಗಪ್ಪ ಪಾಟೀಲ್‌ ಅವರಿಗೆ ಸಂಕಷ್ಟ ಎದುರಾಗಿದ್ದು, ಕಾನೂನಿನ ಅನ್ವಯ ವಿದೇಶಿಗರಿಗೆ ಮನೆ ಬಾಡಿಗೆ ನೀಡಿದ ಬಳಿಕ ಸ್ಥಳೀಯ ಪೊಲೀಸರು ಹಾಗೂ ಸಕ್ಷಮ ಪ್ರಾಧಿಕಾರಗಳಿಗೆ ಮಾಹಿತಿ ನೀಡದೆ ಮನೆ ಮಾಲಿಕರು ನಿರ್ಲಕ್ಷ್ಯತನ ತೋರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

10 ಲಕ್ಷ ಗಾಂಜಾ ಜಪ್ತಿ; ಜಾಲಹಳ್ಳಿ ಹಾಗೂ ಆರ್‌ಎಂಸಿ ಯಾರ್ಡ್ ಠಾಣೆ ಪೊಲೀಸರ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಮತ್ತಿಬ್ಬರು ಡ್ರಗ್ಸ್ ದಂಧೆಕೋರರು ಸಿಕ್ಕಿಬಿದ್ದಿದ್ದಾರೆ.

ಶಿವಾಜಿನಗರದ ಮಹಮ್ಮದ್ ಅಜಂ ಹಾಗೂ ಲಿಂಗರಾಜಪುರದ ಯಾಸಿನ್ ಬಂಧಿತನಾಗಿದ್ದು, ಆರೋಪಿಗಳಿಂದ 569 ಗ್ರಾಂ ಗಾಂಜಾ, 47 ಗ್ರಾಂ ಎಂಡಿಎಂಎ ಹಾಗೂ ಬೈಕ್‌ ಅನ್ನು ಜಪ್ತಿ ಮಾಡಲಾಗಿದೆ. ಹೊರ ಜಿಲ್ಲೆಗಳಿಂದ ಡ್ರಗ್ಸ್ ಖರೀದಿಸಿ ತಂದು ನಗರದಲ್ಲಿ ಆರೋಪಿಗಳು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ರಮವಾಗಿ ನೆಲೆಸಿದ್ದ 11 ಮಂದಿ ಸೆರೆ

ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ 9 ಮಹಿಳೆಯರು ಸೇರಿದಂತೆ 11 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ವಿದೇಶಿ ಪ್ರಜೆಗಳು ಪ್ರತ್ಯೇಕವಾಗಿ ವಾಸವಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ದಾಳಿ ನಡೆಸಿದೆ. ಈ ವೇಳೆ ಏಳು ಮಂದಿ ನೈಜೀರಿಯಾ ಹಾಗೂ ಉಗಾಂಡಾ, ತಾಂಜೇನಿಯಾದ ತಲಾ ಒಬ್ಬಳು ಸೇರಿದಂತೆ 9 ಮಂದಿ ಮಹಿಳೆಯರು ಹಾಗೂ ನೈಜೀರಿಯಾ ದೇಶದ ಇಬ್ಬರು ಪುರುಷರು ಪತ್ತೆಯಾಗಿದ್ದಾರೆ.

ವಿಮಾನ ನಿಲ್ದಾಣದಲ್ಲಿ 1.34 ಕೋಟಿ ಡ್ರಗ್ಸ್

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಓರ್ವ ಪ್ರಯಾಣಿಕನನ್ನು ಬಂಧಿಸಿ 1.34 ಕೋಟಿ ರು. ಮೌಲ್ಯದ ಹೈಡ್ರೋ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಬ್ಯಾಂಕಾಂಗ್‌ನಿಂದ ಕೆಐಎಗೆ ಸೋಮವಾರ ಬಂದಿಳಿದ ಪ್ರವಾಸಿಗ ಕಸ್ಟಮ್ಸ್ ಬಲೆಗೆ ಬಿದ್ದಿದ್ದು, ಆತನಿಂದ 1.34 ಕೋಟಿ ರು. ಮೌಲ್ಯದ 3.83 ಕೆಜಿ ಗಾಂಜಾ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.