ಜನರ ಅರೋಗ್ಯದ ದೃಷ್ಟಿಯಿಂದ ಮತ್ತು ಔಷಧ ವ್ಯಾಪಾರಿಗಳು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಔಷಧ ವ್ಯಾಪಾರಿಗಳು ಅಂಗಡಿಗಳನ್ನು ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ತುಮಕೂರು ಜನರ ಅರೋಗ್ಯದ ದೃಷ್ಟಿಯಿಂದ ಮತ್ತು ಔಷಧ ವ್ಯಾಪಾರಿಗಳು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಔಷಧ ವ್ಯಾಪಾರಿಗಳು ಅಂಗಡಿಗಳನ್ನು ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮೆಡ್‌ಪ್ಲಸ್ ಮತ್ತು ಅಪೋಲೋ ಮೆಡಿಕಲ್ ಸ್ಟೋರ್‌ಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಖಾಸಗಿ ಔಷಧಿ ಅಂಗಡಿಗಳು ಬಂದ್ ಆಗಿದ್ದವು.ನಗರದ ಟೌನ್‌ಹಾಲ್ ವೃತ್ತದಲ್ಲಿ ಜಿಲ್ಲಾ ಔಷದ ವ್ಯಾಪಾರದ ಸಂಘದ ಅಧ್ಯಕ್ಷ ಎನ್. ಎಸ್ ಪಂಡಿತ್ ಜವಾಹರ್ ನೇತೃತ್ವದಲ್ಲಿ ಸಮಾವೇಶಗೊಂಡ ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿದರು. ಔಷಧ ವ್ಯಾಪಾರವು ಇಂದು ಅನಿರೀಕ್ಷಿತ ಸಂಕಷ್ಟಗಳನ್ನು ಎದುರಿಸುತ್ತಿದೆ, ಇದನ್ನು ಸರಿಪಡಿಸಲು ಸರ್ಕಾರದ ಮೇಲೆ ಒತ್ತಡ ಹೇರುವುದು ಅತ್ಯಗತ್ಯವಾಗಿದೆ. ಹಾಗಾಗಿ ಇಂದು ಔಷಧ ವ್ಯಾಪಾರ ಬಂದ್ ಮಾಡಿ ಮುಷ್ಕರ ನಡೆಸಲಾಗುತ್ತಿದೆ. ಸರ್ಕಾರ ಅಮೆಜಾನ್, ಸ್ವಿಗ್ಗಿ, ಫ್ಲಿಪ್‌ಕಾರ್ಟ್ ಸೇರಿದಂತೆ ಹಲವು ಆನ್‌ಲೈನ್ ವೇದಿಕೆಗಳಿಗೆ ಔಷಧ ಮಾರಾಟ ಲೈಸೆನ್ಸ್ ನೀಡಿದೆ. ಆನ್‌ಲೈನ್ ಮೂಲಕ ಔಷಧಗಳು ಸುಲಭವಾಗಿ ಯುವ ಜನತೆಗೆ ತಲುಪುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಆನ್‌ಲೈನ್ ಮೂಲಕ ನಡೆಯುತ್ತಿರುವ ಔಷಧ ವ್ಯಾಪಾರವನ್ನು ತಕ್ಷಣ ನಿಲ್ಲಿಸಬೇಕು.ಕೋವಿಡ್ ಅವಧಿಯಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ್ದ ಜಿ.ಎಸ್.ಆರ್ 817 (20-08-2018) ಹಾಗೂ ಜಿ.ಎಸ್.ಆರ್ 220 (26-03-2020) ಆದೇಶಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಆ್ಯಕ್ಟ್ ಹಾಗೂ ಔಷಧ ಬೆಲೆ ನಿಯಂತ್ರಣ ಕಾನೂನುಗಳಡಿ ಔಷಧ ವ್ಯಾಪಾರಿಗಳಿಗೆ ಶೇ. ೧೬ ರಷ್ಟು ಲಾಭಾಂಶ ನಿಗದಿಯಾಗಿದ್ದು, ಖರ್ಚು ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆ ಮಾರ್ಜಿನ್ ಹೆಚ್ಚಿಸಬೇಕು ಎಂದು ಔಷಧ ವ್ಯಾಪಾರಿಗಳು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.ಮೂಲ ಕಂಪನಿಗಳ ಔಷಧಗಳಿಗೆ ಹೋಲುವಂತೆ ನಕಲಿ ಔಷಧ ತಯಾರಿಸಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದು, ಇವು ಆರೋಗ್ಯಕ್ಕೆ ಗಂಭೀರ ಹಾನಿ ಉಂಟು ಮಾಡುತ್ತಿವೆ. ಇಂತಹ ಔಷಧಗಳಿಂದ ಕಿಡ್ನಿ, ಹೃದಯ ಸೇರಿದಂತೆ ಹಲವು ಅಂಗಾಂಗಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಸ್ಪೂರಿಯಸ್ ಡ್ರಗ್ಸಗಳ ನಿಯಂತ್ರಣ ಹಾಗೂ ಸುರಕ್ಷಿತ ಔಷಧ ವಿತರಣೆಗಾಗಿ ಕೇಂದ್ರ ಸರ್ಕಾರ ಕಠಿಣ ಮತ್ತು ಸರಳ ಕಾನೂನು ಜಾರಿಗೆ ತರಬೇಕು ಎಂದರು.ಔಷಧ ವ್ಯಾಪಾರಿಗಳು ಸಾರ್ವಜನಿಕರಿಗೆ ಮತ್ತು ರೋಗಿಗಳಿಗೆ ತೊಂದರೆ ನೀಡುವ ಉದ್ದೇಶ ಹೊಂದಿಲ್ಲ, ಆದರೆ ತಮ್ಮ ಅಸ್ತಿತ್ವ ಮತ್ತು ಸಮಾಜದ ಹಿತದೃಷ್ಟಿಯಿಂದ ಈ ಹೋರಾಟ ಅನಿವಾರ್ಯವಾಗಿದೆ ಎಂದರು. ಔಷಧ ವ್ಯಾಪಾರಿಗಳ ಮುಷ್ಕರದ ಮಾಹಿತಿ ತಿಳಿಯದ ರೋಗಿಗಳು ಹಾಗೂ ಸಾರ್ವಜನಿಕರು ಮೆಡಿಕಲ್ ಸ್ಟೋರ್‌ಗಳಿಗೆ ಔಷಧಿ ಖರೀದಿಗಾಗಿ ತೆರಳಿ ಬಾಗಿಲು ಬಂದ್ ಆಗಿರುವುದನ್ನು ವಾಪಸ್ಸಾಗುತ್ತಿದ್ದ ದೃಶ್ಯಗಳು ಕಂಡು ಬಂದವು.ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ರಂಗಸ್ವಾಮಿ, ಕಾರ್ಯದರ್ಶಿ ವಿಜಯ್, ಜಂಟಿ ಕಾರ್ಯದರ್ಶಿ ನಾರಾಯಣಮೂರ್ತಿ, ಗೋಪಾಲ್, ರಾಮಚಂದ್ರ, ಶ್ಯಾಮ್ ಸುಂದರ್, ಸ್ವಾಮಿ ಸೇರಿದಂತೆ ಔಷಧ ವ್ಯಾಪಾರಿಗಳು ಪಾಲ್ಗೊಂಡಿದ್ದರು.