ಮಾದಕ ವಸ್ತು ಮಾರಾಟ: ನೈಜೀರಿಯಾ ವ್ಯಕ್ತಿ ಬಂಧನ

| Published : Sep 15 2024, 01:49 AM IST

ಮಾದಕ ವಸ್ತು ಮಾರಾಟ: ನೈಜೀರಿಯಾ ವ್ಯಕ್ತಿ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ನೈಜೀರಿಯಾ ವ್ಯಕ್ತಿಯನ್ನು ನಾರ್ಕೋಟಿಕ್‌ ಕಂಟ್ರೋಲ್‌ ಬ್ಯೂರೋ ಅಧಿಕಾರಿಗಳ ಬಂಧಿಸಿ ಧಾರವಾಡಕ್ಕೆ ಕರೆತಂದು ಅವನು ವಾಸವಿದ್ದ ಮನೆಯನ್ನು ಪರಿಶೀಲಿಸಿದ್ದಾರೆ.

ಧಾರವಾಡ:

ಮಾದಕ ವಸ್ತು ಮಾರಾಟ ಮಾಡುತ್ತಿದ್ದ, ನಗರದಲ್ಲಿ ವಾಸವಾಗಿದ್ದ ನೈಜೀರಿಯಾ ವ್ಯಕ್ತಿಯನ್ನು ನಾರ್ಕೋಟಿಕ್‌ ಕಂಟ್ರೋಲ್‌ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳ ತಂಡ ಬಂಧಿಸಿದೆ.

ನೈಜೀರಿಯಾ ಮೂಲದ ಈ ವ್ಯಕ್ತಿ ತನ್ನ ಹೆಸರನ್ನು ಮಾರ್ಟಿನ್‌, ಮ್ಯಾಥ್‌, ಟೀನ್‌ ಎಂದು ಹೇಳಿದ್ದಾನೆ. ಈತನನ್ನು ಬೇರೆಡೆಯಿಂದ ಬಂಧಿಸಿ ಧಾರವಾಡಕ್ಕೆ ಕರೆತರಲಾಗಿದೆ. ಧಾರವಾಡದ ರೈಲ್ವೆ ನಿಲ್ದಾಣದ ಬಳಿ ಮಾಳಮಡ್ಡಿ ಬಡಾವಣೆಯೊಂದರಲ್ಲಿ ಹಲವು ವರ್ಷಗಳಿಂದ ವಾಸವಾಗಿದ್ದ. ಹೆಣ್ಣು ಮಕ್ಕಳ ಪರ್ಸ್‌ ಮಾರಾಟ ಮಾಡುವ ನೆಪದಲ್ಲಿ ಕೋಕೆನ್‌ ಪ್ಯಾಕ್‌ ಮಾಡಿ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಈತನ ನಡವಳಿಕೆ ಬಗ್ಗೆ ಸಂಶಯ ಪಟ್ಟಿರುವ ಅಧಿಕಾರಿಗಳ ತಂಡ ಆತ ವಾಸವಾಗಿದ್ದ ಮನೆಯನ್ನು ಪರಿಶೀಲಿಸಿದೆ. ಮನೆಯಲ್ಲಿ ಕೋಕೆನ್‌ ತೂಕ ಮಾಡುವ ಯಂತ್ರ, ಪ್ಯಾಕಿಂಗ್‌ ಯಂತ್ರ, ಜತೆಗೆ ಹೆಣ್ಣು ಮಕ್ಕಳು ಬಳಸುವ ಅನೇಕ ಬ್ಯಾಗ್‌ಗಳು ಪತ್ತೆಯಾಗಿವೆ. ದೇಶದ ವಿವಿಧೆಡೆ ಕೋಕೆನ್‌ ಮಾರಾಟ ಮಾಡುವ ಜಾಲವನ್ನು ಈತ ಹೊಂದಿದ್ದ ಎಂದು ಮೂಲಗಳು ತಿಳಿಸಿವೆ. ಈತ ಉನ್ನತ ವ್ಯಾಸಾಂಗ ಮಾಡಲು ಬಂದಿರುವುದಾಗಿ ಹೇಳಿ ಬಾಡಿಗೆ ಮನೆ ಪಡೆದಿದ್ದ. ಜತೆಗೆ ಹೆಣ್ಣು ಮಕ್ಕಳ ಪರ್ಸ್ ಮಾರಾಟ ಮಾಡುವುದಾಗಿ ತಿಳಿಸಿದ್ದ ಎಂದು ಹೇಳಲಾಗಿದೆ.

ಎನ್‌ಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿರುವ ಈ ನೈಜೇರಿಯಾ ಪ್ರಜೆಯ ಅಸಲಿ ಮುಖ ಬಯಲಾಗಿದೆ. ಕೇಂದ್ರ ಗೃಹ ಇಲಾಖೆ ಅಧೀನದಲ್ಲಿರುವ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋದ ಬೆಂಗಳೂರು ಕಚೇರಿಯ ಒಟ್ಟು 8 ಅಧಿಕಾರಿಗಳು ಈತನನ್ನು ಧಾರವಾಡಕ್ಕೆ ಕರೆತಂದು ಪರಿಶೀಲನೆ ನಡೆಸಿದ್ದಾರೆ. ಆದರೆ ಎಲ್ಲಿ ಬಂಧಿಸಲಾಗಿದೆ ಎಂಬುದನ್ನು ಅಧಿಕಾರಿಗಳ ತಂಡ ಇನ್ನೂ ತಿಳಿಸಿಲ್ಲ.