ಮಾದಕ ವಸ್ತುಗಳ ಸೇವನೆ ಅಪಾಯಕಾರಿ

| Published : Jul 07 2024, 01:20 AM IST

ಸಾರಾಂಶ

ಚಳ್ಳಕೆರೆ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಾದಕ ವಸ್ತುಗಳ ವ್ಯಸನ ಮುಕ್ತ ಸಮಾಜದ ಜಾಗೃತಿ ಅಭಿಯಾನ ನಡೆಯಿತು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಇತ್ತೀಚಿನ ದಿನಗಳಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವಸ್ತುಗಳ ಸೇವನೆಗೆ ಮುಂದಾಗಿದ್ದು, ಇದು ಸಮಾಜಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಈ ಹಿನ್ನೆಲೆಯಲ್ಲಿ ಮಾದಕ ವಸ್ತುಗಳ ಸೇವನೆಯಿಂದ ವೈಯಕ್ತಿಕ ಬದುಕು ನಾಶವಾಗುವುದಲ್ಲದೆ, ಸಮಾಜಕ್ಕೂ ಸಹ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ಉಪ ವಿಭಾಗದ ಡಿವೈಎಸ್‌ಪಿ ಟಿ.ಬಿ.ರಾಜಣ್ಣ ತಿಳಿಸಿದರು.

ಶನಿವಾರ ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕ, ಪೊಲೀಸ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ವ್ಯಸನ ಮುಕ್ತ ಸಮಾಜದ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿದ್ಯಾವಂತ ಯುವಕ, ಯುವತಿಯರು ಇಂತಹ ಜಾಗೃತಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಾದಕ ವಸ್ತುಗಳ ಚಟಕ್ಕೆ ಒಳಗಾದವರನ್ನು ಸಂಪರ್ಕಿಸಿ ಜಾಗೃತಿ ಉಂಟು ಮಾಡಬೇಕು. ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಬೇಕಾದಲ್ಲಿ ಪ್ರತಿಯೊಬ್ಬರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣಲು ಮಾದಕ ವಸ್ತುಗಳ ಸೇವನೆಗೆ ಮುಂದಾಗಬಾರದು ಎಂದರು.

ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಬಿ.ಶಾಂತಕುಮಾರಿ ಮಾತನಾಡಿ, ಎಸ್‌ಎಸ್‌ಎಲ್‌ಸಿ ಶಿಕ್ಷಣ ಮುಗಿಸಿ ಕಾಲೇಜಿಗೆ ಪಾದರ್ಪಣೆ ಮಾಡುವ ವಿದ್ಯಾರ್ಥಿಗಳು ತಮ್ಮದೆಯಾದ ಚಿಂತನೆ ಅಳವಡಿಸಿಕೊಂಡಿರುತ್ತಾರೆ. ಅವರಲ್ಲಿ ರಾಷ್ಟ್ರೀಯ ಭಾವನೆ ಜೊತೆಗೆ ಉತ್ತಮ ಸನ್ಮಾರ್ಗ ತೋರುವ ಕೆಲಸ ಆಗಬೇಕಿದೆ. ಮಾದಕ ವಸ್ತುಗಳ ವ್ಯಸನ ಮುಕ್ತ ಸಮಾಜ ನಿರ್ಮಾಣದಿಂದ ಇದು ಸಾಧ್ಯವಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಯಾರೂ ಸಹ ಇಂತಹ ದುಶ್ಚಟಕ್ಕೆ ಬಲಿಯಾಗಬಾರದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಂ.ರವೀಶ್ ಮಾತನಾಡಿ, ಪೊಲೀಸ್ ಇಲಾಖೆ ಇಂದು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆಯಿಂದ ಆಗುವ ಕೆಟ್ಟ ಪರಿಣಾಮದ ಕುರಿತು ಜಾಗೃತಿ ಮೂಡಿಸಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕ ವಸಂತಕುಮಾರ್, ಕುಮಾರಸ್ವಾಮಿ, ಪುಟ್ಟರಂಗಪ್ಪ, ಪುಪ್ಪಲತ, ಜಾನಕಮ್ಮ, ವಾಹಿದ್, ರೇಖಾ ಮುಂತಾದವರು ಉಪಸ್ಥಿತರಿದ್ದರು.