ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮೂಡಾ) ಮೈಸೂರು ನಗರವನ್ನು ಅಭಿವೃದ್ಧಿ ಪಡಿಸುತ್ತದೆ ಎಂಬ ನಂಬಿಕೆಯೇ ಮೂಢನಂಬಿಕೆ ಎಂಬ ಮಾತು ಕೇಳಿಬರುತ್ತಿದೆ!ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಎಂಡಿಎ) ಕಾನೂನಾತ್ಮಕ ಪರಿಹಾರ ಪಡೆದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡರು ಎಂಡಿಎ ಆಯುಕ್ತ ಎ.ಎನ್. ರಘುನಂದನ್ ಅವರನ್ನು ಶುಕ್ರವಾರ ಭೇಟಿಯಾಗಿ ಆಗ್ರಹಿಸಿದ್ದಾರೆ.
ದೇವನೂರು ಬಡಾವಣೆ ನಿರ್ಮಾಣದ ಸಮಯದಲ್ಲಿ ಪ್ರಾಧಿಕಾರವು ಪಾರ್ವತಿ ಅವರಿಗೆ ಸೇರಿದ 3 ಎಕರೆ 16 ಗುಂಟೆ ಜಾಗವನ್ನು ಸ್ವಾಧೀನಪಡಿಸಿಕೊಂಡಿತ್ತು. ಈ ಬಗ್ಗೆ ನಡೆದ ಪತ್ರ ವ್ಯವಹಾರದಲ್ಲಿ ಎಂಡಿಎ ಪರಿಹಾರ ನೀಡುವ ಭರವಸೆ ದೊರಕಿತ್ತು. ಅದರಂತೆ ವಿಜಯನಗರದಲ್ಲಿ 14 ಸೈಟ್ ನೀಡಿದೆ. ಇದರಲ್ಲಿ ಮುಖ್ಯಮಂತ್ರಿಗಳ ಕುಟುಂಬದ ತಪ್ಪೇನಿದೆ? ಎಂದಿದ್ದಾರೆ ಕೆಪಿಸಿಸಿ ವಕ್ತಾರ ಲಕ್ಷ್ಮಣ! (ಕನ್ನಡಪ್ರಭ 06.07.2024)ಹೌದು ಪ್ರಾಧಿಕಾರದ ಮುಂದೆ ಎಲ್ಲರೂ ಸಮಾನರು...ಕೆಲವರು ಹೆಚ್ಚು ಸಮಾನರು!
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ನಗರಾಭಿವೃದ್ಧಿಗಾಗಿ ಸಹಸ್ರಾರು ರೈತರ ಜಮೀನನ್ನು ಸ್ವಾಧೀನಪಡಿಸಿಕೊಂಡು ಪುಡಿಗಾಸು ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತದೆ. ನಂತರ ಆ ಜಮೀನನ್ನು ಬಡಾವಣೆಯಾಗಿಸಿ ನಿವೇಶನಗಳ ರೂಪದಲ್ಲಿ ಆಕಾಂಕ್ಷಿಗಳಿಗೆ ಹಂಚಿ ಹಣ ಸಂಗ್ರಹಿಸುತ್ತದೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ರೈತರ ದುಡ್ಡಿನಲ್ಲಿ ಪ್ರಾಧಿಕಾರವು ಮಜಾ ಮಾಡುತ್ತಿರುತ್ತದೆ.ಭೂಮಿ ಕಳೆದುಕೊಂಡು ಪುಡಿಗಾಸು ಪಡೆದ ಭೂಮಾಲೀಕರು ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಹೆಚ್ಚಿನ ಪರಿಹಾರವನ್ನು ಬಡ್ಡಿ ಸಹಿತ ಭೂಮಾಲೀಕರಿಗೆ ನೀಡುವಂತೆ ನ್ಯಾಯಾಲಯವು ಐತೀರ್ಪು ನೀಡಿ ದಶಕಗಳುರುಳಿದರೂ ನಯಾಪೈಸೆ ಪರಿಹಾರ ನೀಡಲು ಮೂಡಾಧಿಕಾರಿಗಳು ಮುಂದಾಗುವುದಿಲ್ಲ!
ನಗರಾಭಿವೃದ್ಧಿ ಪ್ರಾಧಿಕಾರದ ಚರಮಾಲುಗಳನ್ನು (ಕಿತ್ತು ಹೋದ ಕುರ್ಚಿ ಟೇಬಲ್) ಜಪ್ತಿ ಮಾಡುವಂತೆ ಕೋರ್ಟ್ ಆದೇಶಿಸಿದರೂ ಬಗ್ಗದೆ ಮೊಂಡಾಟ ಆಡುವ ಮೂಡಾಧಿಕಾರಿಗಳು ಭಂಡತನ ಮೆರೆಯುತ್ತಾರೆ.ನ್ಯಾಯಾಲಯದ ಆದೇಶಕ್ಕೆ ಬೆಲೆ ಕೊಡದೆ ಹೋದರೂ ನ್ಯಾಯಾಲಯವು ತಮ್ಮನ್ನು ಬಂಧಿಸಿ ಜೈಲಿಗಟ್ಟಲಾಗದು ಎಂಬ ದರ್ಪ ಮೂಡಾಧಿಕಾರಿಗಳದು.
ಎಕರೆಗಟ್ಟಲೆ ಜಮೀನು ಕಳೆದುಕೊಂಡ ಸಾಮಾನ್ಯ ಭೂಮಾಲೀಕರ ಪಾಲಿಗೆ ಪರಿಹಾರವೂ ಇಲ್ಲ... ಒಂದೇ ಒಂದು ನಿವೇಶನವೂ ಇಲ್ಲ.ಭೂಮಿ ಕಳೆದುಕೊಂಡ ಭೂಮಾಲೀಕರು ಪ್ರಾಧಿಕಾರದಿಂದ ಪರಿಹಾರ ಪಡೆಯುಷ್ಟರಲ್ಲಿ ಅವರ ಪ್ರಾಣಪಕ್ಷಿಯೇ ಹಾರಿ ಹೋಗಿರುತ್ತದೆ. ಕಾಂಚಾಣದ ಹೊರತಾಗಿ ಯಾವುದೇ ನ್ಯಾಯಾಲಯದ ಯಾವುದೇ ವಾರಂಟಿಗೆ ಮೂಡಾಧಿಕಾರಿಗಳು ಬಗ್ಗರು ಜಗ್ಗರು.
----ಫೋಟೋ- 6ಎಂವೈಎಸ್ 34- ಪಿ.ಜೆ. ರಾಘವೇಂದ್ರ
---------ಜಮೀನು ಕಳೆದುಕೊಂಡ ಸಾಮಾನ್ಯರು ದಶಕಗಳ ಕಾಲ ಕೋರ್ಟಿಗೆ ಅಲೆದೂ ಅಲೆದೂ ಅವರ ಪಾದರಕ್ಷೆ ಸವೆಯುವುದರ ಜೊತೆಗೆ ಕಾಲುಗಳೂ ಸವೆದಿದ್ದರೂ ಅವರಿಗೆ ಪರಿಹಾರವೇ ಸಿಗದಿರುವಾಗ....ಜಮೀನು ಕಳೆದುಕೊಂಡ ಅಸಾಮಾನ್ಯರು ಯಾವುದೇ ಕೋರ್ಟ್ ಕಚೇರಿಗೆ ಕಾಲಿಡದೇ ಹೋಗಿದ್ದರೂ 50:50 ಅನುಪಾತದಲ್ಲಿ ಮೂಡಾಧಿಕಾರಿಗಳು ಅಂತಹ ಅಸಾಮಾನ್ಯರಿಗೆ ನಿವೇಶನಗಳನ್ನು ಅನಾಯಾಸವಾಗಿ ನೀಡಿದ್ದಾದರೂ ಹೇಗೆ?
-ಪಿ.ಜೆ. ರಾಘವೇಂದ್ರ, ನ್ಯಾಯವಾದಿ, ಮೈಸೂರು