ನಶೆಯಲ್ಲಿ ಹೆಂಡತಿ, ಅಜ್ಜಿಯ ಕೊಲೆಗೈದ ಭೂಪ

| Published : Aug 24 2024, 01:23 AM IST

ಸಾರಾಂಶ

ಮುದಗಲ್‌ನ ಸಮುದಾಯ ಆರೋಗ್ಯ ಕೇಂದ್ರದ ವಸತಿ ಗೃಹದಲ್ಲಿ ಜೋಡಿ ಕೊಲೆ ನಡೆದ ಸ್ಥಳಕ್ಕೆ ಎಸ್‌ಪಿ ಪುಟ್ಟಮಾದಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮುದಗಲ್

ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಹೊರಗುತ್ತಿಗೆ ‘ಡಿ’ ಗ್ರೂಪ್ ಸಿಬ್ಬಂದಿಯೋರ್ವ ಪ್ರೀತಿಸಿ ಮದುವೆಯಾದ ಹೆಂಡತಿ ಹಾಗೂ ತಂದೆಯ ತಾಯಿ (ಅಜ್ಜಿ) ಯನ್ನು ಕೊಡಲಿಯಿಂದ ಹೊಡೆದು ಕೊಲೆಗೈದ ಹೃದಯ ವಿದ್ರಾವಕ ಘಟನೆ ಮುದಗಲ್ಲ ಸಮುದಾಯ ಆರೋಗ್ಯ ಕೇಂದ್ರದ ವಸತಿ ಗೃಹದಲ್ಲಿ ಶುಕ್ರವಾರ ಬೆಳಗಿನ ಜಾವ ಜರುಗಿದೆ.

ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಹಿಂದೆ ಇರುವ ಹಳೆಯ ವಸತಿ ಗೃಹಗಳಲ್ಲಿ ವಾಸವಾಗಿದ್ದ ಹೊರಗುತ್ತಿಗೆ ‘ಡಿ’ ದರ್ಜೆ ಸಿಬ್ಬಂದಿ ದುರಗಪ್ಪ ತಂದೆ ಅಮರೇಶ (27) ಹರಿಜನ ಕೊಲೆಗೈದ ಆರೋಪಿ.

ಕಳೆದ 11-12 ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದ ದುರುಗಪ್ಪ, ಕೆಲ ದುಶ್ಚಟಗಳಿಗೆ ಬಲಿಯಾಗಿದ್ದರಿಂದ ಕುಡಿದ ಮತ್ತಿನಲ್ಲಿ ಹೆಂಡತಿ ಹಾಗೂ ಅಜ್ಜಿಯನ್ನು ಕೊಡಲಿಯಿಂದ ಕುತ್ತಿಗೆ, ದೇಹದ ಕೆಲ ಭಾಗಗಳಲ್ಲಿ ಹೊಡೆದು ಕೊಲೆಗೈದಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

ಕೊಲೆಗೀಡಾದದವರು ಪತ್ನಿ ಜ್ಯೋತಿ ಗಂ.ದುರಗಪ್ಪ (23), ಅಜ್ಜಿ ದ್ಯಾಮಮ್ಮ ತಾಯಿ ಹುಲಿಗೆಮ್ಮ(65) ದುರ್ದೈವಿಗಳಾಗಿದ್ದಾರೆ.

ಕೊಲೆಗೈದ ಆರೋಪಿ ದುರ್ಗಪ್ಪ ತಪ್ಪಿಸಕೊಳ್ಳಲು ಆರೋಗ್ಯ ಕೇಂದ್ರದ ಮುಂದೆ ನೂತನವಾಗಿ ನಿರ್ಮಿಸುತ್ತಿರುವ ಇಂದಿರಾ ಕ್ಯಾಂಟಿನ್‌ ಕಟ್ಟಡದಲ್ಲಿ ಅಡಗಿ ಕುಳಿತಿದ್ದ. ಕೆಲ ಹೊತ್ತಲ್ಲೇ ಸುದ್ದಿ ತಿಳಿದ ಪೊಲೀಸರು ಆರೋಪಿಯನ್ನು ಸುಪರ್ದಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಆದರೆ ಆರೋಪಿ ಪೊಲೀಸರ ಮುಂದೆ ಹಲವು ರೀತಿಯ ಹೇಳಿಕೆ ನೀಡುತ್ತಿರುವುದು ಪೊಲೀಸರಿಗೆ ತಲೆನೋವಾಗಿದೆ.

ಘಟನಾ ಸ್ಥಳಕ್ಕೆ ರಾಯಚೂರು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಪುಟ್ಟಮಾದಯ್ಯ, ಮಸ್ಕಿ ಸಿಪಿಐ ಲಕ್ಕಂ, ಮುದಗಲ್ ಪಿಎಸ್ಐ ವೆಂಕಟೇಶ ಮಾಡಗೇರಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.