ಗದಗಿಗೆ ಹರಿದುಬಂದ ಒಣಮೆಣಸಿನಕಾಯಿ, ಪೊಲೀಸ್ ಸರ್ಪಗಾವಲಿನಲ್ಲಿ ಮಾರಾಟ

| Published : Mar 24 2024, 01:30 AM IST

ಗದಗಿಗೆ ಹರಿದುಬಂದ ಒಣಮೆಣಸಿನಕಾಯಿ, ಪೊಲೀಸ್ ಸರ್ಪಗಾವಲಿನಲ್ಲಿ ಮಾರಾಟ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತಮ ವ್ಯವಸ್ಥೆ ಇರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ನಂತರ ಅತಿ ಹೆಚ್ಚು ಮೆಣಸಿನಕಾಯಿ ಬೆಳೆಯುವ ಬಳ್ಳಾರಿ, ವಿಜಯನಗರ ಜಿಲ್ಲೆಯ ರೈತರು ಹಾಗೂ ಪಕ್ಕದ ಆಂಧ್ರದ ರೈತರು ಸಾವಿರಾರು ಸಂಖ್ಯೆಯಲ್ಲಿ ಶನಿವಾರ ಗದಗ ಎಪಿಎಂಸಿಯಲ್ಲಿ ಮಾರಾಟಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಮಾರುಕಟ್ಟೆ ತುಂಬೆಲ್ಲ ಮೆಣಸಿನಕಾಯಿ ಘಾಟು ಬಲು ಜೋರಾಗಿಯೇ ಇತ್ತು

ಶಿವಕುಮಾರ ಕುಷ್ಟಗಿ ಗದಗ

ಗದಗ ಎಪಿಎಂಸಿ ಮಾರುಕಟ್ಟೆಗೆ ಶನಿವಾರ ವ್ಯಾಪಕ ಪ್ರಮಾಣದ ಮೆಣಸಿನಕಾಯಿ ಮಾರಾಟಕ್ಕೆ ಬಂದಿದ್ದು, ಬ್ಯಾಡಗಿಯಲ್ಲಾದ ಘಟನೆಯಿಂದ ಎಚ್ಚೆತ್ತಿರುವ ಎಪಿಎಂಸಿ ಅಧಿಕಾರಿಗಳು, ಜಿಲ್ಲಾಡಳಿತ, ಪೊಲೀಸ್ ಸರ್ಪಗಾವಲಿನಲ್ಲಿ ವ್ಯಾಪಾರ ವಹಿವಾಟು ನಡೆಸಿದರು.

ಜಿಲ್ಲೆಯ ಕೆಲವು ಗ್ರಾಮಗಳ ವ್ಯಾಪ್ತಿಯಲ್ಲಿ ಅಲ್ಪ ಮಳೆಯಾಗಿರುವುದು ಹಾಗೂ ಕೊಳವೆಬಾವಿ ನೀರಾವರಿ ಆಧರಿಸಿ ರೈತರು ಮೆಣಸಿನಕಾಯಿ ಬಿತ್ತನೆ ಮಾಡಿದ್ದು, ಕೊಂಚ ಸಮಾಧಾನ ತರುವ ರೀತಿಯ ಇಳುವರಿ ಬಂದಿದೆ. ಬರಗಾಲದಲ್ಲಿ ರೈತರಿಗೆ ಮೆಣಸಿನಕಾಯಿ ಉತ್ತಮ ಆದಾಯಕ್ಕೆ ದಾರಿಯಾಗಿದೆ.

ಹೆಚ್ಚಿನ ಆವಕ: ಒಣಮೆಣಸಿನಕಾಯಿ ವಹಿವಾಟಿಗೆ ಬ್ಯಾಡಗಿಯ ನಂತರ ಗದಗ ಮಾರುಕಟ್ಟೆಯೇ ಹೆಚ್ಚು ಪ್ರಸಿದ್ಧಿ ಪಡೆದಿದೆ. ಇವೆರಡು ಮಾರುಕಟ್ಟೆಯಲ್ಲಿ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ ಎನ್ನುವುದು ವಾಡಿಕೆ. ಆದರೆ ಈಚೆಗೆ ಬ್ಯಾಡಗಿ ಮಾರುಟ್ಟೆಯಲ್ಲಿ ಒಮ್ಮೆಲೇ ದರ ಕುಸಿತವಾಗಿ ರೈತರು ರೊಚ್ಚಿಗೆದ್ದು ಎಪಿಎಂಸಿ ಕಚೇರಿಯನ್ನೇ ಧ್ವಂಸಗೊಳಿಸಿದ್ದರು. ಇದರಿಂದ ರೈತರು ಗದಗ ಮಾರುಕಟ್ಟೆಯಲ್ಲಿಯೇ ಮಾರಾಟ ಮಾಡಲು ಹೆಚ್ಚು ಉತ್ಸುಕತೆ ತೋರಿದ ಹಿನ್ನೆಲೆಯಲ್ಲಿ ಹೆಚ್ಚಿನ ಆವಕವಾಗಿದೆ.

ರೈತರ ಉಪಸ್ಥಿತಿ ಕಡ್ಡಾಯ: ಬ್ಯಾಡಗಿ ಮಾರುಕಟ್ಟೆಯಲ್ಲಿ ನಡೆದಿರುವ ಗಲಾಟೆಯಲ್ಲಿ ರೈತರ ಸೋಗಿನಲ್ಲಿ ಬಂದು ಗಲಾಟೆ ಮಾಡಿದವರನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಬ್ಯಾಡಗಿ ಮಾರುಕಟ್ಟೆಯಲ್ಲಿನ ಎಲ್ಲ ಮೆಣಸಿನಕಾಯಿ ವ್ಯಾಪಾರಸ್ಥರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಮಾ. 11 ಮತ್ತು 12ರಂದು ನಡೆದ ಘಟನೆಯ ದಿನ ಮೆಣಸಿನಕಾಯಿ ಮಾರಾಟ ಮಾಡಿದ ಪ್ರತಿಯೊಬ್ಬ ರೈತರು ಹಣ ಪಡೆಯಲು ಖುದ್ದು ಅಂಗಡಿಗೆ ಬರಬೇಕು, ಆ ಸಂದರ್ಭದಲ್ಲಿ ಪೊಲೀಸ್ ಇಲಾಖೆಯವರ ಉಪಸ್ಥಿತರಿದ್ದು, ವಿಡಿಯೋಗಳನ್ನು ತೋರಿಸುತ್ತಾರೆ, ಸಾಧ್ಯವಾದರೆ ವಿಡಿಯೋದಲ್ಲಿರುವವರ ಗುರುತು ಪತ್ತೆ ಮಾಡಬೇಕಿದೆ. ಇದು ರೈತರಲ್ಲಿ ಭಯಕ್ಕೆ ಕಾರಣವಾಗಿದೆ. ಹಾಗಾಗಿ ಸಾವಿರಾರು ಸಂಖ್ಯೆಯ ರೈತರು ಬ್ಯಾಡಗಿ ಬಿಟ್ಟು ಗದಗ ಎಪಿಎಂಸಿ ಮಾರುಕಟ್ಟೆಗೆ ಮಾರಾಟ ಮಾಡಲು ಬರುತ್ತಿದ್ದಾರೆ.

ಬಳ್ಳಾರಿ, ಆಂಧ್ರದಿಂದ ಹೆಚ್ಚು ಆವಕ: ಗದಗ ಎಪಿಎಂಸಿ ಮಾರುಕಟ್ಟೆಯೂ ಆನ್‌ಲೈನ್ ವ್ಯವಸ್ಥೆ ಹೊಂದಿದೆ, ಇದರೊಟ್ಟಿಗೆ ಬ್ಯಾಡಗಿ ಮಾರುಕಟ್ಟೆಗಿಂತ ಸಮೀಪವಾಗುತ್ತದೆ. ಉತ್ತಮ ವ್ಯವಸ್ಥೆ ಇರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ನಂತರ ಅತಿ ಹೆಚ್ಚು ಮೆಣಸಿನಕಾಯಿ ಬೆಳೆಯುವ ಬಳ್ಳಾರಿ, ವಿಜಯನಗರ ಜಿಲ್ಲೆಯ ರೈತರು ಹಾಗೂ ಪಕ್ಕದ ಆಂಧ್ರದ ರೈತರು ಸಾವಿರಾರು ಸಂಖ್ಯೆಯಲ್ಲಿ ಶನಿವಾರ ಗದಗ ಎಪಿಎಂಸಿಯಲ್ಲಿ ಮಾರಾಟಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಮಾರುಕಟ್ಟೆ ತುಂಬೆಲ್ಲ ಮೆಣಸಿನಕಾಯಿ ಘಾಟು ಬಲು ಜೋರಾಗಿಯೇ ಇತ್ತು.

ಪೊಲೀಸ್ ಸರ್ಪಗಾವಲು: ಮೆಣಸಿನಕಾಯಿ ದರದಲ್ಲಿ ವ್ಯತ್ಯಾಸವಾಗುವುದು ಸಾಮಾನ್ಯ, ಆದರೆ ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ರೈತರಿಗೆ ಅದು ಅಸಹನೀಯವಾಗಿರುತ್ತದೆ. ಇದು ಸಹಜವಾಗಿಯೇ ಅವರಲ್ಲಿ ಆಕ್ರೋಶಕ್ಕೆ ಕಾರಣವಾಗಿ ಬ್ಯಾಡಗಿ ಮಾರುಕಟ್ಟೆಯಲ್ಲಿ ನಡೆದಂತಹ ಘಟನೆಗಳು ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಪೊಲೀಸ್ ಇಲಾಖೆ ಸರ್ಪಗಾವಲು ಹಾಕಿದ್ದು, ಆಗಾಗ್ಗೆ ಎಪಿಎಂಸಿಗೆ ಭೇಟಿ ನೀಡುತ್ತಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿಯೇ ಶನಿವಾರ ವ್ಯಾಪಾರ ವಹಿವಾಟು ನಡೆದಿದ್ದು ವಿಶೇಷ.

ರಾತ್ರಿಯಾದರೂ ಮುಗಿಯದ ಲೆಕ್ಕಾಚಾರ: ಗದಗ ಎಪಿಎಂಸಿ ಮಾರುಕಟ್ಟೆಗೆ ಶುಕ್ರವಾರ ರಾತ್ರಿಯಿಂದಲೇ ಮೆಣಸಿನಕಾಯಿ ಹರಿದು ಬರುತ್ತಿದ್ದು, ಶನಿವಾರ ಮಧ್ಯಾಹ್ನದ ವರೆಗೂ ಮಾರುಕಟ್ಟೆಗೆ ಆವಕವಾಗಿದ್ದು, ಅಧಿಕಾರಿಗಳು ರಾತ್ರಿಯಾದರೂ ಆವಕದ ಲೆಕ್ಕಾಚಾರದಲ್ಲಿ ಮಗ್ನರಾಗಿದ್ದರು.