ಸಾರಾಂಶ
ಬುಧವಾರದ ಹರಾಜು ಕ್ವಿಂಟಾಲ್ ಕೊಬ್ಬರಿಗೆ ರು. 17 ಸಾವಿರ ದಾಟಿ ಮಾರಾಟವಾಗುವ ಮೂಲಕ ಕೊಬ್ಬರಿ ಬೆಳೆಗಾರರ ಮುಖದಲ್ಲಿ ತುಸು ಮಂದಹಾಸ ಮೂಡಿಸಿದೆ.
ಬಿ. ರಂಗಸ್ವಾಮಿ
ತಿಪಟೂರು : ಒಣ ಹಾಗೂ ಸಿಹಿ ಕೊಬ್ಬರಿಗೆ ಏಷ್ಯಾದಲ್ಲಿಯೇ ಖ್ಯಾತಿ ಹೊಂದಿರುವ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರಸಿದ್ದ ತಿಪಟೂರು ಕೊಬ್ಬರಿ ಬೆಲೆ ಕಳೆದ 2 ವರ್ಷಗಳಿಂದ ರು.8ರಿಂದ12 ಸಾವಿರದೊಳಗಡೆ ಕುಸಿದು ತೆಂಗು ಬೆಳೆಗಾರರಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದು ಒಂದು ಕಡೆಯಾದರೆ, ಕಳೆದ ಎರಡು ತಿಂಗಳಿಂದೀಚೆಗೆ ನಿಧಾನವಾಗಿ ಬೆಲೆ ಚೇತರಿಕೆ ಕಂಡು ಇಂದು ಬುಧವಾರದ ಹರಾಜು ಕ್ವಿಂಟಾಲ್ ಕೊಬ್ಬರಿಗೆ ರು.17 ಸಾವಿರ ದಾಟಿ ಮಾರಾಟವಾಗುವ ಮೂಲಕ ಕೊಬ್ಬರಿ ಬೆಳೆಗಾರರ ಮುಖದಲ್ಲಿ ತುಸು ಮಂದಹಾಸ ಮೂಡಿಸಿದೆ.
ಕಳೆದ ೨ವರ್ಷಗಳಿಂದ ಕೊಬ್ಬರಿ ಬೆಲೆ ತೀವ್ರ ಕುಸಿತ ಕಂಡಿದ್ದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಕೊಬ್ಬರಿ ಬೆಂಬಲ ಬೆಲೆ ಹೆಚ್ಚು ಮಾಡುವಂತೆ ಸಾಕಷ್ಟು ಹೋರಾಟ ಹಾಗೂ ಬಂದ್ ಸಹ ಆಚರಿಸಲಾಗಿತ್ತು. ನಂತರ ಹೋರಾಟಗಳ ಫಲವಾಗಿ ಕಳೆದ ವರ್ಷ ಕೇಂದ್ರ ಸರ್ಕಾರ ಕ್ವಿಂಟಾಲ್ ಕೊಬ್ಬರಿಗೆ ರು. ೧೨ಸಾವಿರ ಬೆಂಬಲ ಬೆಲೆ ಘೋಷಿಸಿ ನಫೆಡ್ ಮೂಲಕ ರೈತರಿಂದ ಒಟ್ಟು ಉತ್ಪನ್ನದ ಶೇ.೨೫ರಷ್ಟು ಕೊಬ್ಬರಿ ಕೊಳ್ಳುವ ವ್ಯವಸ್ಥೆ ಮಾಡಿತು. ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರವೂ ಸಹ ಕ್ವಿಂಟಾಲ್ ಕೊಬ್ಬರಿಗೆ ರು. 1500 ಪ್ರೋತ್ಸಾಹ ಬೆಲೆ ನೀಡುವ ಮೂಲಕ ಕ್ವಿಂಟಾಲ್ ಕೊಬ್ಬರಿಗೆ 13,500 ರು.ಗೆ ಖರೀದಿಸಲು ಸೂಚನೆ ನೀಡಿತ್ತು.
ಮುಂದಿನ ಕೆಲವೇ ವಾರಗಳಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ ರು. 19 ಸಾವಿರದ ಗಡಿ ದಾಟಬಹುದೆಂಬುದು ಮಾರುಕಟ್ಟೆಯ ಅನುಭವಿ ಹಾಗೂ ತಜ್ಞರ ಮಾತಾಗಿದೆ. ಇತ್ತೀಚೆಗೆ ಸಾಕಷ್ಟು ರೈತರು ತೆಂಗಿನಕಾಯಿ ಮತ್ತು ಎಳನೀರನ್ನೇ ಉತ್ತಮ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದಲೂ ರೈತರ ಬಳಿ ಕೊಬ್ಬರಿ ದಾಸ್ತಾನು ಕೊರತೆ ಕಂಡು ಬರುತ್ತಿದೆ.
ಕೊಬ್ಬರಿ ಬೆಲೆ ತೀವ್ರ ಕುಸಿತದಿಂದ ಕಂಗಾಲಾಗಿದ್ದ ರೈತರು ಇಂದಿನ ಗುರುವಾರದ ಟೆಂಡರ್ ಬೆಲೆ ರು.೧೫ಸಾವಿರ ದಾಟಿದ್ದು, ಯಾವುದಾದರೂ ವರ್ತಕರು ರೈತರಿಂದ ಇಂದಿನ ಟೆಂಡರ್ ಬೆಲೆಗೆ ಖರೀದಿಸದೆ ಹರಾಜು ಬೆಲೆಗಿಂತ ಕಡಿಮೆ ಬೆಲೆಗೆ ಕೊಂಡುಕೊಳ್ಳಲು ಪ್ರಯತ್ನಿಸಿರುವ ಬಗ್ಗೆ ರೈತರಿಂದ ದೂರು ಬಂದಲ್ಲಿ, ಅಂತಹ ಅಂಗಡಿಯ ಟ್ರೇಡ್ ಲೈಸೆನ್ಸ್‌ನ್ನು ಯಾವುದೇ ಮುಲಾಜಿಲ್ಲದೆ ರದ್ದು ಮಾಡಲಾಗುವುದು.
- ನ್ಯಾಮನಗೌಡರು, ಕಾರ್ಯದರ್ಶಿ, ತಿಪಟೂರು ಎಪಿಎಂಸಿ.
ಶ್ರಾವಣ ಮಾಸದ ನಂತರ ಕೊಬ್ಬರಿಗೆ ಹೊರರಾಜ್ಯಗಳಲ್ಲಿ ಹೆಚ್ಚು ಬೇಡಿಕೆ ಇರುವ ಕಾರಣ ಕೊಬ್ಬರಿ ದಾಸ್ತಾನು ಇಟ್ಟುಕೊಂಡಿರುವ ರೈತರು ತಮ್ಮಲ್ಲಿರುವ ಕೊಬ್ಬರಿಯನ್ನು ಒಟ್ಟಿಗೆ ತರದೆ ಹಂತ ಹಂತವಾಗಿ ಮಾರುಕಟ್ಟೆಗೆ ತಂದು ಮಾರಾಟ ಮಾಡಿದಲ್ಲಿ ಕೊಬ್ಬರಿ ಬೆಲೆ ಇನ್ನೂ ಹೆಚ್ಚು ಆಗಬಹುದು.
- ಬಿ. ನಂಜಾಮರಿ, ಕೊಬ್ಬರಿ ರವಾನೆದಾರರು ಹಾಗೂ ಮಾಜಿ ಶಾಸಕರು, ತಿಪಟೂರು.