ಸಾರಾಂಶ
ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಲೇಸು ಎಂಬ ಗಾದೆಯಂತೆ ಓದಿನಲ್ಲಿ ಹಿಂದುಳಿದ್ದಿರು ಕೃಷಿಯಲ್ಲಿ ಮುಂಚೂಣಿಯಲ್ಲಿದ್ದ ಪ್ರಗತಿಪರ ರೈತ ಚಕ್ರವಾವಿ ನರಸಿಂಹಮೂರ್ತಿ, ಬರುಡು ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆದವರು.
ಮಾಗಡಿ: ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಲೇಸು ಎಂಬ ಗಾದೆಯಂತೆ ಓದಿನಲ್ಲಿ ಹಿಂದುಳಿದ್ದಿರು ಕೃಷಿಯಲ್ಲಿ ಮುಂಚೂಣಿಯಲ್ಲಿದ್ದ ಪ್ರಗತಿಪರ ರೈತ ಚಕ್ರವಾವಿ ನರಸಿಂಹಮೂರ್ತಿ, ಬರುಡು ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆದವರು. ರೈತರು ಕೃಷಿಯಲ್ಲೇ ಆಧುನಿಕ ಮತ್ತು ಮಿಶ್ರ ಬೆಳೆಗಳನ್ನು ಬೆಳೆದು ಲಕ್ಷಗಟ್ಟಲೆ ಆದಾಯ ಗಳಿಸಬಹುದು ಎಂಬುದಕ್ಕೆ ಚಕ್ರಬಾವಿ ನರಸಿಂಹಮೂರ್ತಿಯೇ ನಿದರ್ಶನ.
ಬರಡು ಭೂಮಿಯಲ್ಲಿ ಮಿಶ್ರ ಬೆಳೆ: ರೈತ ನರಸಿಂಹಮೂರ್ತಿ ಬೆಂಗಳೂರಿನ ಕೆಂಚಾಪುರದ ಲೇಟ್ ವೆಂಕಟಮುನಿಯಪ್ಪನವರ ಪುತ್ರ. ಹಲ ವರ್ಷಗಳ ಹಿಂದೆ ಕೆಂಚಾಪುರದಲ್ಲಿ ಬಡಾವಣೆ ನಿರ್ಮಾಣಕ್ಕಾಗಿ 9 ಎಕರೆ ಜಾಗದಲ್ಲಿ 4 ಎಕರೆ ಜಾಗವನ್ನು ಸರ್ಕಾರ ವಶಪಡಿಸಿಕೊಂಡಿತು. ಬಳಿಕ ಕೃಷಿಯಲ್ಲೇ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಮಾಗಡಿ ತಾಲೂಕಿಗೆ ಬಂದು ಚಕ್ರಬಾವಿ ಗ್ರಾಮದಲ್ಲಿ 7 ಎಕರೆ ಬರಡುಭೂಮಿ ಖರೀದಿಸಿದರು. 45 ಲಕ್ಷ ವೆಚ್ಚ ಮಾಡಿ ಭೂಮಿಯನ್ನು ಸಮತಟ್ಟು ಮಾಡಿದರು. ಕಳೆದ 14 ವರ್ಷಗಳ ಹಿಂದೆ ನೆಲದಲ್ಲಿ 6 ಬರಡು ಕೊಳವೆ ಬಾವಿಗಳನ್ನು ಕೊರೆಸಿದರು. ಈಗ ಮಿಶ್ರ ಬೆಳೆ ಬೆಳೆದು ವರ್ಷಕ್ಕೆ ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ.
ವಾಣಿಜ್ಯ ಬೆಳೆಗಳತ್ತ ಚಿತ್ತ:
7 ಎಕರೆ ಜಾಗದಲ್ಲಿ ಈಗಾಗಲೇ ವಿವಿಧ ವಾಣಿಜ್ಯ ಬೆಳೆಗಳನ್ನು ಹಾಕಿ ಬಂಪರ್ ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದು, ಈಗ ಪ್ರಸ್ತುತ 400 ಬಟರ್ ಫ್ರೂಟ್ ಮರ, 2.5 ಸಾವಿರ ಅಡಿಕೆ ಮರ, 200 ತೆಂಗಿನ ಮರ, ತೋಟಗಾರಿಕೆ ಬೆಳೆಗಳಾದ ಸಪೋಟ, ಚಕ್ಕೋತ, 200 ಮಾವಿನ (ಬಾದಾಮಿ) ಮರ, ಜಾಕ್ ಫ್ರೂಟ್ ಬೆಳೆಯುತ್ತಿದ್ದು ಈಗ ಫಲ ಬಿಡುವ ಹಂತದಲ್ಲಿವೆ.
ಅಡಿಕೆ, ತೆಂಗು, ಬಾಳೆ ಗಿಡ ಬೆಳೆದಿದ್ದಾರೆ. ಎಲ್ಲವೂ ಇನ್ನೇನು ಒಂದೆರಡು ವರ್ಷಗಳಲ್ಲಿ ಫಲ ಕೈಗೆ ಸಿಗುವ ನಿರೀಕ್ಷೆಯಲ್ಲಿದ್ದಾರೆ. ರೈತರು ಸಮರ್ಪಕವಾಗಿ ಕೃಷಿಯಲ್ಲಿ ತೊಡಗಿಕೊಂಡರೆ ಉತ್ತಮ ಲಾಭ ಗಳಿಸಿ ಸ್ವಾಬಲಂಬಿಗಳಾಗಬಹುದು ಎಂಬುದು ನರಸಿಂಹಮೂರ್ತಿ ಅವರ ಅಭಿಪ್ರಾಯ.
ಕೃಷಿ ಅಧಿಕಾರಿಗಳು ತೋಟಕ್ಕೆ ಭೇಟಿ:
ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ರೈತರ ತೋಟಗಳಿಗೆ ಭೇಟಿ ನೀಡಿ ಕೃಷಿ ಸಮಸ್ಯೆಗಳನ್ನು ಪರಿಶೀಲಿಸಬೇಕು. ರೈತರಿಗೆ ಯಾವ ಸಮಯದಲ್ಲಿ ಯಾವ ಔಷಧಿ, ಎಷ್ಟು ಪ್ರಮಾಣದಲ್ಲಿ ಸಿಂಪಡಿಸಬೇಕು ಮತ್ತು ಯಾವ ರೀತಿ ನಿರ್ವಹಣೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರೆ ರೈತರು ಮತ್ತಷ್ಟು ಲಾಭ ಗಳಿಸುತ್ತಾರೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕಚೇರಿಯಲ್ಲಿ ಕೂರುವ ಬದಲು ರೈತರ ಜಮೀನಿಗೆ ಭೇಟಿ ಕೊಡಬೇಕು ಎಂದು ನರಸಿಂಹಮೂರ್ತಿ ಸಲಹೆ ನೀಡಿದರು.
ತೋಟದಲ್ಲೇ ನೇರ ಮಾರಾಟ:
ನರಸಿಂಹಮೂರ್ತಿ ತೋಟಗಾರಿಕೆ ಬೆಳೆಗಳನ್ನು ನೇರವಾಗಿ ಮಾರುಕಟ್ಟೆಗೆ ಹಾಕುವುದಿಲ್ಲ. ನೇರವಾಗಿ ತೋಟಕ್ಕೆ ಬಂದು ಕೊಳ್ಳುವವರಿಗೆ ಹಾಕುತ್ತಾರೆ. ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿ ಮತ್ತು ವಾಹನ ಸಂಚಾರದ ಖರ್ಚು ಉಳಿತಾಯವಾಗುತ್ತೆ ಎಂದು ನರಸಿಂಹಮೂರ್ತಿ ಹೇಳುತ್ತಾರೆ.
ಸರ್ಕಾರದ ಅನುದಾನ ನೇರವಾಗಿ ರೈತರಿಗೆ ಸಿಗಬೇಕು:
ಕೇಂದ್ರ ಮತ್ತು ರಾಜ್ಯ ಸರ್ಕಾರ ಬೆಳೆ ಪರಿಹಾರ ನಿಧಿಯನ್ನು ನೇರವಾಗಿ ರೈತರ ಖಾತೆಗೆ ಹಾಕಿದರೆ ನಷ್ಟವನ್ನು ಸ್ವಲ್ಪ ಪ್ರಮಾಣದಲ್ಲಾದರೂ ಭರಿಸಬಹುದು, ಆದರೆ ಅನುದಾನ ನೇರವಾಗಿ ಹಂಚದೆ ಇಲಾಖೆ ಮುಖಾಂತರ ವಿತರಿಸುವುದರಿಂದ ಪರಿಹಾರದ ಹಣ ಸರಿಯಾಗಿ ತಲುಪುತ್ತಿಲ್ಲ. ಈ ವ್ಯವಸ್ಥೆ ಸರಿಪಡಿಸಿದರೆ ರೈತರು ಬೆಳೆ ಕಳೆದುಕೊಂಡಾಗ ಸ್ವಲ್ಪ ಪ್ರಮಾಣದಲ್ಲಾದರೂ ಪರಿಹಾರದ ಹಣ ಪಡೆದು ತಮ್ಮ ನಷ್ಟವನ್ನು ಭರಿಸುತ್ತಾರೆ. ಇಲ್ಲವಾದರೆ ಸರ್ಕಾರದ ಯೋಜನೆ ಹಳ್ಳ ಹಿಡಿಯುತ್ತದೆ ಎಂದು ತಿಳಿಸಿದ್ದಾರೆ.
ನರಸಿಂಹಮೂರ್ತಿ ಅವರನ್ನು ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ. ತಾಲೂಕು ಕಸಾಪ ವತಿಯಿಂದ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವಿವಿಧ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.