ಸಾರಾಂಶ
ಒಣ ಬೇಸಾಯವನ್ನೇ ನಂಬಿಕೊಂಡಿರುವ ಜಾನುವಾರು ಹೊಂದಿದ ತಾಲೂಕಿನ ರೈತರು ನೀರಾವರಿ ಪ್ರದೇಶದಿಂದ ಭತ್ತದ ಹುಲ್ಲು ಸಂಗ್ರಹಣೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಭತ್ತದ ಕೊಯ್ಲು ಕಾರ್ಯ ಆರಂಭ । ಒಂದು ಟ್ರ್ಯಾಕ್ಟರ್ ಹುಲ್ಲಿಗೆ ₹3-4 ಸಾವಿರ ಪರಶಿವಮೂರ್ತಿ ದೋಟಿಹಾಳ
ಕನ್ನಡಪ್ರಭ ವಾರ್ತೆ ಕುಷ್ಟಗಿಒಣ ಬೇಸಾಯವನ್ನೇ ನಂಬಿಕೊಂಡಿರುವ ಜಾನುವಾರು ಹೊಂದಿದ ತಾಲೂಕಿನ ರೈತರು ನೀರಾವರಿ ಪ್ರದೇಶದಿಂದ ಭತ್ತದ ಹುಲ್ಲು ಸಂಗ್ರಹಣೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ತಾಲೂಕಿನ ರೈತರು ನೀರಾವರಿ ಪ್ರದೇಶವಾದ ಕಾರಟಗಿ, ಗಂಗಾವತಿ, ವಡ್ಡರಹಟ್ಟಿ, ವೆಂಕಟಗಿರಿ, ಶ್ರೀರಾಮನಗರ, ತುರ್ವಿಹಾಳ, ಏಳು ಮೈಲ್ ಕ್ಯಾಂಪ್, ಗುಂಜಳ್ಳಿ ಸೇರಿದಂತೆ ಅನೇಕ ಗ್ರಾಮೀಣ ಭಾಗದಲ್ಲಿ ಭತ್ತವನ್ನು ಬೆಳೆದಿರುವಂತಹ ರೈತರನ್ನು ಸಂಪರ್ಕಿಸಿ ಅವರಿಂದ ಹುಲ್ಲು ಖರೀದಿ ಮಾಡುವಲ್ಲಿ ನಿರತರಾಗಿದ್ದಾರೆ. ನೀರಾವರಿಯಲ್ಲಿ ಭತ್ತ ಬೆಳೆದಂತಹ ರೈತರು ಈಗಾಗಲೇ ಭತ್ತದ ಕೊಯ್ಲು ಕಾರ್ಯ ನಡೆಸಿದ್ದಾರೆ. ಹೀಗಾಗಿ ಒಣಬೇಸಾಯದ ರೈತರಿಂದ ಭತ್ತದ ಹುಲ್ಲಿಗೆ ಬೇಡಿಕೆ ಹೆಚ್ಚಾಗಿದೆ. ಒಂದು ಟ್ರ್ಯಾಕ್ಟರ್ ಹುಲ್ಲಿಗೆ ಸುಮಾರು ₹3-4 ಸಾವಿರ ಕೊಡಬೇಕಿದೆ.ಒಣಬೇಸಾಯವನ್ನೇ ನಂಬಿಕೊಂಡ ಕುಷ್ಟಗಿ ತಾಲೂಕಿನ ದೋಟಿಹಾಳ, ಹನುಮಸಾಗರ, ಮುದೇನೂರು, ಹನುಮನಾಳ, ತಾವರಗೇರಾ, ಟಕ್ಕಳಕಿ, ಕ್ಯಾದಿಗುಪ್ಪ, ಹೂಲಗೇರಿ, ತಳುವಗೇರಾ, ಚಳಗೇರಾ, ಕಲಾಲಬಂಡಿ, ಮೆಣೆದಾಳ, ಜುಮಲಾಪೂರು ಸೇರಿದಂತೆ ಅನೇಕ ಗ್ರಾಮೀಣ ಭಾಗದ ರೈತರು ಮುಂಬರುವ ಬೇಸಿಗೆಯ ದಿನಗಳಲ್ಲಿ ಮೇವಿನ ಕೊರತೆ ಉಂಟಾಗಬಾರದು ಎಂಬ ಕಾಳಜಿ ಹಾಗೂ ಮುಂಜಾಗ್ರತೆಯಾಗಿ ನೀರಾವರಿ ಪ್ರದೇಶಗಳಿಗೆ ಭೇಟಿ ನೀಡಿ ಭತ್ತದ ಹುಲ್ಲನ್ನು ಖರೀದಿ ಮಾಡಲು ಮುಂದಾಗಿದ್ದಾರೆ.
ಜರ್ಸಿ ಆಕಳು, ಎಮ್ಮೆ ಸೇರಿದಂತೆ ಜಾನುವಾರುಗಳಿಗೆ ಭತ್ತದ ಹುಲ್ಲು ಹಾಕುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಹಾಲು ನೀಡುತ್ತವೆ. ಬೇಸಿಗೆಯಲ್ಲಿ ಮೇವಿನ ಕೊರತೆ ಆಗಬಾರದೆಂದು ಭತ್ತದ ಹುಲ್ಲನ್ನು ನೀರಾವರಿ ಭಾಗದಿಂದ ತರುತ್ತಿದ್ದೇವೆ ಎನ್ನುತ್ತಾರೆ ತಳುವಗೇರಾ ಗ್ರಾಮದ ರೈತ ಶರಣಪ್ಪ.ನಾವು ಒಣಬೇಸಾಯ ನಂಬಿಕೊಂಡಿದ್ದೇವೆ. ಈ ಸಲ ಮಳೆ, ಬೆಳೆ ಉತ್ತಮವಾಗಿದ್ದರೂ ಸಹಿತ ಬೇಸಿಗೆಯ ದಿನಗಳಲ್ಲಿ ಮೇವು ಸಿಗುವುದು ಕಡಿಮೆಯಾಗುತ್ತದೆ ಮತ್ತು ದರವೂ ಹೆಚ್ಚಾಗುತ್ತದೆ. ಆದ ಕಾರಣ ಈಗಿನಿಂದಲೇ ಸಂಗ್ರಹಕ್ಕೆ ಮುಂದಾಗಿದ್ದೇವೆ ಎನ್ನುತ್ತಾರೆ ಹನುಮನಾಳದ ರೈತ ದೊಡ್ಡಬಸಪ್ಪ.