ಸಾರಾಂಶ
ಕನ್ನಡಪ್ರಭ ವಾರ್ತೆ ಸಾಗರ2013ರಲ್ಲಿ ಪ್ರಾರಂಭವಾದ ಕಾರ್ಗಲ್ ನಾಡ ಕಚೇರಿಯಲ್ಲಿ ಈವರೆಗೂ ಸಾರ್ವಜನಿಕರ ಯಾವುದೇ ದಾಖಲೆಗಳೂ ಸಿಗುತ್ತಿಲ್ಲ. ಬಾರಂಗಿ ಹೋಬಳಿಯ ಅರ್ಕಳ, ನಾಗವಳ್ಳಿ, ಮೇಘಾನೆ ಮೊದಲಾದ ಗ್ರಾಮದವರು ಈಗಲೂ ತಮ್ಮ ದಾಖಲೆ ಪಡೆಯಲು 100 ಕಿಮೀ ದೂರದ ಸಾಗರಕ್ಕೆ ಬಂದು ಹೋಗಬೇಕಾದ ಸ್ಥಿತಿ ಇದೆ. ಇದನ್ನು ತಪ್ಪಿಸುವಂತೆ ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಬಿ. ಕೃಷ್ಣಪ್ಪ ಸ್ಥಾಪಿತ) ಸದಸ್ಯರು ಉಪವಿಭಾಗಾಧಿಕಾರಿಯವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.ಸರಕಾರ ಸಾಗರ ತಾಲೂಕಿನ ಎಲ್ಲ ಹೋಬಳಿ ಮಟ್ಟದಲ್ಲೂ 2013ರಲ್ಲೇ ನಾಡ ಕಚೇರಿ ಸ್ಥಾಪಿಸಿತ್ತು. ಆದರೆ ಬಾರಂಗಿ ಹೋಬಳಿಯ ಕಾರ್ಗಲ್‍ನಲ್ಲಿ 2013ರಲ್ಲಿ ಪ್ರಾರಂಭವಾದ ನಾಡ ಕಚೇರಿಗೆ 2022ರಲ್ಲಿ ಹೊಸ ಕಟ್ಟಡವನ್ನೂ ಸಿದ್ಧಪಡಿಸಲಾಗಿತ್ತು. ಆದರೆ ತಾಲೂಕು ಕೇಂದ್ರದಿಂದ 100 ಕಿಮೀ ದೂರದ ಹತ್ತಾರು ಹಳ್ಳಿ ಜನರಿಗೆ ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ತಾಲೂಕಿನ ಗಡಿ ಭಾಗದ ಬಾರಂಗಿ ಹೋಬಳಿ ವ್ಯಾಪ್ತಿಯ ಗ್ರಾಮದ ಬಡ ಜನರು ತಮ್ಮ ದಾಖಲೆ ಪಡೆಯಲು ಒಂದಿಡೀ ದಿನ ಹಾಳು ಮಾಡಿಕೊಂಡು ₹500 ರಿಂದ ಸಾವಿರ ಖರ್ಚು ಮಾಡಿ, ಸಾಗರಕ್ಕೆ ಬರಬೇಕಾದ ದುಸ್ಥಿತಿ ಇದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಈ ಸಂಬಂಧ ತಹಸೀಲ್ದಾರರಿಗೆ ಕಾರ್ಗಲ್ ನಾಡಕಚೇರಿಗೆ ದಾಖಲೆಗಳನ್ನು ವರ್ಗಾಯಿಸುವಂತೆ ಹಲವು ಬಾರಿ ಸಾರ್ವಜನಿಕರು ಅರ್ಜಿ ಸಲ್ಲಿಸಿ, ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆರ್.ಆರ್. 5 ಮತ್ತು 6, ಪಹಣಿ, ಎಂ.ಆರ್. ದಾಖಲೆ, ಜನನ-ಮರಣ ಪತ್ರ ಇತ್ಯಾದಿ ಮುಖ್ಯ ದಾಖಲೆಗಳೂ ಬಡವರಿಗೆ ಸಕಾಲದಲ್ಲಿ ಸಿಗುತ್ತಿಲ್ಲ. ಇದನ್ನು ತಪ್ಪಿಸಲು ಮುಂದಿನ 15 ದಿನದೊಳಗೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಂಡು, ಸಾರ್ವಜನಿಕರ ಅಲೆದಾಟ ತಪ್ಪಿಸದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ ರೇವಪ್ಪ ಹೊಸಕೊಪ್ಪ, ಗಣಪತಿ ವಡ್ನಾಳ್, ಮಧುಕರ್, ಜಗನ್ನಾಥ್ ಬಿ. ಭೀಮನೇರಿ, ಮಂಜಪ್ಪ, ಪ್ರಶಾಂತ್ ಹೊನ್ನೇಸರ, ಶಿವಕುಮಾರ್, ನಾರಾಯಣ, ಬೊಮ್ಮತ್ತಿ ಚಂದ್ರು, ಮುಂತಾದ ಸದಸ್ಯರು ಹಾಜರಿದ್ದರು.