ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಗೆಲವು ಸಾಧಿಸಿದ ಹಿನ್ನೆಲೆ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಲಾಯಿತು.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ, ಶಿಕ್ಷಕರು ಮಾತಿನಂತೆ ನಡೆದಿದ್ದೇವೆ. ಇನ್ನೂ ಸರಕಾರ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಸಿಎಂ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶಿಕ್ಷಕರಿಗೆ ನೀಡಿರುವ ಭರವಸೆ ಈಡೇರಿಸಬೇಕು. ಆರೋಗ್ಯ ಸಂಜೀವಿನಿ ಯೋಜನೆ ಸರಕಾರಿ ನೌಕರರಂತೆ ಖಾಸಗಿ ಅನುದಾನಿತ ಶಾಲಾ-ಕಾಲೇಜುಗಳ ನೌಕರರಿಗೂ ವಿಸ್ತರಿಸಬೇಕು. ಖಾಸಗಿ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಬೇಕು. 2006ರ ಹಿಂದೆ ನೇಮಕಾತಿ ಹೊಂದಿ ನಂತರ ಅನುದಾನ ಕೊಳಪಟ್ಟ ಪಿಂಚಣಿ ವಂಚಿತ ನೌಕರರಿಗೆ ನಿಶ್ಚಿತ ಪಿಂಚಣಿ ಜಾರಿಗೊಳಿಸಬೇಕು. ಈಗಾಗಲೇ ನಿವೃತ್ತರಾಗಿರುವ ಹಾಗೂ ಮರಣ ಹೊಂದಿರುವ ನೌಕರರ ಕುಟುಂಬಗಳನ್ನು ಈ ಯೋಜನೆಗೆ ಪರಿಗಣಿಸಬೇಕು ಎಂದರು.
ಪಿಂಚಣಿ ವಂಚಿತ ಶಾಲಾ ಕಾಲೇಜುಗಳ ನೌಕರರ ಜಿಲ್ಲಾಧ್ಯಕ್ಷ ಜಿ.ಎಸ್.ತಿಪ್ಪೇಸ್ವಾಮಿ ಮಾತನಾಡಿ, ಫ್ರೀಡಂ ಪಾರ್ಕ್‍ನಲ್ಲಿ 142ದಿನಗಳು ಉಪವಾಸ ನಡೆಸಿದ್ದು, ಐದು ಜನರ ಆತ್ಮಾಹುತಿಗೆ ಬೆಲೆ ಕೊಟ್ಟು ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಮೂರು ನಾಲ್ಕು ವರ್ಷಗಳು ಸೇವೆ ಸಲ್ಲಿಸಿ ನಿವೃತ್ತರಾಗುವ ನೌಕರರು ನಿವೃತ್ತಿ ನಂತರದ ಬದುಕಿನ ಅಭದ್ರತೆ ಕಾರಣ ಆತ್ಮಹತ್ಯೆ ಕಡೆಗೆ ಮುಖ ಮಾಡುತ್ತಿದ್ದಾರೆ ಎಂದರು.ಪದವಿ ಕಾಲೇಜುಗಳ ಪ್ರಾಧ್ಯಾಪಕರ ಸಂಘದ ನಾಗರಾಜ್ ಮಾತನಾಡಿ, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವಂತೆ ಓಪಿಎಸ್ ಪಿಂಚಣಿ ಯೋಜನೆ ಮರು ಜಾರಿಗೆ ತಂದು ಎಲ್ಲಾ ನೌಕರರ ನಿವೃತ್ತಿ ಬದುಕಿಗೆ ಭದ್ರತೆ ನೀಡಬೇಕೆಂದರು.
ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ್, ಕರ್ನಾಟಕ ದಲಿತ ಸಾಹಿತ್ಯ ಪರಿಷತ್ ಸಂಚಾಲಕ ಕೆರೆಯಾಗಳಗಳ್ಳಿ ತಿಪ್ಪೇಸ್ವಾಮಿ, ನಿವೃತ್ತ ಉಪನಿರ್ದೇಶಕ ಶಿವಕುಮಾರ್, ಉಪನ್ಯಾಸಕರಾದ ಡಿ.ವೀರಣ್ಣ, ಎ.ನಾಗರಾಜ್, ಪೆನ್ನಯ್ಯ, ಶಿವಕುಮಾರ್, ಬಸವರಾಜ್ ಇದ್ದರು.