ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ಮೂಲ್ಕಿ ತಾಲೂಕಿನಲ್ಲಿ ಬುಧವಾರದಿಂದ ನಿರಂತರ ಸುರಿಯುತ್ತಿರುವ ಬಿರುಸಿನ ಮಳೆಯಿಂದಾಗಿ ಶಾಂಭವಿ ಮತ್ತು ನಂದಿನಿ ನದಿ ತಟದ ತೀರ ಪ್ರದೇಶಗಳಲ್ಲಿ ನೆರೆಯಾಗಿದ್ದು ಕೆಲವೆಡೆ ಹೆಚ್ಚಿನ ಹಾನಿ ಸಂಭವಿಸಿದೆ.ನಂದಿನಿ ನದಿ ತೀರದ ಪ್ರದೇಶಗಳಾದ ಅತ್ತೂರು ಬೈಲಗುತ್ತು, ಮಿತ್ತಬೈಲು, ಪಂಜ ಪ್ರದೇಶದಲ್ಲಿ ನಂದಿನಿ ನದಿ ತುಂಬಿ ಹರಿದು ತಗ್ಗು ಪ್ರದೇಶ ಜಲಾವೃತವಾಗಿದೆ. ಮೂಲ್ಕಿ ತಾಲೂಕಿನ ಅತ್ತೂರುಬೈಲು ಗಣಪತಿ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಪುಚ್ಚಾಡಿ ಅಣೆಕಟ್ಟು ಮುಳುಗಡೆಯಾಗಿದೆ.
ಬಿರುಸಿನ ಮಳೆಯಿಂದಾಗಿ ಮಿತ್ತಬೈಲ್ ವಿಶ್ವನಾಥ ಪೂಜಾರಿ ಅವರ ಮನೆ ಮುಂಭಾಗದ ತಡೆಗೋಡೆ ಕುಸಿದು ಬಿದ್ದು ಹೆಚ್ಚಿನ ಹಾನಿ ಸಂಭವಿಸಿದೆ.ಕಟೀಲು ಪರಿಸರದ ನಡುಗೋಡು, ಕಿಲೆಂಜೂರು, ಪಂಜ, ಮಿತ್ತಬೈಲು, ಶಾಂಭವಿ ನದಿ ತಟದ ಪ್ರದೇಶಗಳಾದ ಏಳಿಂಜೆ, ಪಟ್ಟೆ, ಮಟ್ಟು, ಪಂಜಿನಡ್ಕ ಮತ್ತಿತರ ಕಡೆಗಳಲ್ಲಿ ಕೃಷಿ ಭೂಮಿ ಮುಳುಗಡೆಯಾಗಿದೆ. ಮೂಲ್ಕಿ ತಾಲೂಕು ಉಪ ತಹಸೀಲ್ದಾರ್ ದಿಲೀಪ್ ರೋಡ್ಕರ್, ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮಕರಣಿಕ ಸುಜಿತ್, ಕಟೀಲು ಪಂಚಾಯಿತಿ ಮಾಜಿ ಸದಸ್ಯ ಅರುಣ್ ಮಲ್ಲಿಗೆಯಂಗಡಿ, ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯ ಚಂದ್ರಹಾಸ್ ಕುಂದರ್. ಸುನೀಲ್ ಆಚಾರಿ ಮತ್ತಿತರರು ಭೇಟಿ ನೀಡಿದ್ದಾರೆ. ಕಟೀಲು ದೇವಸ್ಥಾನದ ಹೊರ ಭಾಗದಲ್ಲಿ ನಂದಿನಿ ನದಿ ಭೋರ್ಗರೆದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಮೂಲ್ಕಿತಾಲೂಕು ವ್ಯಾಪ್ತಿಯ ಸಸಿಹಿತ್ಲು ಗ್ರಾಮದ ಗರೋಡಿ ಬಳಿ ಎಂಬಲ್ಲಿ ಉಮೇಶ್ ಪೂಜಾರಿ ಎಂಬವರ ಮನೆಯು ಗುರುವಾರ ಸುರಿದ ಗಾಳಿ ಮಳೆಗೆ ತೀವ್ರ ಹಾನಿಯಾಗಿದ್ದು ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಮನೆಯವರನ್ನು ಅವರ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.ಮೂಲ್ಕಿ ಸಮೀಪದ ಮಟ್ಟು ಅತಿಕಾರಿಬೆಟ್ಟುವಿನ ಪದ್ಮಿನಿ ದಯಾನಂದ ಸಾಲಿಯಾನ್ ಅವರ ಮನೆಗೆ ನೀರು ನುಗ್ಗಿದ್ದು ಮನೆಯವರು ಹೊರಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಮೂಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಭಾರಿ ಮಳೆಗೆ ಗದ್ದೆಗಳಿಗೆ ನೀರು ನುಗ್ಗಿ ಕೃಷಿ ಹಾನಿ ಸಂಭವಿಸಿದೆ. ಕಟೀಲು ಮಿತ್ತಬೈಲು ಬಳಿ ಕೃತಕ ನೆರೆ ಸೃಷ್ಟಿಯಾಗಿತ್ತು.