ಕೆಎಫ್‌ಡಿ ವ್ಯಾಕ್ಸಿನ್‌ ಕೊರತೆಯಿಂದ ಕಾಡಂಚಿನ ಜನರಲ್ಲಿ ಹೆಚ್ಚಿದ ಜೀವಭಯ

| Published : Dec 03 2023, 01:00 AM IST

ಸಾರಾಂಶ

ಹೊತ್ತಿಗೆ ಮುಂಚೆಯೇ ನೆರೆಯ ಜಿಲ್ಲೆ ಚಿಕ್ಕಮಗಳೂರಲ್ಲಿ ಈ ವರ್ಷದ ಮೊದಲ ಪ್ರಕರಣ ದಾಖಲಾಗಿದೆ. ಇದು ಈ ಆತಂಕ ಹೆಚ್ಚಲು ಕಾರಣವಾಗಿದೆ. ಜಿಲ್ಲೆಯಲ್ಲಿ ಸಾಮಾನ್ಯವಾಗಿ ನವೆಂಬರ್‌ನಿಂದ ಮಳೆಗಾಲ ಆರಂಭ ಆಗುವವರೆಗೂ ಮಂಗನ ಕಾಯಿಲೆ ಪ್ರಕರಣ ಕಾಣಿಸಿಕೊಳ್ಳುತ್ತದೆ. ಬೇಸಿಗೆಯಲ್ಲಿ ಇದರ ಆರ್ಭಟ ಹೆಚ್ಚು. ಆದರೆ, ಕಳೆದೆರಡು ವರ್ಷದಿಂದ ಜನವರಿಯಲ್ಲಿ ಪ್ರಕರಣ ಕಾಣಿಸಿಕೊಳ್ಳುತ್ತಿದೆ. ಇದರ ನಡುವೆ ನವಂಬರ್‌ ಕೊನೆ ವಾರ ಅಥವಾ ಡಿಸೆಂಬರ್‌ ಮೊದಲಾರಂಭದಲ್ಲಿಯೇ ನೆರೆ ಜಿಲ್ಲೆ ಚಿಕ್ಕಮಗಳೂರಿನಲ್ಲಿ ವ್ಯಕ್ತಿಗೆ ಕೆಎಫ್‌ಡಿ ಪತ್ತೆ ಆಗಿರುವುದು ಇಲ್ಲಿಯ ಜನರಿಗೆ ಆತಂಕ ಉಂಟುಮಾಡುವಂತೆ ಮಾಡಿದೆ.

ಗೋಪಾಲ್‌ ಯಡಗೆರೆ ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮಳೆಗಾಲ ಮುಗಿದು ಬೇಸಿಗೆ ಸುಳಿವು ಸಿಗುತ್ತಿರುವಂತೆಯೇ ನಾಲ್ಕು ವರ್ಷಗಳ ಹಿಂದೆ ಸಾಗರ ತಾಲೂಕಿನ ಅರಳಗೋಡಿನಲ್ಲಿ ಮರಣ ಮೃದಂಗ ಬಾರಿಸಿದ್ದ ಮಂಗನ ಕಾಯಿಲೆ ಮತ್ತೆ ಜಿಲ್ಲೆಯಲ್ಲಿ ಮರುಕಳಿಸಲಿದೆಯೇ ಎಂಬ ಆತಂಕ ಕಾಡತೊಡಗಿದೆ. ಕಳೆದ ಎರಡು ವರ್ಷಗಳಿಂದ ಮಂಗನ ಕಾಯಿಲೆ ವಿರುದ್ಧ ಮುನ್ನೆಚ್ಚರಿಕೆ ಕ್ರಮವಾಗಿ ಕಾಡಂಚಿನ ಜನರಿಗೆ ನೀಡಬೇಕಾದ ವ್ಯಾಕ್ಸಿನ್‌ಗೆ ಆರೋಗ್ಯ ಇಲಾಖೆ ವಿರಾಮ ನೀಡಿರುವುದು ಇದೀಗ ತೀವ್ರ ಚರ್ಚೆಗೆ ಒಳಗಾಗಿದೆ. ಎರಡು ವರ್ಷಗಳಿಂದ ಸರ್ಕಾರ ಸಮರ್ಪಕವಾಗಿ ವ್ಯಾಕ್ಸಿನ್ ಪೂರೈಸದೆ ಇರುವುದೇ ಇಲಾಖೆ ವ್ಯಾಕ್ಸಿನ್‌ ನೀಡದಿರಲು ಕಾರಣ ಎಂಬುದು ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದಕ್ಕೆ ಇಲಾಖೆ ನೀಡುತ್ತಿರುವ ಸಮಜಾಯಿಷಿ ಎಂದರೆ, ಕಳೆದ ಎರಡು ವರ್ಷಗಳಿಂದ ಈ ಭಾಗದಲ್ಲಿ ಮಂಗನ ಕಾಯಿಲೆ ಪ್ರಕರಣ ಕಡಿಮೆಯಾಗಿದೆ ಎಂಬುದು ಇನ್ನೂ ಸೋಜಿಗ ವಿಚಾರ! ಹೊತ್ತಿಗೆ ಮುಂಚೆಯೇ ನೆರೆಯ ಜಿಲ್ಲೆ ಚಿಕ್ಕಮಗಳೂರಲ್ಲಿ ಈ ವರ್ಷದ ಮೊದಲ ಪ್ರಕರಣ ದಾಖಲಾಗಿದೆ. ಇದು ಈ ಆತಂಕ ಹೆಚ್ಚಲು ಕಾರಣವಾಗಿದೆ. ಜಿಲ್ಲೆಯಲ್ಲಿ ಸಾಮಾನ್ಯವಾಗಿ ನವೆಂಬರ್‌ನಿಂದ ಮಳೆಗಾಲ ಆರಂಭ ಆಗುವವರೆಗೂ ಮಂಗನ ಕಾಯಿಲೆ ಪ್ರಕರಣ ಕಾಣಿಸಿಕೊಳ್ಳುತ್ತದೆ. ಬೇಸಿಗೆಯಲ್ಲಿ ಇದರ ಆರ್ಭಟ ಹೆಚ್ಚು. ಆದರೆ, ಕಳೆದೆರಡು ವರ್ಷದಿಂದ ಜನವರಿಯಲ್ಲಿ ಪ್ರಕರಣ ಕಾಣಿಸಿಕೊಳ್ಳುತ್ತಿದೆ. ಇದರ ನಡುವೆ ನವಂಬರ್‌ ಕೊನೆ ವಾರ ಅಥವಾ ಡಿಸೆಂಬರ್‌ ಮೊದಲಾರಂಭದಲ್ಲಿಯೇ ನೆರೆ ಜಿಲ್ಲೆ ಚಿಕ್ಕಮಗಳೂರಿನಲ್ಲಿ ವ್ಯಕ್ತಿಗೆ ಕೆಎಫ್‌ಡಿ ಪತ್ತೆ ಆಗಿರುವುದು ಇಲ್ಲಿಯ ಜನರಿಗೆ ಆತಂಕ ಉಂಟುಮಾಡುವಂತೆ ಮಾಡಿದೆ. ಈ ಕಾಯಿಲೆಗೆ ಇದುವರೆಗೆ ಮದ್ದು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಕಾಡಂಚಿನ ಜನರಿಗೆ ಕೆಎಫ್‌ ಡಿ ವ್ಯಾಕ್ಸಿನೇಶನ್‌ ಹಾಕಲಾಗುತ್ತದೆ. ಜೊತೆಗೆ ಮೈಗೆ ಹಚ್ಚಿಕೊಳ್ಳಲು ಡಿಎಂಪಿ ಆಯಿಲ್‌ ಅನ್ನು ನೀಡಲಾಗುತ್ತದೆ. ಈ ವ್ಯಾಕ್ಸಿನ್‌ ಪಡೆಯುವುದರಿಂದ ಈ ಕಾಯಿಲೆಯಿಂದ ಸ್ವಲ್ಪ ಮಟ್ಟಿನ ರಕ್ಷಣೆ ಸಿಗುತ್ತದೆ. ಹೀಗಾಗಿ ಆರೋಗ್ಯ ಇಲಾಖೆ ನವಂಬರ್‌ ನಿಂದಲೇ ಕಾಡಂಚಿನ ಜನರಿಗೆ ಈ ವ್ಯಾಕ್ಸಿನ್ ನೀಡುತ್ತದೆ. ಕೆಲವು ವರ್ಷಗಳ ಕಾಲ ಬೂಸ್ಟರ್‌ ಡೋಸ್‌ ಕೂಡ ನೀಡಲಾಗುತ್ತದೆ. ಈಗ ವ್ಯಾಕ್ಸಿನ್‌ ನೀಡದಿರುವುದರಿಂದ 2019ರ ನೆನಪು ಮತ್ತೆ ಮರಕಳಿಸುವ ಆತಂಕ ಜನರಲ್ಲಿದೆ. ಕಾಡಿನಲ್ಲಿ ಇರುವ ಉಣುಗು ಈ ರೋಗ ಹರಡಲು ಕಾರಣ. ಇದು ಮಂಗಗಳ ಮೂಲಕ ಜನರಿಗೆ ಹರಡುತ್ತದೆ. ಕಾಡಿಗೆ ಜನರು ಮತ್ತು ಜಾನುವಾರುಗಳು ತೆರಳಿದ ವೇಳೆ ಉಣುಗಿನ ಮೂಲಕ ದೇಹ ಪ್ರವೇಶಿಸಿ, ಮಾರಣಾಂತಿಕ ರೋಗ ಉಂಟು ಮಾಡುತ್ತದೆ. 1957ರಲ್ಲಿ ಮೊದಲ ಬಾರಿಗೆ ಸೊರಬ ತಾಲೂಕಿನ ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ ಮೃತ ಮಂಗವೊಂದರ ಶರೀರದಲ್ಲಿ ಈ ವೈರಾಣು ಗುರುತಿಸಲಾಯಿತು. ಹೀಗಾಗಿ, ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌ ಎಂದು ಕರೆಯಲಾಗುತ್ತಿದೆ. - - - ಬಾಕ್ಸ್-1 ಕೊಪ್ಪದಲ್ಲಿ ಕೆಎಫ್‌ಡಿ ಪತ್ತೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿ ಈ ವರ್ಷದ ಮೊದಲ ಕೆಎಫ್‌ಡಿ ಪ್ರಕರಣ ಪತ್ತೆಯಾಗಿದೆ. ಕೊಪ್ಪ ತಾಲೂಕಿನ ಮರವಂತೆ ಗ್ರಾಮದ 65 ಷರ್ವದ ವ್ಯಕ್ತಿಯಲ್ಲಿ ಕೆಎಫ್‌ಡಿ ಪತ್ತೆಯಾಗಿದೆ.- - - ಬಾಕ್ಸ್-2 ಕಡಿಮೆ ಆಗುತ್ತಿರುವ ಪ್ರಕರಣ ಜಿಲ್ಲೆಯಲ್ಲಿ ಈ ಹಿಂದಿನ ವರ್ಷಗಳಿಗೆ ಹೋಲಿಸಿಕೊಂಡರೆ ಕಳೆದ ಎರಡು ವರ್ಷದಲ್ಲಿ ಕೆಎಫ್‌ಡಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ.2019 ರಲ್ಲಿ ಜಿಲ್ಲೆಯಲ್ಲಿ 341 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 15 ಮಂದಿ ಕೆಎಫ್‌ಡಿಯಿಂದ ಸಾವನ್ನಪ್ಪಿದ್ದು ದೃಢಪಟ್ಟಿತ್ತು. 2020 ರಲ್ಲಿ 184 ಪ್ರಕರಣಗಳು ದಾಖಲಾಗಿದ್ದು, 4 ಮಂದಿ ಸಾವನ್ನಪ್ಪಿದ್ದರು. 2021ರಲ್ಲಿ 13 ಪ್ರಕರಣಗಳು ದಾಖಲಾಗಿದ್ದು, ಒಬ್ಬರು ಕೆಎಫ್‌ಡಿಗೆ ಬಲಿಯಾಗಿದ್ದರು. 2022ರಲ್ಲಿ 12 ಪ್ರಕರಣಗಳು ದಾಖಲಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ.- - - ಬಾಕ್ಸ್-3 ಕೆಎಫ್‌ಡಿ ಪೀಡಿತ ಪ್ರದೇಶದಲ್ಲಿ ಅಲರ್ಟ್‌ ಸಾಗರ ತಾಲೂಕಿನ ಅರಳಗೋಡು ಸೇರಿದಂತೆ ಕಾರ್ಗಲ್‌, ತಾಳಗುಪ್ಪ, ಉಳ್ಳುರು, ಹೆಗ್ಗೋಡು, ತ್ಯಾಗರ್ತಿ, ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ, ಕಟ್ಟೆಹಕ್ಲು, ಕನ್ನಂಗಿ, ದೇವಂಗಿ, ಅರಗ, ಅರಳಸುರಳಿ, ಹೊಸನಗರ ತಾಲೂಕಿನ ಕೊಡೂರು, ಮಾರುತಿಪುರ, ಹರಿದ್ರಾವತಿ, ಸಂಪೆಕಟ್ಟೆ, ನಿಟ್ಟೂರು ಸೇರಿದಂತೆ ಕೆಎಫ್‌ಡಿ ಪೀಡತ ಪ್ರದೇಶದಲ್ಲಿ ಆರೋಗ್ಯ ಇಲಾಖೆಯಿಂದ ಅರಿವು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.ಕೆಎಫ್‌ಡಿ ನಿಯಂತ್ರಣ ಹಿನ್ನೆಲೆ ತೆಗೆದುಕೊಳ್ಳಬೇಕಾದ ಹೆಚ್ಚಿನ ಕ್ರಮಗಳು, ಬೇಕಾಗುವ ಸೌಲಭ್ಯಗಳ ಬಗ್ಗೆ ಚರ್ಚೆ ಮಾಡಲು ಗ್ರಾಪಂ ಮಟ್ಟದ ಅಧಿಕಾರಿಗಳಿಂದ ಹಿಡಿದು ಜಿಲ್ಲಾಧಿಕಾರಿವರೆಗಿನ ಇಲಾಖೆ ಅಧಿಕಾರಿಗಳ ಸಮನ್ವಯ ಸಭೆ ನಡೆಸಲಾಗುತ್ತಿದ್ದು, ಕೆಎಫ್‌ಡಿ ಪೀಡಿತ ತಾಲೂಕುಗಳಿಗೆ ಡಿಎಂಪಿ ತೈಲ, ಕರಪತ್ರಗಳನ್ನು ಕಳುಹಿಸಿಕೊಡಲಾಗಿದೆ.- - - ಕೋಟ್‌ ಕಳೆದ ಎರಡು ವರ್ಷದಿಂದ ಜಿಲ್ಲೆಯಲ್ಲಿ ಕೆಎಫ್‌ಡಿ ಪ್ರಕರಣಗಳು ತಗ್ಗಿವೆ. ಜಿಲ್ಲೆಯಲ್ಲಿ ಜನವರಿಯಿಂದ ಕೆಎಫ್‌ಡಿ ಕಾಣಿಸಿಕೊಳ್ಳುತ್ತದೆ. ಜ್ವರ ಕಾಣಿಸಿಕೊಂಡ ವ್ಯಕ್ತಿಯ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗುತ್ತಿದೆ. ಈವರೆಗೆ ಯಾವುದೇ ಪಾಸಿಟಿವ್‌ ಪ್ರಕರಣಗಳು ಇಲ್ಲ. ಆರೋಗ್ಯ ಇಲಾಖೆ, ಜಿಲ್ಲಾಡಳಿತ ಸಹಯೋಗದಲ್ಲಿ ಜಿಲ್ಲೆಯ ಕೆಎಫ್‌ಡಿ ಕಾಯಿಲೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ - ಹರ್ಷವರ್ಧನ್‌, ಉಪನಿರ್ದೇಶಕ, ಪರಿಮಾಣು ಕ್ರಿಮಿ ಪರಿಸಂಶೋಧನಾಲಯ, ಶಿವಮೊಗ್ಗ- - - (-ಸಾಂದರ್ಭಿಕ ಚಿತ್ರ)