ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಾಕಷ್ಟು ಅವಕಾಶಗಳು ಇದ್ದು ಇಂಥ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಯೋಜನಾ ನಿರ್ದೇಶಕಿ ಅನುರಾಧ ಎಸ್. ಪ್ರಕಾಶ್ ಕರೆ ನೀಡಿದ್ದಾರೆ. ನಗರದ ಕ್ರಿಸ್ಟಲ್ ಕೋರ್ಟ್‌ನಲ್ಲಿ ಇನ್ನರ್ ವೀಲ್ ಜಿಲ್ಲೆ 318ನ 54ನೇ ಜಿಲ್ಲಾ ಸಮ್ಮೇಳನಕ್ಕೆ ಚಾಲನೆ ನೀಡಿದ ಬಳಿಕ ಜಿಲ್ಲಾ ಯೋಜನೆಯಾದ ಬಾಲಕಿಯರಿಗೆ 100 ಸೈಕಲ್ ವಿತರಿಸುವ ಯೋಜನೆ ಅನ್ವಯ, ವಿದ್ಯಾಥಿ೯ನಿಯರಿಗೆ 5 ಸೈಕಲ್‌ಗಳನ್ನು ಸಾಂಕೇತಿಕವಾಗಿ ವಿತರಿಸಿ , ಶತವರ್ತನ ಸ್ಮರಣ ಸಂಚಿಕೆ ಲೋಕಾರ್ಪಣೆಣೆಗೊಳಿಸಿ ಅವರು ಮಾತನಾಡಿದರು. ಮುಂದಿನ ತಿಂಗಳಿನಲ್ಲಿ ಆದಿತ್ಯ 3 ರ ಉಡಾವಣೆಯಾಗುವ ಸಾಧ್ಯತೆಯಿದ್ದು ಯಶಸ್ವಿ ಉಡಾವಣೆಗಾಗಿ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದೂ ಇಸ್ರೋ ಯೋಜನಾ ನಿದೇ೯ಶಕಿ ತಿಳಿಸಿದರಲ್ಲದೇ, ಪ್ರಸ್ತುತ, ಇಸ್ರೋ ಸಂಸ್ಥೆಯಲ್ಲಿ ಶೇ. 72 ರಷ್ಟು ಪುರುಷರಿದ್ದು ಶೇ. 28 ರಷ್ಟು ಮಹಿಳೆಯರಿದ್ದಾರೆ. ಈ ಲೆಕ್ಕ ಸಮಾನ ಪ್ರಮಾಣಕ್ಕೆ ಬರಬೇಕಾದರೆ ಮಹಿಳೆಯರೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡು ಈ ರಂಗಕ್ಕೆ ಪದಾರ್ಪಣೆ ಮಾಡಬೇಕೆಂದು ಹೇಳಿದರು.ಇನ್ನರ್ ವೀಲ್ ಜಿಲ್ಲೆ 318 ನ ಅಧ್ಯಕ್ಷೆ ಪೂರ್ಣಿಮಾ ರವಿ ಮಾತನಾಡಿ, ಮ್ಯಾಂಚೆಸ್ಟರ್ ನಲ್ಲಿ 100 ವಷ೯ಗಳ ಹಿಂದೆ ಪ್ರಾರಂಭವಾದ ಇನ್ನರ್ ವೀಲ್ ಇದೀಗ ಶತಮಾನೋತ್ಸವ ಸಂಭ್ರಮದಲ್ಲಿದೆ. ಮಹಿಳೆಯರ ಪುಟ್ಟ ಸಂಘವಾಗಿ ಪ್ರಾರಂಭವಾದದ್ದು ಇದೀಗ ಜಗತ್ತಿನ ಅತೀ ದೊಡ್ಡ ಮಹಿಳಾ ಸಂಘವಾಗಿ ಹೊರಹೊಮ್ಮಿದೆ. ಇನ್ನರ್ ವೀಲ್ 100 ದೇಶಗಳಲ್ಲಿ 4 ಸಾವಿರ ಕ್ಲಬ್ ಗಳಿಂದ 1.40 ಲಕ್ಷ ಸದಸ್ಯೆಯರು ಇದ್ದಾರೆ ಎಂದು ಮಾಹಿತಿ ನೀಡಿದರು.
ಬಾಲಕಿಯರಿಗೆ 100 ಸೈಕಲ್ ಗಳನ್ನು ಇಂದಿನಿಂದ 8 ಕಂದಾಯ ಜಿಲ್ಲಾ ವ್ಯಾಪ್ತಿಯಲ್ಲಿ ವಿತರಿಸಲಾಗುತ್ತದೆ. ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯಿಂದ ಪ್ರಾರಂಭಿಕ ಹಂತವಾಗಿ 5 ಸೈಕಲ್ ಗಳನ್ನು ವಿತರಿಸಲಾಗುತ್ತದೆ ಎಂದು ಅವರು ಹೇಳಿದರು. ಕೊಡಗೂ ಸೇರಿದಂತೆ ಮೈಸೂರು, ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ 600 ಕ್ಕೂ ಅಧಿಕ ಸದಸ್ಯೆಯರು ಪಾಲ್ಗೊಂಡಿದ್ದಾರೆ. ಆಕರ್ಷಕ ಮೆರವಣಿಗೆ: ಸಭಾ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲೆಯ ಇನ್ನರ್ ವೀಲ್ ನ 51 ಸಂಸ್ಥೆಗಳ ಅಧ್ಯಕ್ಷರು ತಮ್ಮ ಸಂಸ್ಥೆಯ ಧ್ವಜ ಹಿಡಿದು ಮೆರವಣಿಗೆ ಸಾಗಿಬಂದರು. ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ಸದಸ್ಯೆಯರು ಆರತಿಯೊಂದಿಗೆ ಸಮ್ಮೇಳನಕ್ಕೆ ಬಂದವರನ್ನು ಸ್ವಾಗತಿಸಿದರು.ಜಿಲ್ಲಾ ಸಮ್ಮೇಳನ ಸಮಿತಿ ಅಧ್ಯಕ್ಷೆ ಡಾ.ವಿಮಲ ರಾಧಾಕೃಷ್ಣ, ಸಂಚಾಲಕಿ ಲತಾ ಚಂಗಪ್ಪ, ಮಡಿಕೇರಿ ಇನ್ನರ್ ವೀಲ್ ಅಧ್ಯಕ್ಷೆ ಕನ್ನು ದೇವರಾಜ್ , ಜಿಲ್ಲಾ ಕಾರ್ಯದರ್ಶಿ ಶಬರಿ ಕಡಿದಾಳ್ , ಶತಮಾನೋತ್ಸವ ಆಚರಣಾ ಸಮಿತಿ ಅಧ್ಯಕ್ಷೆ ನೈನಾ ಅಚ್ಚಪ್ಪ ಸೇರಿದಂತೆ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು. ಲಕ್ಷ್ಮೀ ಈಶ್ವರ ಭಟ್, ವಿಜಯಲಕ್ಷ್ಮೀ ಚೇತನ್ ಪ್ರಾರ್ಥಿಸಿದರು. ಡಾ. ವರ್ಷ ರವಿ, ಚಿತ್ರಾ ನಿರೂಪಿಸಿದರು. ಮಡಿಕೇರಿ ಇನ್ನರ್ ವೀಲ್ ಕಾರ್ಯದರ್ಶಿ ದಿವ್ಯಮುತ್ತಣ್ಣ ವಂದಿಸಿದರು. ಇನ್ನರ್ ವೀಲ್ ಶತಮಾನೋತ್ಸವದ ಹಾದಿಯ ಸಾಕ್ಷ್ಯಚಿತ್ರ ಮತ್ತು ಚಂದ್ರಯಾನಕ್ಕೆ ಸಂಬಂಧಿಸಿದ ಚಿತ್ರಗಳು ಪ್ರದರ್ಶನಗೊಂಡವು.
ಶತಪವ೯ದಲ್ಲಿ ಮಹಿಳೆಯರಿಗಾಗಿ ವಿವಿಧ ಕರಕುಶಲ, ಉಡುಗೆ, ಚಿನ್ನಾಭರಣಗಳ ಮಳಿಗೆಗಳನ್ನು ತೆರೆಯಲಾಗಿದ್ದು ಸಮ್ಮೇಳನಕ್ಕೆ ಭಾನುವಾರ ಮಧ್ಯಾಹ್ನ ತೆರೆ ಬೀಳಲಿದೆ.