ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಮುಂಚೂಣಿ ಘಟಕಗಳ ಆಯ್ಕೆಯಲ್ಲಿ ಕಾರ್ಯಕರ್ತರ ವೈಯಕ್ತಿಕ ಹಾಗೂ ಸಾಮೂಹಿಕ ಅಭಿಪ್ರಾಯಗಳಿಗೆ ಮನ್ನಣೆ ನೀಡಲಾಗುವುದು ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ದಾವಣಗೆರೆ ಜಿಲ್ಲಾ ವೀಕ್ಷಕ ರಾಹುಲ್ ಬಾಲ ತಿಳಿಸಿದ್ದಾರೆ.

- ಹರಿಹರದಲ್ಲಿ ಎಐಸಿಸಿ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ರಾಹುಲ್ ಬಾಲ ಹೇಳಿಕೆ

- - -

ಕನ್ನಡಪ್ರಭ ವಾರ್ತೆ ಹರಿಹರ

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಮುಂಚೂಣಿ ಘಟಕಗಳ ಆಯ್ಕೆಯಲ್ಲಿ ಕಾರ್ಯಕರ್ತರ ವೈಯಕ್ತಿಕ ಹಾಗೂ ಸಾಮೂಹಿಕ ಅಭಿಪ್ರಾಯಗಳಿಗೆ ಮನ್ನಣೆ ನೀಡಲಾಗುವುದು ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ದಾವಣಗೆರೆ ಜಿಲ್ಲಾ ವೀಕ್ಷಕ ರಾಹುಲ್ ಬಾಲ ತಿಳಿಸಿದರು.

ನಗರದ ಎಚ್‌.ಕೆ.ವಿ. ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಸಂಘಟನಾ ಸೃಜನ್ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಪೂರಕವಾಗಿ ಪಕ್ಷದ ವರಿಷ್ಠ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಸಂಘಟನಾ ಸೃಜನ್ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.‌ ಈ ಮೂಲಕ ಪಕ್ಷದ ಪದಾಧಿಕಾರಿಗಳಿಗೆ, ಅರ್ಹ, ಸಮರ್ಥ,‌ ಪ್ರಾಮಾಣಿಕ ಕಾರ್ಯಕರ್ತರಿಗೆ ಪಕ್ಷದ ಕೆಲಸ ಮಾಡಲು ಅವಕಾಶ ನೀಡಲಾಗುವುದು ಎಂದರು.

ಪಕ್ಷದ ಜಿಲ್ಲಾ ಅಧ್ಯಕ್ಷರು ಈಗ ನಿರ್ಣಾಯಕರಾಗಿದ್ದು, ಮೇಲ್ಮನೆ ಸದಸ್ಯರು ಸೇರಿದಂತೆ ಇತರೆ ನೇಮಕಗಳಲ್ಲಿ ಅವರ ಅಭಿಪ್ರಾಯಕ್ಕೆ ಹೆಚ್ಚು ಮನ್ನಣೆ ಸಿಗಲಿದೆ. ಕಾರ್ಯಕರ್ತರ ಧ್ವನಿಯಾಗಿ ಕೆಲಸ ಮಾಡುವ ವ್ಯಕ್ತಿಯನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕರ್ತರ ಅಭಿಪ್ರಾಯವೇ ಮುಖ್ಯ. ಪ್ರತಿ ಕಾರ್ಯಕರ್ತರ ವೈಯಕ್ತಿಕ ಅಥವಾ ಸಾಮೂಹಿಕ ಅಭಿಪ್ರಾಯ ಪಡೆಯಲಾಗುವುದು. ನಿಮ್ಮ ಅಭಿಪ್ರಾಯದ ಮೇರೆಗೆ ಪಕ್ಷದ ಪ್ರಮುಖ ಘಟಕಗಳ ಅಧ್ಯಕ್ಷರ ಆಯ್ಕೆಯಲ್ಲಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಪದವಿಗೆ ಬಂದವರು ಕಾರ್ಯಕರ್ತರ ಮನದಾಳದ ಅಭಿಪ್ರಾಯಗಳಿಗೆ ಮನ್ನಣೆ ನೀಡಿ, ಕಾರ್ಯಕರ್ತರ ಸಮಸ್ಯೆಗಳನ್ನು ‌ಬಗೆಹರಿಸಿ, ಪಕ್ಷವನ್ನು ಸಂಘಟಿಸಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಜಕ್ಕಪ್ಪ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷದ ಬಲವರ್ಧನೆಗೆ ಮಂಚೂಣಿ ಘಟಕಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡಲು ಸಂಘಟನೆ ಸೃಜನ್ ಅಭಿಯಾನವನ್ನು ಆಯೋಜಿಸಲಾಗಿದೆ ಎಂದರು.

ಎಐಸಿಸಿ ಉಸ್ತುವಾರಿಗಳಾದ ಮೀನುಗಾರಿಕೆ ನಿಗಮ ಮಂಡಳಿಯ ರಾಜ್ಯಾಧ್ಯಕ್ಷ ಮಂಜುನಾಥ್ ಸುಣಗಾರ, ಜಿಪಂ ಮಾಜಿ ಸದಸ್ಯೆ ಅನಿತಾ ಕುಮಾರಿ, ಕೆಪಿಸಿಸಿ ಉಪಾಧ್ಯಕ್ಷ ಶಾಕಿರ್ ಸನ್ನಿಧಿ, ಮಾಜಿ ಶಾಸಕ ಎಸ್.ರಾಮಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ. ಹನುಮಂತಪ್ಪ, ಮಲೇಬೆನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಭಿದ್ ಅಲಿ, ಕೆಪಿಸಿಸಿ ವಕ್ತಾರ ರೇವಣಸಿದ್ದಪ್ಪ, ನಗರಸಭೆ ಸದಸ್ಯರಾದ ಶಂಕರ್ ಕಟಾವಕರ್, ರಜನಿಕಾಂತ್, ವಸಂತ್ ಕುಮಾರ್, ಸುಮಿತ್ರ ಮರಿದೇವ್, ರಾಜ್ಯ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ನಿಖಿಲ್ ಕೊಂಡಜ್ಜಿ, ಅಬು ತಾಹಿರ್, ಜಿಲ್ಲಾ ಎನ್ಎಸ್ ಯುವೈ ಅಧ್ಯಕ್ಷ ಅಲಿ ರಹಮತ್ ಪೈಲ್ವಾನ್, ಎನ್‌ಎಸ್‌ಯುವೈ ತಾಲೂಕು ಅಧ್ಯಕ್ಷ ಯಮನೂರ, ಕಾರ್ಯಕರ್ತರು, ಪದಾಧಿಕಾರಿಗಳು ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.

- - -

-27HRR.01:

ಹರಿಹರದ ಎಚ್.ಕೆ.ವಿ. ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಸಂಘಟನಾ ಸೃಜನ್ ಅಭಿಯಾನ ಕಾರ್ಯಕ್ರಮದಲ್ಲಿ ಎಐಸಿಸಿ ವೀಕ್ಷಕ, ಜಿಲ್ಲಾ ಉಸ್ತುವಾರಿ ರಾಹುಲ್ ಬಾಲ ಮಾತನಾಡಿದರು.