ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಒಡವೆಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಗಾಂಧಿ ನಗರ ಪೊಲೀಸರು ಬಂಧಿಸಿದ್ದಾರೆ.

- ಆಭರಣ ಕದ್ದ ಪೂಜಾರಿ ಆಕಾಶ್, ಕರಗಿಸಲು ಸಹಕರಿಸಿದ್ದ ಲಾಂಚ್‌ಗೆ ನ್ಯಾಯಾಂಗ ಬಂಧನ

- ಗಾಂಧಿ ನಗರ ಠಾಣೆಗೆ ದೂರು ನೀಡಿದ್ದ ದೇವಸ್ಥಾನ ಧರ್ಮದರ್ಶಿ ಎಚ್.ಬಿ.ಗೋಣೆಪ್ಪ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಒಡವೆಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಗಾಂಧಿ ನಗರ ಪೊಲೀಸರು ಬಂಧಿಸಿದ್ದಾರೆ.

ದುಗ್ಗಮ್ಮ ದೇವಸ್ಥಾನದ ಪೂಜಾರಿಕೆ ಮಾಡುವ ಕುಟುಂಬದ ಆಕಾಶ್ ಹಾಗೂ ಆಭರಣಗಳನ್ನು ಕರಗಿಸಲು ಸಹಕರಿಸಿದ್ದ ಲಾಂಚ್ ಎಂಬವನನ್ನು ಇಲ್ಲಿನ ಗಾಂಧಿ ನಗರ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ದೇವಸ್ಥಾನ ಟ್ರಸ್ಟ್‌ ನೀಡಿದ ಮಾಹಿತಿಯಂತೆ ದೇವಿಯ 2 ಚಿನ್ನದ ಕಣ್ಣುಗಳು, 59 ಕಾಸುಗಳ ಚಿನ್ನದ ಕಾಸಿನ ಸರ (ಕೊಂಡಿ ಸಹಿತ), ಚಿನ್ನದ ಗುಂಡಿನ ಸರ (40 ಗುಂಡು, 2 ತಾಳಿ, 3 ಹವಳ ಹಾಗೂ 4 ಕರಿಮಣಿ ಸಹಿತ), ಚಿನ್ನದ ಪದಕದ ಸರ (1 ದೊಡ್ಡ ಪದಕ, 31 ಸಣ್ಣ ಪದಕ ಹಾಗೂ 32 ಸಣ್ಣ ಗುಂಡುಗಳುಳ್ಳ ಸರ), ಚಿನ್ನದ ನೆಲ್ಲಿಕಾಯಿ ಗುಂಡಿನ ಸರ (50 ಗುಂಡುಗಳು ಕರಿದಾರ ಸಹಿತ), 25 ಬೇವಿನ ಕಾಯಿ ಗುಂಡಿನ ಬಂಗಾರದ ಸರ (ಕೊಂಡಿ ಸಹಿತ) ಸೇರಿದಂತೆ ಸುಮಾರು ₹28 ಲಕ್ಷ ಮೌಲ್ಯದ 200 ಗ್ರಾಂ ಚಿನ್ನದ ಆಭರಣಗಳು ಕಳವಾದ ಮಾಹಿತಿ ಇದೆ. ಇದೀಗ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ದೇವಸ್ಥಾನ ಟ್ರಸ್ಟ್ ನಿರ್ಧಾರದಂತೆ ಕಳೆದ 24ರಿಂದ ಆಕಾಶ್ ಸೇರಿದಂತೆ 18 ಜನ ಪೂಜಾರಿಗಳನ್ನು ನೇಮಿಸಿ, ದೇವಿಯ 34 ಚಿನ್ನದ ಆಭರಣಗಳನ್ನು ಹಸ್ತಾಂತರಿಸಲಾಗಿತ್ತು. ಜುಲೈ 9ರಂದು ಪರಿಶೀಲಿಸಿದಾಗ 6 ಪ್ರಮುಖ ಚಿನ್ನಾಭರಣ ನಾಪತ್ತೆಯಾಗಿದ್ದು ಬೆಳಕಿಗೆ ಬಂದಿತ್ತು. ದೇವಸ್ಥಾನದ ಮಟ್ಟದಲ್ಲೇ ಮಾತುಕತೆ ನಡೆಸಿ, ಒಡವೆ ಪಡೆಯಲು ಯತ್ನಿಸಲಾಗಿತ್ತು. ಒಡವೆ ಕರಗಿಸಿ ಮಾರಾಟ ಮಾಡಿರುವುದು ಗೊತ್ತಾದ ನಂತರ ದೇವಸ್ಥಾನದ ಧರ್ಮದರ್ಶಿ ಎಚ್.ಬಿ.ಗೋಣೆಪ್ಪ ಪೊಲೀಸ್ ಠಾಣೆಗೆ ಅಧಿಕೃತವಾಗಿ ದೂರು ನೀಡಿದ್ದರು. ಈ ಬಗ್ಗೆ ಗಾಂಧಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

- - -