ಕಾವೇರಿ ಆರತಿ ಹೆಸರಿನಲ್ಲಿ ದುಂದುವೆಚ್ಚ: ಇಂಡುವಾಳು ಚಂದ್ರಶೇಖರ್

| Published : Apr 27 2025, 01:31 AM IST

ಸಾರಾಂಶ

ಮೈಷುಗರ್ ಆವರಣದಲ್ಲಿ ನಾಗರ ಹಾವು ಬಂತೆಂಬ ಕಾರಣಕ್ಕೆ ೧೩ ಬೆಲೆ ಬಾಳುವ ಮರಗಳನ್ನು ಕಡಿದು ಹಾಕಿದ್ದಾರೆ. ಮೊನ್ನೆ ಮೊನ್ನೆ ಮಿಮ್ಸ್‌ಗೆ ಹಾವು ಬಂದಿತ್ತು. ಅದಕ್ಕೆ ಕಟ್ಟಡವನ್ನೇ ಕೆಡವಿದರಾ. ಇತ್ತೀಚೆಗೆ ವಿಧಾನಸೌಧಕ್ಕೂ ಹಾವು ಬಂದಿತ್ತು. ವಿಧಾನಸೌಧವನ್ನೇ ಕೆಡವಿದರೇ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾವೇರಿ ಆರತಿ ಹೆಸರಿನಲ್ಲಿ ಸರ್ಕಾರ ೯೨ ಕೋಟಿ ರು. ಹಣವನ್ನು ದುಂದುವೆಚ್ಚ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರಕ್ಕೆ ಜಿಲ್ಲೆಯನ್ನು ಅಭಿವೃದ್ಧಿಯತ್ತ ಮುನ್ನಡೆಸುವ ಆಲೋಚನೆಗಳೇ ಇಲ್ಲ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಆರೋಪಿಸಿದರು.

ಕಾವೇರಿ ಆರತಿ ಬೇಕು ಎಂದು ಕೇಳಿದ್ದವರು ಯಾರು? ಅದರಿಂದ ರೈತರಿಗೆ ಏನು ಉಪಯೋಗ? ರೈತರಿಗೆ ನಿಜವಾಗಲೂ ಬೇಕಾಗಿರುವುದು ನೀರು. ಮದ್ದೂರು ಮತ್ತು ಮಳವಳ್ಳಿ ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಕೊನೆಯ ಭಾಗಕ್ಕೆ ನೀರು ತಲುಪಿಸುವುದಕ್ಕೆ ಯೋಜನೆಯನ್ನು ರೂಪಿಸದೆ ಅನಗತ್ಯ ಯೋಜನೆಗಳಿಗೆ ಸಾರ್ವಜನಿಕ ಹಣವನ್ನು ದುಂದುವೆಚ್ಚ ಮಾಡುತ್ತಿರುವುದು ಸರಿಯೇ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಕಾವೇರಿ ಆರತಿ ಮತ್ತು ಅಮ್ಯೂಸ್‌ಮೆಂಟ್ ಪಾರ್ಕ್ ಹೆಸರಿನಲ್ಲಿ ರಾಜ್ಯ ಸರ್ಕಾರ ವ್ಯಾಪಾರೀಕರಣಕ್ಕೆ ಮುಂದಾಗಿದೆ. ಈಗಾಗಲೇ ಬೃಂದಾವನಕ್ಕೆ ಹೋಗುವ ಪ್ರವಾಸಿಗರ ಪಾರ್ಕಿಂಗ್‌ಗೆ ೩೦೦ ರಿಂದ ೪೦೦ ರು. ಮಾಡಿದ್ದಾರೆ. ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣವಾದಲ್ಲಿ ಇನ್ನೂ ಹೆಚ್ಚು ದರ ನಿಗದಿ ಮಾಡುತ್ತಾರೆ. ಆಳುವವರು ಕೆಆರ್‌ಎಸ್‌ನ್ನು ಕೇವಲ ವ್ಯಾಪಾರೀಕರಣ ದೃಷ್ಟಿಯಿಂದ ನೋಡುತ್ತಿದ್ದಾರೆಯೇ ವಿನಃ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ಕಾಣುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಆಳುವ ಸರ್ಕಾರಗಳು ರೈತರಿಗೆ ಮತ್ತು ರಾಜ್ಯದ ಜನರ ಒಳಿತಿಗಾಗಿ ಯೋಜನೆಗಳನ್ನು ರೂಪಿಸಬೇಕು. ಅದು ಬಿಟ್ಟು ಅಣೆಕಟ್ಟೆಗೆ ಮಾರಕವಾಗುವಂತಹ ಯೋಜನೆಗಳನ್ನು ರೂಪಿಸಿ ಅವುಗಳಿಂದ ಅಣೆಕಟ್ಟೆಗೆ ಧಕ್ಕೆಯಾದರೆ ಯಾರು ಹೊಣೆ, ಇವರು ೫ ವರ್ಷಗಳ ಕಾಲ ಅಧಿಕಾರದಲ್ಲಿರುತ್ತಾರೆ. ನಂತರ ಹೋಗುತ್ತಾರೆ. ಇದರ ಜವಾಬ್ದಾರಿ ತೆಗೆದುಕೊಳ್ಳುವವರು ಯಾರು ಎಂದು ಪ್ರಶ್ನಿಸಿದರು.

ಕೃಷಿಗಾಗಿ ಕೆಆರ್‌ಎಸ್ ಕಟ್ಟಿದ್ದು:

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರೈತರ ಕೃಷಿ ಚಟುವಟಿಕೆಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಕೆಆರ್‌ಎಸ್ ನಿರ್ಮಾಣ ಮಾಡಿದರು. ಆಳುವ ಸರ್ಕಾರಗಳು ಬಂದ ನಂತರ ಅದನ್ನು ಕುಡಿಯುವ ನೀರಿಗಾಗಿಯೂ ಬಳಸಿಕೊಳ್ಳಲು ಪ್ರಾರಂಭಿಸಿವೆ. ಬೆಂಗಳೂರಿಗೆ ಅತಿ ಹೆಚ್ಚು ನೀರನ್ನು ಕೊಂಡೊಯ್ಯುತ್ತಿದ್ದಾರೆ. ಇದರೊಂದಿಗೆ ಅಮ್ಯೂಸ್‌ಮೆಂಟ್ ಪಾರ್ಕ್ ಎಂಬ ಹೆಸರಿನಲ್ಲಿ ವ್ಯಾಪಾರೀಕರಣ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಸರ್ಕಾರಕ್ಕೆ ನಿಜವಾಗಲೂ ರೈತರ ಬಗ್ಗೆ ಕಾಳಜಿ ಇದ್ದಲ್ಲಿ ಮೊದಲು ನಾಲೆಗಳನ್ನು ಆಧುನೀಕರಣಗೊಳಿಸಿ, ಕೊನೆ ಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪಿಸುವ ಕೆಲಸ ಮಾಡಲಿ. ಒಂದು ಬಾರಿ ನೀರು ತಲುಪಿದರಷ್ಟೇ ಕೊನೇ ಭಾಗದ ರೈತರು ಸಂತಸ ಪಡಬೇಕು. ಉಳಿದ ಸಂದರ್ಭದಲ್ಲಿ ನೀರೇ ಹೋಗುವುದಿಲ್ಲ. ಇದನ್ನು ಮೊದಲು ಸರಿಪಡಿಸಿ ಎಂದು ಒತ್ತಾಯಿಸಿದರು.

ಕಾವೇರಿಗೆ ಆರತಿ ಎಂಬ ಸ್ಲೋಗನ್ ಬಳಸಿ ಅಲ್ಲಿನ ಪರಿಸರ ಮತ್ತು ನೈರ್ಮಲ್ಯಕ್ಕೆ ಧಕ್ಕೆ ಉಂಟುಮಾಡುತ್ತಿದ್ದಾರೆ. ಹಣ ಮಾಡುವುದೇ ಯೋಜನೆಯ ಮೂಲ ಉದ್ದೇಶವಾಗಿದೆ. ಇಂತಹ ಯೋಜನೆಗಳಿಂದ ಕಾವೇರಿ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ಯಾವುದೇ ಅನುಕೂಲವಾಗುವುದಿಲ್ಲ. ಕಾವೇರಿ ಆರತಿ ಹಿಂದೆ ಸರ್ಕಾರ ಲಾಭದ ಉದ್ದೇಶವಿದೆಯೇ ವಿನಃ ಬೇರೆನೂ ಅಲ್ಲ ಎಂದು ಹೇಳಿದರು.

ರೈತ ಸಂಘದ ಮಾಧ್ಯಮ ಕಾರ್ಯದರ್ಶಿ ಸೋ.ಸಿ. ಪ್ರಕಾಶ್ ಮಾತನಾಡಿ, ಕಾವೇರಿ ಆರತಿ ಮತ್ತು ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆ ವಿರೋಧಿಸಿ ಜಿಲ್ಲಾ ರೈತ ಏಕೀಕರಣ ಸಮಿತಿ ವತಿಯಿಂದ ಏ.೧೭ರಂದು ಸಭೆ ಸೇರಿ ಚರ್ಚೆ ನಡೆಸಿದ್ದು, ಈ ಯೋಜನೆಗಳ ವಿರುದ್ಧ ಮೇ ೬ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸರ್ಕಾರ ಈ ಯೋಜನೆಯನ್ನು ಕೈ ಬಿಡದಿದ್ದರೆ ಹಂತ ಹಂತವಾಗಿ ಹೋರಾಟ ರೂಪಿಸಿ ಜಿಲ್ಲೆಯ ರೈತರು, ಸಾರ್ವಜನಿಕರು, ಸಂಘ- ಸಂಸ್ಥೆಗಳೊಂದಿಗೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಾಗರ ಹಾವು ಹರಿದಾಡಿದ್ದಕ್ಕೆ ೧೩ ಮರ ಕಡಿದರು:

ತಾಲೂಕು ರೈತ ಸಂಘದ ಅಧ್ಯಕ್ಷ ಶಿವಳ್ಳಿ ಚಂದ್ರು ಮಾತನಾಡಿ, ಮೈಷುಗರ್ ಆವರಣದಲ್ಲಿ ನಾಗರ ಹಾವು ಬಂತೆಂಬ ಕಾರಣಕ್ಕೆ ೧೩ ಬೆಲೆ ಬಾಳುವ ಮರಗಳನ್ನು ಕಡಿದು ಹಾಕಿದ್ದಾರೆ. ಮೊನ್ನೆ ಮೊನ್ನೆ ಮಿಮ್ಸ್‌ಗೆ ಹಾವು ಬಂದಿತ್ತು. ಅದಕ್ಕೆ ಕಟ್ಟಡವನ್ನೇ ಕೆಡವಿದರಾ. ಇತ್ತೀಚೆಗೆ ವಿಧಾನಸೌಧಕ್ಕೂ ಹಾವು ಬಂದಿತ್ತು. ವಿಧಾನಸೌಧವನ್ನೇ ಕೆಡವಿದರೇ. ಅಧ್ಯಕ್ಷರು ಇಂತಹ ಧೋರಣೆ ಅನುಸರಿಸುವುದನ್ನು ಬಿಟ್ಟು ಕಾರ್ಖಾನೆ ಅಭಿವೃದ್ಧಿಗೆ ಮುಂದಾಗಲಿ ಎಂದು ಸಲಹೆ ನೀಡಿದರಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ. ಆದರೆ, ಪೊಲೀಸರು ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಮಂಜೇಗೌಡ, ಮುಖಂಡರಾದ ಮಹೇಂದ್ರ, ಮಲ್ಲೇಶ್, ಲಿಂಗರಾಜು ಗೋಷ್ಠಿಯಲ್ಲಿದ್ದರು.