ದುನಿಯಾ ಜುಗತಿ ಹೈ ಜುಕಾನೆ ವಾಲಾ ಚಾಹಿಯೇ

| Published : Dec 11 2024, 12:45 AM IST

ಸಾರಾಂಶ

ನಮ್ಮನ್ನು‌ ಪರೀಕ್ಷೆ ಮಾಡಬೇಡಿ, ೧೦ ಲಕ್ಷ ಜನರನ್ನು ಸೇರಿಸಬಲ್ಲೆವು. ೬೦೦೦ ಮಂದಿ ಪೊಲೀಸರನ್ನು ತಂದು ನಮ್ಮನ್ನು ಹೆದರಸ್ತೀರಾ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಯತ್ನಾಳ ಗುಡುಗಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಮ್ಮನ್ನು‌ ಪರೀಕ್ಷೆ ಮಾಡಬೇಡಿ, ೧೦ ಲಕ್ಷ ಜನರನ್ನು ಸೇರಿಸಬಲ್ಲೆವು. ೬೦೦೦ ಮಂದಿ ಪೊಲೀಸರನ್ನು ತಂದು ನಮ್ಮನ್ನು ಹೆದರಸ್ತೀರಾ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಯತ್ನಾಳ ಗುಡುಗಿದರು.

ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸುವರ್ಣಸೌಧದ ಮುಂಭಾಗ ಕೊಂಡಸಕೊಪ್ಪದಲ್ಲಿ ಮಂಗಳವಾರ ನಡೆದ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಲಿಂಗಾಯತ ಪಂಚಮಸಾಲಿ ಸಮಾಜ ಹಾಗೂ ವಕೀಲರ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದ ಬಡ ಮಕ್ಕಳಿಗೆ ನ್ಯಾಯ ಒದಗಿಸಲು ನಮ್ಮ ಜತೆಗೆ ಕೂಡಲಸಂಗಮ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಕೈಜೋಡಿಸಿದ್ದಾರೆ. ವಕೀಲರು ಕೈ ಜೋಡಿಸಿದ್ದರಿಂದ ಕಾನೂನಾತ್ಮಕ ಬಲ ಸಿಕ್ಕಿದೆ. ಪಂಚಮಸಾಲಿ ಹೋರಾಟಗಾರರ ಟ್ರ್ಯಾಕ್ಟರ್‌ ತಡೆಯಲು ಬೆಳಗಾವಿ ಜಿಲ್ಲಾಧಿಕಾರಿ ಯತ್ನಿಸಿದ್ದರು. ಇದರ ವಿರುದ್ಧ ವಿಧಾನಸೌಧದಲ್ಲಿ ಪಕ್ಷಾತೀತವಾಗಿ ಸಮಾಜದ ಶಾಸಕರು, ಸಚಿವರು ಹೋರಾಡಿದ್ದರ ಫಲವಾಗಿ ಜಿಲ್ಲಾಧಿಕಾರಿ ತಮ್ಮ ಆದೇಶ ವಾಪಸ್‌ ಪಡೆದಿದ್ದಾರೆ. ದುನಿಯಾ ಜುಗತಿ ಹೈ ಜುಕಾನೆ ವಾಲಾ ಚಾಹಿಯೇ (ಜಗತ್ತು ಬಗ್ಗುತ್ತೆ ಆದರೆ ಬಗ್ಗಿಸುವವರು ಬೇಕು) ಎಂಬ ಯತ್ನಾಳ ಡೈಲಾಗ್‌ ಹೇಳಿತ್ತಿದ್ದಂತೆ ನೆರೆದ ಜನರ ಚಪ್ಪಾಳೆ, ಸಿಳ್ಳೆ, ಕೇ ಕೇ ಮುಗಿಲು ಮುಟ್ಟಿತು.

ಉತ್ತರ ಕರ್ನಾಟಕ ಪ್ರತಿ ವಿಧಾನಸಭಾ ಮತಕ್ಷೇತ್ರದಲ್ಲಿ ಪಂಚಮಸಾಲಿ ಸಮಾಜದವರು ಹೆಚ್ಚಿಗೆಯಿದ್ದಾರೆ. ನಿಮ್ಮ ಸಮಾಜಕ್ಕೆ ಬೆಂಬಲ‌ ಕೊಡ್ತೀವಿ ಎಂದು ಜೆಡಿಎಸ್ ಪಕ್ಷದವರು ಸಹ ಬೆಂಬಲ ಸೂಚಿಸಿದರು. ಜೆಡಿಎಸ್ ನಾಯಕ‌ ಬೊಮ್ಮನಹಳ್ಳಿ ನನಗೆ ಬಂದು‌‌ ಹೇಳಿದರು. ಪ್ರತಿ ಮತಕ್ಷೇತ್ರದಲ್ಲಿ ನಿಮ್ಮ‌ ಮತದಾರರು ಇದ್ದಾರೆಂದು ಜೆಡಿಎಸ್‌ನವರು ಸಹ ವಿಧಾನಸಭೆಯ ಬಾವಿಗೆ ಇಳಿದು ನಮ್ಮ ಪರ ಮಾತನಾಡಿದರು. ಲಕ್ಷ್ಮೀ ಹೆಬ್ಬಾಳಕರ್‌ ಗಟ್ಟಿಯಾಗಿ ಮಾತನಾಡಿದರು. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ತೊಡಕಿನ ಬಗ್ಗೆ ಹೇಳುತ್ತಿದ್ದಾರೆ. ಈ ನೆಪ ಬೇಡ. ನಮ್ಮ ಸಮಾಜಕ್ಕೆ ನ್ಯಾಯ ಸಿಗಬೇಕು. ಮೀಸಲಾತಿ ಬಗ್ಗೆ ಸರ್ಕಾರ ಒಪ್ಪಿಗೆ ಕೊಡಬೇಕು. ಇಲ್ಲವಾದರೇ ಮುಂದಿನ ಹೋರಾಟದ ಬಗ್ಗೆ ಶ್ರೀಗಳು ನಿರ್ಣಾಯ ಮಾಡುತ್ತಾರೆ ಎಂದು ತಿಳಿಸಿದರು.ಹೋರಾಟದ ನೇತೃತ್ವ ವಹಿಸಿಕೊಂಡಿರುವ ಕೂಡಲಸಂಗಮ ಲಿಂಗಾಯತ ಪಂಚಮಸಾಲಿಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ನಮ್ಮದು ನ್ಯಾಯಯುತ ಹೋರಾಟವಾಗಿದೆ. ಇದಕ್ಕಾಗಿ ಹಲವು ವರ್ಷಗಳಿಂದ ಹೋರಾಟ ಮಾಡಿದರೂ ಕೇವಲ ಆಶ್ವಾಸನೆ ಮಾತ್ರ ಸಿಗುತ್ತಿದೆ. ಈ ಬಾರಿ ಹಾಗಾಗಬಾರದು. ಸಿಎಂ ಸಿದ್ದರಾಮಯ್ಯನವರು ಹೋರಾಟದ ವೇದಿಕೆಗೆ ಬರಬೇಕು. ಸಿಎಂ ಬರೋದಾದ್ರೆ ಸುವರ್ಣ ಸೌಧ ಬಳಿ ಧರಣಿ ಕೈಬಿಡಲು ಸಮಾಜದ ಜನ ಹೇಳುತ್ತಿದ್ದಾರೆ. ಸಿಎಂ ಅವರ ಪ್ರೀತಿಯ ಮೂರು ಜನ ಸಚಿವರು ಬಂದಿದ್ದೀರಿ. ಆದರೆ, ಸಿಎಂ ಸಿದ್ದರಾಮಯ್ಯ ವೇದಿಕೆಗೆ ಬರಬೇಕು ಎಂಬುವುದು ನಮ್ಮ ಆಗ್ರಹ. ಇಲ್ಲವಾದಲ್ಲಿ ಅನಿವಾರ್ಯವಾಗಿ ಸಂಘರ್ಷದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಮೀಸಲಾತಿ ಸಿಗದಿದ್ದರೆ ಅಧಿವೇಶನ ನಡೆಯಲು ಬಿಡಲ್ಲ: ಕಡಾಡಿ

ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಮಾತನಾಡಿ, ಕಾರ್ಯಕರ್ತರು ಶಿಸ್ತಿನಿಂದ ವರ್ತಿಸಬೇಕು. ನಾವು ಮೀಸಲಾತಿ ಕೇಳಲು ಬಂದಿದ್ದೇವೆ. ಸಮಾಜದ ಮುಖಂಡರು ಕುಳಿತಿದ್ದಾರೆ. ಇದಕ್ಕೆ ಒಂದು ನೇತೃತ್ವ‌ವಿದೆ. ಅವರು ನಿರ್ಣಯ ಮಾಡ್ತಾರೆ. ಅನೇಕ‌ ಜನ‌ ನಮ್ಮನ್ನು ನೋಡಿ ಮಾತಾಡಿಕೊಳ್ಳುತ್ತಿದ್ದಾರೆ. ರಾಜಕೀಯವಾಗಿ ಹೋರಾಟ ಬಳಸಿಕೊಳ್ಳುತ್ತಿದ್ದಾರೆ. ಹಲವು ವರ್ಷಗಳಿಂದ ಸ್ವಾಮೀಜಿ ಮುತ್ತಿಗೆ ಹಾಕುವ ಕೆಲಸ ಮಾಡಿದ್ದಾರೆ. ಆದರೆ, ಅದು ಈಡೇರಿಲ್ಲ. ನಾವು ಸರ್ಕಾರಕ್ಕೆ ಒತ್ತಡ ತಂದಿದ್ದೇವು. ನಮ್ಮ ಸರ್ಕಾರ ಇದ್ದಾಗ ಚುನಾವಣೆ ವೇಳೆ‌ ಕೆಲ ನಿರ್ಧಾರ ತಗೊಂಡಿದ್ದೇವು. ಆದರೆ, ಅದನ್ನು ಕೆಲವರು ಒಪ್ಪಲಿಲ್ಲ. ಈಗ ಮತ್ತೆ ಸಿಎಂ ಅವರಿಗೆ ಮನವಿ ಮಾಡಿದ್ದೇವೆ. ಆದರೆ, ಮುಖ್ಯಮಂತ್ರಿ ಕಡೆಯಿಂದ ಪೂರಕವಾದ ಮಾತು ಸಿಕ್ಕಿಲ್ಲ. ಮೊದಲು ಉಪಚುನಾವಣೆ ನೆಪ ಹೇಳಿ‌ ತಪ್ಪಿಸಿದರು. ಚುನಾವಣೆ ಮುಗಿದ ಮೇಲೆ ಇದರ ಬಗ್ಗೆ ಮಾಡಲಿಲ್ಲ. ೨ಎ ಮೀಸಲಾತಿ ಕೊಡುವವರೆಗೆ ಸ್ವಾಮೀಜಿ ಕೂಡುವುದಿಲ್ಲ ಎಂದು ಕಾಲಿಗೆ‌‌ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರ ಎಂದರು.

ಎಲ್ಲರು ಸೇರಿ ಮುಂದೆ ಏನು ಮಾಡಬೇಕೆಂದು ನಿರ್ಣಯ ಮಾಡಬೇಕಿದೆ. ಬೆಲ್ಲದ, ಯತ್ನಾಳ, ಸ್ವಾಮೀಜಿ ಸೇರಿ ನಿರ್ಣಯ ಮಾಡ್ತಾರೆ. ಮೀಸಲಾತಿ ಸಿಗದೇ‌ ಇದ್ದರೆ ಅಧಿವೇಶನ ನಡೆಯಲು ಬಿಡಲ್ಲ. ಸರ್ಕಾರ ಬದಲಾವಣೆ ಮಾಡುವ ನಿರ್ಣಯ ಮಾಡಬೇಕಾಗುತ್ತದೆ. ಮಠದ ಬೆಂಬಲದಿಂದ ಗೆದ್ದು ಬಂದವರು ತಿಳಿದುಕೊಳ್ಳಲಿ, ಮೀಸಲಾತಿ ಸಿಗುವವರೆಗೆ ಪಂಚಮಸಾಲಿಗರ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಪಂಚಮಸಾಲಿ ಎಂದು, ಬೇರೆಬೇರೆ ಕಡೆ ಬೇರೆ ಹೆಸರಿನಿಂದ ಕೆರೆಯಲಾಗುತ್ತದೆ. ನಾವೆಲ್ಲ ಅವಕಾಶದಿಂದ ವಂಚಿತರಾಗಿದ್ದೇವೆ ಎಂಬುವುದು ಸ್ವಾಮೀಜಿ ಹೋರಾಟದಿಂದ ಗೊತ್ತಾಗಿದೆ. ಇಡಿ ರಾಜ್ಯದಲ್ಲಿ ಸಮಾಜ ಒಗ್ಗೂಡಿದೆ. ನಾವು ಭೂಮಿ ಇದ್ದವರು ಎಂದು ಮೀಸಲಾತಿ ಸಿಕ್ಕಿಲ್ಲ. ಆದರೆ, ಈಗ ನಮ್ಮ ಭೂಮಿ ಕಡಿಮೆ ಆಗುತ್ತ ಬಂದಿದೆ. ಕುಟುಂಬ ನಡೆಸಲು ಪರದಾಡುವಂತಾಗಿದೆ. ಹಾಗಾಗಿ ಸಮಾಜಕ್ಕೆ ಮೀಸಲಾತಿಯ ಅವಶ್ಯಕತೆ ಇದೆ. ಕೆಲ‌ ಕೆಟಗರಿಯಲ್ಲಿ ಮುಸ್ಲಿಂ ಸಮಾಜಕ್ಕೆ ಮೀಸಲಾತಿ ಇದೆ. ನಮಗೆ ಮಾತ್ರ ಶೇ.೫ ಮೀಸಲು ಇದೆ. ಶೇ.೧೦ರಷ್ಟು ಇರುವ ಸಮಾಜಕ್ಕೆ ಶೇ.೨೩ ಮೀಸಲಾತಿ ಬೇಕಾಗಿಲ್ಲ. ಸರ್ಕಾರ ನಾಟಕ ಮಾಡುತ್ತ ಕೋರ್ಟ್‌ನಲ್ಲಿ ಸಮಸ್ಯೆ ಇತ್ಯರ್ಥ ಮಾಡುತ್ತಿಲ್ಲ. ಪಂಚಮಸಾಲಿಗರಿಗೆ ಏಕೆ ಮೀಸಲಾತಿ ಬೇಕು ಎಂದು ಕೇಳ್ತಾರೆ. ಪೊಲೀಸರು ನಮ್ಮ ಹೋರಾಟ ತಡೆಯುವ ಕೆಲಸ ಮಾಡಿದರು. ಮುಖ್ಯಮಂತ್ರಿ ಅವರೇ ಇಲ್ಲಿಗೆ ಬಂದು ಸ್ವಾಮೀಜಿ ಪಾದಕ್ಕೆ ನಮಸ್ಕಾರ ಮಾಡಿ ಮನವಿ ಸ್ವೀಕರಿಸಬೇಕು ಎಂದು ಒತ್ತಾಯಿಸಿದರು.ಒಗ್ಗಟ್ಟಿದ್ದರೇ ಮಾತ್ರ ನ್ಯಾಯ ಸಿಗಲಿದೆ: ಜೊಲ್ಲೆ

ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ನಾವು ನಮ್ಮ ಹಕ್ಕನ್ನ ಕೇಳ್ತಾ ಇದ್ದೀವಿ. ನಾವೆಲ್ಲರೂ ಒಗ್ಗಟ್ಟಿದ್ದರೇ ಮಾತ್ರ ನ್ಯಾಯ ಸಿಗಲಿದೆ. ಎಲ್ಲರೂ ಸೇರಿ ಹೋರಾಟ ಮಾಡೋಣ. ಸರ್ಕಾರದ ಗಮನ ಸೆಳೆಯೋಣ ಎಂದು ಕರೆ ನೀಡಿದರು.

ಶಾಸಕ ರಾಜು ಕಾಗೆ ಮಾತನಾಡಿ, 4 ವರ್ಷದಿಂದ ನಮಗೆ ನ್ಯಾಯ ಸಿಕ್ಕಿಲ್ಲ. ನಾವು ಸುವರ್ಣಸೌಧ ಮುತ್ತಿಗೆ ಹಾಕುತ್ತೇವೆ. ನಮ್ಮಲ್ಲಿ ಒಗ್ಗಟ್ಟಿನ ಪ್ರದರ್ಶನ ಇಲ್ಲ. ಕೊಡಲಿ ಗಿಡ ಕಡಿಯಲು ಹೋದಾಗ, ಕೊಡಲಿಗೆ ಕಾವು ಸಾಥ್ ಕೊಟ್ಟಿಲ್ಲ ಎಂದು ದುಃಖದಿಂದ ಹೇಳುತ್ತೇನೆ. ನಮ್ಮಲ್ಲಿ ಕೆಲ ನಾಯಕರು ಈ ಹೋರಾಟದಿಂದ ಹಿಂದೆ ಸರಿಯುತ್ತಾರೆ. ನಾವೆಲ್ಲ ಒಂದಾದಾಗ ಮಾತ್ರ ನಮಗೆ ಹೋರಾಟಕ್ಕೆ ಶಕ್ತಿ ಬರಲಿದೆ ಎಂದು ತಿಳಿಸಿದರು.ಈ ವೇಳೆ ಮಾಜಿ ಶಾಸಕ ಮಹೇಶ ಕುಮಠಳ್ಳಿ, ಮಾಜಿ ಸಚಿವರಾದ ಎ.ಬಿ.ಪಾಟೀಲ, ಸಿ.ಸಿ.ಪಾಟೀಲ, ಶಶಿಕಾಂತ ನಾಯ್ಕ, ಶಾಸಕ ಬಾಬಾಸಾಹೇಬ ಪಾಟೀಲ, ವಿಧಾನ ಮಾಜಿ ಶಾಸಕ ವಿ.ಐ.ಪಾಟೀಲ, ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮೃಣಾಲ್‌ ಹೆಬ್ಬಾಳಕರ, ಪಂಚಸೇನೆ ರಾಷ್ಟ್ರೀಯ ಅಧ್ಯಕ್ಷ ನಾಗರಾಜ ಹುಲಿ ಇತರರು ಪಾಲ್ಗೊಂಡಿದ್ದರು.ಬಿ.ವೈ.ವಿಜಯೇಂದ್ರ ವಿರುದ್ಧ ಘೋಷಣೆ

ಪಂಚಮಸಾಲಿ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಲು ಬಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವೇದಿಕೆ ಮೇಲೆ ಬರುತ್ತಿದ್ದಂತೆಯೇ ಶಾಸಕ ಯತ್ನಾಳ ಬೆಂಬಲಿಗರು ವಿಜಯೇಂದ್ರ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಗರಂ ಆದ ತೆರದಾಳ ಬಿಜೆಪಿ ಶಾಸಕ ಸಿದ್ದು ಸವದಿ ಘೋಷಣೆ ಕೂಗುತ್ತಿದ್ದ ಯತ್ನಾಳ ಬೆಂಬಲಿಗರೊಬ್ಬರ ಶರ್ಟ್‌ ಕಾಲರ್‌ ಹಿಡಿದು ಅವಾಜ್ ಹಾಕಿದ ಘಟನೆ ನಡೆಯಿತು. ತಕ್ಷಣ ಮಧ್ಯೆ ಪ್ರವೇಶಿಸಿದ ಪೊಲೀಸರು ಸಿದ್ದು ಸವದಿ ಅವರನ್ನು ತಡೆದರು. ಈ ವೇಳೆ ಮಾತನಾಡಿದ ವಿಜಯೇಂದ್ರ, ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ನಮ್ಮ ತಂದೆ ಯಡಿಯೂರಪ್ಪ ಸಹ ಮೀಸಲಾತಿ ಹೋರಾಟಕ್ಕೆ ವಿರೋಧ ಮಾಡಿಲ್ಲ ಎಂದು ಸಮುಜಾಯಿಸಿ ನೀಡಿದರು.ಸಚಿವರ ಮಾತಿಗೆ ಮನ್ನಣೆ ನೀಡದ ಹೋರಾಟಗಾರರು

ಸರ್ಕಾರದ ಪರವಾರಗಿ ಸಮಸ್ಯೆ ಆಲಿಸಲು ಸಚಿವರಾದ ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ, ಲಕ್ಷ್ಮೀ ಹೆಬ್ಬಾಳಕರ ಆಗಮಿಸಿದರು. ಡಿ.ಸುಧಾಕರ ಅವರು ಸರ್ಕಾರ ನಿಮ್ಮ ಬೇಡಿಕೆ ಬಗ್ಗೆ ಪರಿಶೀಲಿಸಲಿದೆ. ಹೋರಾಟ ಕೈಬಿಡುವಂತೆ ಮನವಿ ಮಾಡಿದರು. ಆದರೆ, ಶ್ರೀಗಳು ಇದಕ್ಕೆ ಒಪ್ಪದೇ ಮುಖ್ಯಮಂತ್ರಿಗಳು ವೇದಿಕೆಗೆ ಬರಬೇಕು ಎಂದು ಹೇಳಿದರು. ಈ ವೇಳೆ ಹೋರಾಟಗಾರರು ಕೂಗಾಟ, ಚೀರಾಟ ನಡೆಸಿ ಗದ್ದಲ ಏರ್ಪಟ್ಟಾಗ ಸಚಿವರು ಸಭೆಯಿಂದ ನಿರ್ಗಮಿಸಿದರು.