ಸಾರಾಂಶ
ಚನ್ನರಾಯಪಟ್ಟಣದ ಬಿಎಸ್‌ಎನ್‌ಎಲ್ ಕಚೇರಿ ಮುಂಭಾಗದಲ್ಲಿ ಕಳಪೆ ಬೆಣ್ಣೆ ಮಾರಾಟ ಮಾಡುವವರು ಹೆಚ್ಚುತ್ತಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ವಾರವಿಡೀ ಸಂತೆ ನಡೆಯುತ್ತದೆ. ಅದರಂತೆ ಚನ್ನರಾಯಪಟ್ಟಣದ ಶನಿವಾರದ ಸಂತೆ ಎಂದರೆ ಅದು ತಾಲೂಕಿಗೆ ಹೆಸರುವಾಸಿಯಾದ ಸಂತೆಯಾಗಿದೆ. ಈ ಸಂತೆಯಲ್ಲಿ ಬೆಣ್ಣೆಯು ಕೂಡ ಅತ್ಯುತ್ತಮವಾಗಿದೆ ಎಂಬ ಹೆಸರಿದೆ. ಆದರೆ ಕೆಲ ಕಿಡಿಗೇಡಿಗಳು ಈ ಸಂತೆಗೆ ಆಗಮಿಸಿ ಕಳಪೆ ಬೆಣ್ಣೆಯನ್ನು ಮಾರಾಟ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದಲ್ಲಿ ಪ್ರತಿವಾರ ನಡೆಯುವ ಶನಿವಾರದ ಸಂತೆಯಲ್ಲಿ ರೈತರ ಹೆಸರಿನಲ್ಲಿ ಕಳಪೆ ಬೆಣ್ಣೆ ತಯಾರಿಸಿ ಮಾರಾಟ ಮಾಡುವ ವ್ಯಾಪಾರಿಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಪಟ್ಟಣದ ಬಿಎಸ್‌ಎನ್‌ಎಲ್ ಕಚೇರಿ ಮುಂಭಾಗದಲ್ಲಿ ಕಳಪೆ ಬೆಣ್ಣೆ ಮಾರಾಟ ಮಾಡುವವರು ಹೆಚ್ಚುತ್ತಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ವಾರವಿಡೀ ಸಂತೆ ನಡೆಯುತ್ತದೆ. ಅದರಂತೆ ಚನ್ನರಾಯಪಟ್ಟಣದ ಶನಿವಾರದ ಸಂತೆ ಎಂದರೆ ಅದು ತಾಲೂಕಿಗೆ ಹೆಸರುವಾಸಿಯಾದ ಸಂತೆಯಾಗಿದೆ. ಈ ಸಂತೆಯಲ್ಲಿ ಬೆಣ್ಣೆಯು ಕೂಡ ಅತ್ಯುತ್ತಮವಾಗಿದೆ ಎಂಬ ಹೆಸರಿದೆ. ಆದರೆ ಕೆಲ ಕಿಡಿಗೇಡಿಗಳು ಈ ಸಂತೆಗೆ ಆಗಮಿಸಿ ಕಳಪೆ ಬೆಣ್ಣೆಯನ್ನು ಮಾರಾಟ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯನ್ನು ಇಂದು ಹಾಸನ ಮತ್ತು ಕೊಡಗು ಜಿಲ್ಲೆಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಅಂಕಿತ ಅಧಿಕಾರಿ ಡಾ. ಅನಿಲ್ ದಾವ್‌ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಅವರು, ಸುಮಾರು ೧೫ಕ್ಕೂ ಹೆಚ್ಚು ಬೆಣ್ಣೆ ವ್ಯಾಪಾರಸ್ಥರ ಬಳಿಗೆ ತೆರಳಿ ಮಾರಲು ತಂದಿದಂತಹ ಬೆಣ್ಣೆಯನ್ನು ಪಡೆದು ಪರೀಕ್ಷೆಗೆ ಒಳಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಸ್ಥಳದಲ್ಲೇ ಬೆಣ್ಣೆಯನ್ನು ಪರೀಕ್ಷೆ ಮಾಡಲು ಪರೀಕ್ಷೆಯ ವಾಹನವನ್ನು ಕೂಡ ಕಳುಹಿಸಲಾಗುವುದು. ಕಳಪೆ ಬೆಣ್ಣೆ ಏನಾದರೂ ಕಂಡುಬಂದಲ್ಲಿ ಅಂಥವರ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಹಾಗೂ ಜಿಲ್ಲೆಯ ಎಲ್ಲಾ ಸಂತೆಗಳಿಗೆ ತೆರಳಿ ಬೆಣ್ಣೆಯ ಗುಣಮಟ್ಟವನ್ನು ಕೂಡ ಪರಿಶೀಲನೆ ನಡೆಸಲಾಗುವುದು. ಹಾಗೇನಾದರೂ ಕಳಪೆ ಗುಣಮಟ್ಟದ ಬೆಣ್ಣೆಗಳು ಕಂಡುಬಂದಲ್ಲಿ ಅಂಥವರ ಮೇಲೆ ದಂಡ ವಿಧಿಸಿ ಕಾನೂನು ಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.ಇದೇ ಸಂದರ್ಭದಲ್ಲಿ ತಾಲೂಕು ಆಹಾರ ಸುರಕ್ಷತಾ ಅಧಿಕಾರಿ ಶರತ್, ಹೊಳೆನರಸೀಪುರದ ಆಹಾರ ಸುರಕ್ಷತಾ ಅಧಿಕಾರಿ ವಿನಯ್ ಹಾಗೂ ಹಾಸನದ ಆಹಾರ ಸುರಕ್ಷತಾ ಅಧಿಕಾರಿ ಬಸವೇಗೌಡ ಹಾಗೂ ಪುರಸಭೆಯ ಆರೋಗ್ಯ ನಿರೀಕ್ಷಕಿ ಉಮಾದೇವಿ ಹಾಜರಿದ್ದರು.