ಸಾರಾಂಶ
- ಕೆಲ ತಿಂಗಳಿಗಷ್ಟೇ ಸೀಮಿತವಾದ ಪುರಸಭೆ ಕಠಿಣ ಕ್ರಮಗಳ ನೀತಿ
- ನಿವಾಸಿಗಳಲ್ಲಿ ಅನಾರೋಗ್ಯ ಭೀತಿ, ವಾಹನ ಸವಾರರಿಗೆ ಪ್ರಾಣಭೀತಿ - - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸಾರ್ವಜನಿಕರ ತೀವ್ರ ಒತ್ತಡ ಹಾಗೂ ಮನವಿಗಳ ಫಲವಾಗಿ ಹೊನ್ನಾಳಿ ಪಟ್ಟಣದಲ್ಲಿದ್ದ ಹಂದಿಗಳನ್ನು ಹಿಡಿದು, ಹೊರವಲಯಕ್ಕೆ ಸಾಗಿಸಲಾಗಿತ್ತು. ಅಂದಿನಿಂದ ರಸ್ತೆಗಳಲ್ಲಿ ಓಡಾಡುವ ದ್ವಿಚಕ್ರ ವಾಹನಗಳ ಸವಾರರು, ಸಾರ್ವಜನಿಕರು, ಬೀದಿ, ಗಲ್ಲಿ, ಬಡಾವಣೆಗಳ ನಿವಾಸಿಗಳು ಕೊಂಚ ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಈ ನೆಮ್ಮದಿಗೆ ಮತ್ತೆ ಭಂಗ ಬಂದಿದೆ!ಕೆಲವು ದಿನಗಳಿಂದ ಹಂತ ಹಂತವಾಗಿ ಹಂದಿಗಳ ಹಿಂಡುಗಳು ಪಟ್ಟಣದ ಪ್ರತಿ ರಸ್ತೆ, ಬೀದಿಗಳಲ್ಲಿ ದರ್ಶನವಾಗುತ್ತಿದೆ. ಹಂದಿಗಳ ಓಡಾಟದಿಂದಾಗಿ ರಸ್ತೆಯಲ್ಲಿ ಸಾಗುವ ವಾಹನಗಳ ಸವಾರರು, ನಿವಾಸಿಗಳು ಆತಂಕಗೊಂಡಿದ್ದಾರೆ. ಈ ಹಿಂದೆ ಹಂದಿಗಳ ಹಾವಳಿ ಮಿತಿಮೀರಿತ್ತು. ರಸ್ತೆಗಳಲ್ಲಿ ಏಕಾಎಕಿಯಾಗಿ ವಾಹನಗಳಿಗೆ ಹಂದಿಗಳು ಅಡ್ಡ ಬರುತ್ತಿದ್ದವು. ಪರಿಣಾಮ ದ್ವಿಚಕ್ರ ವಾಹನಗಳಲ್ಲಿ ಸಾಗುತ್ತಿದ್ದ ಸವಾರರು ಹಂದಿಗಳಿಗೆ ಡಿಕ್ಕಿ ಹೊಡೆದು ಬಿದ್ದು ಕೈ-ಕಾಲುಗಳನ್ನು ಮುರಿದುಕೊಂಡು ಆಸ್ಪತ್ರೆ ಸೇರಿದ್ದರು.
ಸಾರ್ವಜನಿಕ ಜೀವನಕ್ಕೂ ಹಂದಿಗಳ ಹಾವಳಿಯಿಂದಾಗಿ ಇನ್ನಿಲ್ಲದ ಕಿರಿ ಕಿರಿಯಾಗುತ್ತಿತ್ತು. ಪುರಸಭೆಯವರು ಚರಂಡಿಗಳಲ್ಲಿನ ಕಸ, ಕೊಳಚೆ ಎತ್ತಿ ರಸ್ತೆ ಬದಿಯೇ ಹಾಕಿಹೋಗುತ್ತಿದ್ದರು. ಈ ಸಂದರ್ಭ ಸ್ವಲ್ಪ ಹೊತ್ತಿನಲ್ಲೇ ಹಂದಿಗಳ ಸೈನ್ಯ ದಾಳಿಯಿಟ್ಟು ಕೊಳಚೆಯನ್ನು ಕೆದರಿ, ರಸ್ತೆ ತುಂಬೆಲ್ಲಾ ಹರಡುತ್ತಿದ್ದವು. ಇದರಿಂದ ಇಡೀ ರಸ್ತೆ ಪರಿಸರದಲ್ಲಿ ದುರ್ವಾಸನೆ ತೊಲಗದೇ, ಜನರಿಗೆ ಕಿರಿಯಾಗುತ್ತಿತ್ತು. ಮಕ್ಕಳು ಸೇರಿದಂತೆ ಎಲ್ಲ ವಯೋಮಾನದ ಜನರು ಹಂದಿಗಳ ಉಪಟಳಕ್ಕೆ ಸಾಕಾಗಿದ್ದರು. ಈಗ ಮತ್ತೆ ಹಂದಿಗಳು ಪಟ್ಟಣಕ್ಕೆ ತಲೆನೋವಾಗಿ ಪರಿಣಮಿಸಿವೆ.ಪುರಸಭೆ ಹಂದಿಗಳ ಮಾಲೀಕರಿಗೆ ಪದೇಪದೇ ಸಲಹೆ-ಸೂಚನೆ, ಎಚ್ಚರಿಕೆಗಳ ನೀಡಿ ಹಂದಿಗಳ ಹಾವಳಿ ನಿಯಂತ್ರಿಸಲು ಸೂಚಿಸಿತ್ತು. ಆದರೂ ಪ್ರಯೋಜನವಾಗಿರಲಿಲ್ಲ. ಹಂದಿಗಳ ಕಾಟದಿಂದ ಬೇಸತ್ತ ಸಾರ್ವಜನಿಕರು ಪುರಸಭೆಗೆ ನಿರಂತರ ದೂರು ನೀಡುವುದು ತಪ್ಪಿರಲಿಲ್ಲ. ಜನಪ್ರತಿನಿಧಿಗಳ ಸೂಚನೆ, ಅಸಮಾಧಾನಗಳಿಂದಾಗಿ ಕೆಲ ತಿಂಗಳ ಹಿಂದೆ ಪುರಸಭೆಯವರು ಪಟ್ಟಣದಲ್ಲಿದ್ದ ಹಂದಿ ಮಾಲೀಕರಿಗೆ ಸೂಚನೆ ನೀಡಿ, ಹಂದಿಗಳನ್ನು ಹೊರವಲಯಕ್ಕೆ ಸಾಗಿಸಿ, ಸಾಕುವ ವ್ಯವಸ್ಥೆ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿ ಕ್ರಮ ಕೈಗೊಂಡಿತ್ತು. ಇದರ ಫಲವಾಗಿ ಪಟ್ಟಣ ಹಂದಿಗಳಿಂದ ಮುಕ್ತವಾಗಿ, ಸುಂದರ ವಾತಾವರಣ ನಿರ್ಮಾಣವಾಗಿತ್ತು.
ಆದರೆ, ಈಗ "ಹೊದ್ಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ " ಎನ್ನುವಂತೆ ಪಟ್ಟಣದ ಪ್ರತಿ ಬೀದಿಗಳಲ್ಲಿ ಹಂದಿಗಳ ಸಂಸಾರ ಕಾಣುತ್ತಿದೆ. ಹಿಂಡುಗಟ್ಟಲೇ ಹಂದಿಗಳು ರಾಜಾರೋಷವಾಗಿ ತಿರುಗಾಡುತ್ತಿವೆ. ಹೀಗಿದ್ದರೂ ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಗಮನಕ್ಕೆ ಈ ವಿಚಾರ ಬಾರದೇ ಇರುವುದು ಮಾತ್ರ ಆಶ್ಚರ್ಯಕರ ಸಂಗತಿ.ಸಾರ್ವಜನಿಕರ ಸಹನೆ ಮೀರುವ ಒಳಗಾಗಿ ಸಾರ್ವಜನಿಕರ ಮತ್ತು ಪರಸರ ಆರೋಗ್ಯ ದೃಷ್ಠಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಮೊದಲಿನಂತೆ ಹಂದಿಗಳನ್ನು ಬೇರೆಡೆಗೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಪುರಸಭೆ ದಿಟ್ಟ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೊನ್ನಾಳಿ ನಾಗರಿಕರಿಂದ ಅಸಮಾಧಾನ ಎದುರಿಸುವುದು ಅನಿವಾರ್ಯ. ಹಾಗಾಗದಿರಲಿ.
- - --10ಎಚ್.ಎಲ್.ಐ2:
ಹೊನ್ನಾಳಿ ಪಟ್ಟಣದ ಬೀದಿಗಳಲ್ಲಿ ತಿರುಗಾಡುತ್ತಿರುವ ಹಂದಿಗಳ ಹಿಂಡು.