ಸಹಕಾರಿ ಸಂಘದಲ್ಲಿ ರಾಜಕಾರಣ ಬೇಡ: ಶಿವರಾಮ ಹೆಬ್ಬಾರ

| Published : Jun 11 2024, 01:32 AM IST / Updated: Jun 11 2024, 01:33 AM IST

ಸಾರಾಂಶ

ಮುಂಡಗೋಡ ತಾಲೂಕಿನ ಪಾಳಾ ಗ್ರಾಮದಲ್ಲಿ ಕೆಡಿಸಿಸಿ ಬ್ಯಾಂಕ್‌ನ ನೂತನ ಶಾಖೆಯನ್ನು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಿದರು. ಬಳಿಕ ಬ್ಯಾಂಕ್‌ ಸಾಧನೆ ವಿವರಿಸಿದರು.

ಮುಂಡಗೋಡ: ಸಹಕಾರಿ ಸಂಘಕ್ಕೆ ಯಾವತ್ತೂ ರಾಜಕಾರಣ ತರಬಾರದು. ಯಾವುದೇ ಜಾತಿ, ಪಕ್ಷ ನೋಡಿ ಕೆಲಸ ಮಾಡಬಾರದು ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಭಾನುವಾರ ಸಂಜೆ ತಾಲೂಕಿನ ಪಾಳಾ ಗ್ರಾಮದಲ್ಲಿ ಕೆಡಿಸಿಸಿ ಬ್ಯಾಂಕ್‌ನ ನೂತನ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು. ಈ ವರೆಗೂ ಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ (ಕೆಡಿಸಿಸಿ) ಬ್ಯಾಂಕ್ ಪಕ್ಷ ಮತ್ತು ಜಾತಿ ನೋಡದೆ ರೈತರ ಅರ್ಹತೆ ಮೇಲೆ ಸಾಲ ನೀಡಲಾಗುತ್ತದೆ. ಗ್ರಾಹಕರು ಗಟ್ಟಿಯಾಗಿದ್ದರೆ ಮಾತ್ರ ಬ್ಯಾಂಕ್ ಗಳು ಗಟ್ಟಿಯಾಗಿ ಉಳಿಯಲು ಸಾಧ್ಯ ಎಂದು ಹೇಳಿದರು.

ಸೊಸೈಟಿಗಳ ಒತ್ತಡ ತಪ್ಪಿಸುವ ದೃಷ್ಟಿಯಿಂದ ತಾಲೂಕಿನ ಪಾಳಾ ಭಾಗದ ತಲಾ ೫ ಸೊಸೈಟಿಗಳ ಸಾಲ ವಿತರಣೆಯನ್ನು ಈ ಬ್ಯಾಂಕ್ ಮೂಲಕ ಮಾಡಲಾಗುತ್ತದೆ. ಅದೇ ರೀತಿ ಇಂದೂರ ಗ್ರಾಮದಲ್ಲಿ ತೆರೆಯಲಾಗುವ ಶಾಖೆಯಲ್ಲಿ ೫ ಸೊಸೈಟಿಗಳಿಗೆ ಸಾಲ ವಿತರಣೆ ಮಾಡಲಾಗುತ್ತದೆ. ಮುಂಡಗೋಡ ಕೆಡಿಸಿಸಿ ಬ್ಯಾಂಕ್‌ನಲ್ಲಿ ೬ ಸೊಸೈಟಿಗಳಿಗೆ ಸಾಲ ವಿತರಣೆ ಮಾಡಲಾಗುವುದು ಎಂದರು.

ರೈತರಿಗೆ ಅತ್ಯಂತ ವೇಗವಾಗಿ ಸಾಲ ಬಟವಡೆ ಮಾಡಬೇಕೆಂಬುದು ನಮ್ಮ ಮೂಲ ಉದ್ದೇಶವಾಗಿದ್ದು, ತಾಲೂಕಿನಲ್ಲಿ ₹೮೭ ಕೋಟಿ ಕೆಸಿಸಿ ಸಾಲ ಹಾಗೂ ₹೭೨ ಕೋಟಿ ಮಧ್ಯಮಾವಧಿ ಸಾಲ ನೀಡಲಾಗಿದೆ. ₹೧೭೫ ಕೋಟಿ ಸಾಲವನ್ನು ಸೊಸೈಟಿಗಳ ಮೂಲಕ ನೀಡಲಾಗಿದೆ. ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ನಲ್ಲಿ ಶೇ. ೯೯.೨೬ರಷ್ಟು ಗ್ರಾಹಕರು ರೈತರು. ಒಟ್ಟು ಬೆಳೆ ಸಾಲ ₹೧೧೪೭ ಕೋಟಿ ಹಾಗೂ ₹೪೩೮ ಕೋಟಿ ಮಧ್ಯಮಾವಧಿ ಸಾಲ ಸೇರಿದಂತೆ ಒಟ್ಟಾರೆ ₹೧೬೦೦ ಕೋಟಿ ಸಾಲ ನೀಡಿದೆ. ರೈತಾಪಿ ಸಮುದಾಯದ ಸಬಲತೆಗಾಗಿ ಆದ್ಯತೆ ಮೇರೆಗೆ ಸಾಲವನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಕೇವಲ ರೈತರು ಮಾತ್ರವಲ್ಲ, ಶೇ. ೫೦ರಷ್ಟು ಕೃಷಿಯೇತರ ಸಾಲ ನೀಡಲಾಗುತ್ತದೆ. ಸ್ವ ಉದ್ಯೋಗ ಮಾಡುವವರು ಕೂಡ ಪ್ರಾಮಾಣಿಕ ವ್ಯವಹರಿಸುತ್ತಿದ್ದು, ಮರುಪಾವತಿ ಕೂಡ ಶೇ. ೯೯.೨೧ರಷ್ಟಿದೆ. ಇದರಿಂದಲೇ ನಮ್ಮ ಬ್ಯಾಂಕ್ ನಿರಂತರ ೬ ಬಾರಿ ರಿಸರ್ವ್‌ ಬ್ಯಾಂಕ್‌ನಿಂದ ಪ್ರಶಸ್ತಿ ಪಡೆದಿದೆ. ಅಲ್ಲದೇ ಅಪೆಕ್ಸ್ ಬ್ಯಾಂಕ್ ನಿಂದಲೂ ಕೂಡ ೩೬ ಬಾರಿ ಪ್ರಶಸ್ತಿ ಪಡೆದಿದೆ. ಹೀಗೆ ರಾಜ್ಯದಲ್ಲಿ ಪ್ರತಿಷ್ಠಿತ ಪ್ರಶಸ್ತಿ ಪಡೆದ ಹೆಗ್ಗಳಿಕೆ ನಮ್ಮದಾಗಿದೆ ಎಂದು ಹೆಬ್ಬಾರ್‌ ವಿವರಿಸಿದರು.

ಜಿಲ್ಲೆಯ ಜನ ನಮ್ಮ ನಮ್ಮ ಬ್ಯಾಂಕ್ ಮೇಲೆ ವಿಶ್ವಾಸವನ್ನಿಟ್ಟು ₹೩೪೦೦ ಕೋಟಿ ಹಣ ಡೆಪಾಸಿಟ್ ಮಾಡಿದ್ದಾರೆ. ವರ್ಷಕ್ಕಿಂತ ವರ್ಷಕ್ಕೆ ವಿಶ್ವಾಸವನ್ನು ಹೆಚ್ಚಿಸಿಕೊಳ್ಳುತ್ತಿದೆ. ಈ ವರೆಗೂ ೫೩ ಶಾಖೆಗಳು ಮಾತ್ರ ಇದ್ದವು. ಈಗ ಮತ್ತೆ ೨೧ ಶಾಖೆಗಳು ಲೋಕಾರ್ಪಣೆಯಾಗುತ್ತಿದ್ದು, ಒಟ್ಟು ಉತ್ತರ ಕನ್ನಡ ಜಿಲ್ಲೆಯಲ್ಲಿ ೭೪ ಶಾಖೆಗಳು ತೆರೆದಂತಾಗುತ್ತಿದೆ ಎಂದು ಹೇಳಿದರು.ರಾಜ್ಯಕ್ಕೆ ಮಾದರಿ ಯೋಜನೆ:

ಕಳೆದ ೩ ವರ್ಷದಲ್ಲಿ ರೈತರಿಗೆ ಮನೆ ಕಟ್ಟಲು ಸಾಲ, ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ಜಮೀನು ಖರೀದಿಸಲು ಸಾಲ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ನಮ್ಮ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಮಾಡಿದೆ. ಈ ಯೋಜನೆಗಳು ರಾಜ್ಯದ ಯಾವ ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ನಲ್ಲಿ ಕೂಡ ಇಲ್ಲ. ಇದು ನಮ್ಮ ಹೆಮ್ಮೆ ಎಂದು ಹೇಳಿದರು.

ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ ನಾಯಕ, ನಿರ್ದೇಶಕ, ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ಜಿ.ಆರ್. ಹೆಗಡೆ ಸೋಂದಾ, ಪ್ರಮೋದ ದವಳೆ, ಶ್ರೀಕಾಂತ ಭಟ್, ಪಾಳಾ ಸಹಕಾರಿ ಸಂಘದ ಅಧ್ಯಕ್ಷ ಮಂಜುನಾಥ ಅಂಗಡಿ, ಗ್ರಾಪಂ ಅಧ್ಯಕ್ಷ ಚಂದ್ರಗೌಡ ಪಾಟೀಲ, ಜಿಪಂ ಮಾಜಿ ಉಪಾಧ್ಯಕ್ಷ ರವಿಗೌಡ ಪಾಟೀಲ, ಜ್ಞಾನದೇವ ಗುಡಿಯಾಳ, ಕೃಷ್ಣ ಹಿರೇಹಳ್ಳಿ, ಅಮಾನುಲ್ಲಾ ಮೈದು, ಚೇತನ ನಾಯ್ಕ, ಸ್ಥಳೀಯ ಬ್ಯಾಂಕ್‌ನ ವ್ಯವಸ್ಥಾಪಕ ಅಣ್ಣಪ್ಪ ಖಂಡಪ್ಪನವರ, ವಿಶಾಲ ನಿಖಂ ಉಪಸ್ಥಿತರಿದ್ದರು. ಎಲ್.ಬಿ. ಹುಲಗೂರ ಸ್ವಾಗತಿಸಿದರು. ಗಿರೀಶ ಮಾಡಗೇರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.