ಸಾರಾಂಶ
ಪ್ರತಿ ವರ್ಷ ಮಳೆಗಾಲ ಬಂದರೆ ನದಿ ದಡದ ಪ್ರದೇಶಗಳು ಮುಳುಗಡೆಯಾಗಿ ನಿವಾಸಿಗಳ ಬದುಕಿಗೆ ಕಾರ್ಮೋಡ ಕವಿದಂತಾಗುತ್ತದೆ.
ಸುಬ್ರಮಣಿ ಸಿದ್ದಾಪುರ
ಕನ್ನಡಪ್ರಭ ವಾರ್ತೆ ಸಿದ್ದಾಪುರಪ್ರತಿ ವರ್ಷ ಮಳೆಗಾಲ ಬಂದರೆ ಸಾಕು ವಿರಾಜಪೇಟೆ ತಾಲೂಕಿನ ಕರಡಿಗೋಡು, ಗುಹ್ಯ ಗೂಡುಗದ್ದೆ ಪ್ರದೇಶಗಳ ನದಿ ದಡದ ಪ್ರದೇಶಗಳು ಮುಳುಗಡೆಯಾಗಿ ಅಲ್ಲಿನ ನಿವಾಸಿಗಳ ಬದುಕಿಗೆ ಕಾರ್ಮೋಡ ಕವಿದಂತಾಗುತ್ತದೆ. ಮತ್ತೆ ಮಳೆಗಾಲ ಕಳೆಯುವವರೆಗೆ ಇವರುಗಳ ಕಷ್ಟ ಹೇಳತೀರದು.
ಪ್ರತಿ ವರ್ಷದ ಮಳೆಗಾಲದಲ್ಲೂ ಇಲ್ಲಿನ ನದಿ ದಡದ ನಿವಾಸಿಗಳು ಕಾವೇರಿ ನದಿಯಲ್ಲಿನ ಪ್ರವಾಹದಿಂದ ತತ್ತರಿಸಿ, ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವುದು ಸಾಮಾನ್ಯವಾಗಿದ್ದು, ಪ್ರವಾಹ ಕಡಿಮೆಯಾದ ಕೂಡಲೇ ತಮ್ಮ ಮನೆಗಳಿಗೆ ಬಂದು ಮತ್ತದೇ ಬದುಕಿಗೆ ಮರಳುತ್ತಾರೆ.ಮಳೆಗಾಲದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ದೌಡು:
ಎಲ್ಲ ಮಳೆಗಾಲದಲ್ಲೂ ಪ್ರವಾಹದ ಸಂದರ್ಭ ಜನಪ್ರತಿನಿಧಿಗಳು, ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಸದ್ಯದ ಪರಿಹಾರ ಘೋಷಿಸಿ ನಂತರ ಆ ವಿಷಯವನ್ನು ಅಲ್ಲೇ ಬಿಟ್ಟು ತೆರಳುತ್ತಾರೆ ಮತ್ತೆ ಚುನಾವಣೆ ಸಂದರ್ಭ ಪರ್ಯಾಯ ವ್ಯವಸ್ಥೆಯ ಭರವಸೆ ಮುಂದುವರೆಯುತ್ತೆ. ಇಲ್ಲಿನ ನಿವಾಸಿಗಳನ್ನು ವೋಟ್ ಬ್ಯಾಂಕಿಗಾಗಿ ಬಳಸಿ ಕೊಳ್ಳುವ ರಾಜಕೀಯ ಪಕ್ಷಗಳ ಮೋಡಿಗೆ ಇಲ್ಲಿನ ನಿವಾಸಿಗಳು ಶರಣಾಗುತ್ತಾ ಮುಂದೊಂದು ದಿನ ಶಾಶ್ವತ ಸೂರು ದೊರಕುವುದೆಂಬ ವಿಶ್ವಾಸದಲ್ಲಿ ಪಕ್ಷಗಳಿಗೆ ಜೈ ಎನ್ನುತ್ತಾ ಕಾಲ ಕಳೆಯುತ್ತಾರೆ.ಹಲವು ಮನೆಗಳಲ್ಲಿ ಬಿರುಕು
ಮಳೆಗಾಲದ ಪ್ರವಾಹದಲ್ಲಿ ಬಹುತೇಕ ಬಿದಿರಿನ ಗುಡ್ಡೆಗಳು ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿಹೋಗಿದ್ದು, ಹಲವೆಡೆ ಈಗಾಗಲೇ ಮಣ್ಣು ಕುಸಿದಿದೆ. ಬಿದರಿನ ಕೊರತೆಯಿಂದ ನದಿಯ ದಡ ಕುಸಿದು ಕಾವೇರಿ ನದಿಯು ಅಗಲವಾಗಿ ತನ್ನ ವಿಸ್ತೀರ್ಣ ಹೆಚ್ಚಾಗಿದೆ. ನದಿ ದಡದ ಹಲವು ಮನೆಗಳು ಬಿರುಕು ಬಿಟ್ಟಿದ್ದು, ಅಪಾಯದ ಅಂಚಿನಲ್ಲಿದೆ. ಕೂಲಿ ಕಾರ್ಮಿಕರೆ ಇಲ್ಲಿ ಹೆಚ್ಚಾಗಿ ವಾಸವಾಗಿದ್ದು ಇವರುಗಳಿಗೆ ಬೇರೆ ಕಡೆಗಳಲ್ಲಿ ಜಾಗ ಖರೀದಿಸಿ ಮನೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇವರುಗಳಿಗೆ ಸುರಕ್ಷಿತ ಪ್ರದೇಶದಲ್ಲಿ ಸರ್ಕಾರ ನಿವೇಶನ ಒದಗಿಸಿಕೊಡಬೇಕಾಗಿದೆ.ಸರ್ಕಾರದ ಪರ್ಯಾಯ ನಿವೇಶನಕ್ಕೆ ಒಲ್ಲೆ ಎಂದ ನಿವಾಸಿಗಳು
2018- 19 ರ ಪ್ರವಾಹದಲ್ಲಿ ಬಹುತೇಕ ಮನೆಗಳು ಬಿದ್ದು ಹೋಗಿರುವ ಹಿನ್ನೆಲೆಯಲ್ಲಿ ಅಂದಿನ ಶಾಸಕ ಕೆ ಜಿ ಬೋಪಯ್ಯ ಇವರುಗಳ ಸ್ಥಳಾಂತರಕ್ಕೆ ಮಾಲ್ದಾರೆಯ ಆಸ್ಥಾನದಲ್ಲಿ ಜಾಗ ಖರೀದಿಸಿ ನಿವೇಶನ ನೀಡುವುದಾಗಿ ಹೇಳಿದರು ಹಾಗೂ ಜಿಲ್ಲಾಡಳಿತ ಶೆಟ್ಟಿಗೇರಿಯಲ್ಲಿ ಸ್ಥಳ ನೀಡುವ ಬಗ್ಗೆ ಹೇಳಿದರು ಇಲ್ಲಿನವರು ಯಾರು ಕೂಡ ಅಲ್ಲಿಗೆ ತೆರಳಲು ನಿರಾಕರಿಸಿ ನಮಗೆ ಸಿದ್ದಾಪುರದ ಸಮೀಪದಲ್ಲಿ ನಿವೇಶನ ಒದಗಿಸಿ ಎನ್ನುವ ಬೇಡಿಕೆ ಇಟ್ಟು ಇಂದಿಗೂ ಅಲ್ಲೆ ಉಳಿದಿದ್ದಾರೆ.ಕಂದಾಯ ಇಲಾಖೆಯಿಂದ ನೋಟಿಸ್
ಪ್ರತಿ ವರ್ಷ ಮಳೆಗಾಲದ ಮುಂಚಿತವಾಗಿ ಕಂದಾಯ ಅಧಿಕಾರಿಗಳು ಈ ಭಾಗಗಳಿಗೆ ಭೇಟಿ ನೀಡಿ ಎಲ್ಲಾ ಮನೆಯವರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹೇಳಿ ನೋಟಿಸ್ ನೀಡಿ ಹೋಗುವುದು ಇಲ್ಲಿ ವಾಡಿಕೆಯಾಗಿದ್ದು ಶಾಶ್ವತ ನಿವೇಶನ ಒದಗಿಸಿ ಸಮಸ್ಯೆ ಪರಿಹರಿಸಲು ಮುಂದಾಗದಿರುವುದು ಜಿಲ್ಲಾಡಳಿತ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.ಸಂತ್ರಸ್ತರಿಗೆ ನಿವೇಶನ ನೀಡಲು ಸರ್ಕಾರಿ ಜಾಗದ ಕೊರತೆಯಿರುವ ಹಿನ್ನಲೆಯಲ್ಲಿ ಮಾಲ್ದಾರೆಯ ಆಸ್ತಾನ ಎಂಬಲ್ಲಿ ಖಾಸಗಿ ಜಾಗ ಖರೀದಿಗೆ ಎಲ್ಲಾ ತಯಾರಿ ನಡೆದಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
। ಅನಿಲ್ ಕುಮಾರ್, ಕಂದಾಯ ನಿರೀಕ್ಷಕರು. ಅಮ್ಮತ್ತಿ, ವಿರಾಜಪೇಟೆ ತಾಲೂಕು.ನಮಗೆ ಸೂಕ್ತವಾದ ಜಾಗಗಳಲ್ಲಿ ಎಲ್ಲ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ನಿವೇಶನ ದೊರಕಿದರೆ ನಾವು ಅಲ್ಲಿಗೆ ತೆರಳಲು ಸಿದ್ಧವಿದ್ದೇವೆ.
ಕಣ್ಣನ್ . ಸಿ.ಕೆ. ಕರಡಿಗೋಡು ನದಿ ದಡದ ನಿವಾಸಿ. ಸಿದ್ದಾಪುರ.