ದೇಗುಲ ಪುನರ್ ಪ್ರತಿಷ್ಠಾಪನೆ ವೇಳೆ ಆನೆ ದಾಂಧಲೆ‌: ಬೈಕ್, ಕಾರ್‌ ಪುಡಿ

| Published : May 10 2025, 01:03 AM IST

ಸಾರಾಂಶ

ದೈವಸ್ಥಾನ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ವೇಳೆ ಕಾಡಾನೆ ದಾಂಧಲೆ ನಡೆಸಿ ಬೈಕ್, ಕಾರುಗಳನ್ನು ಪುಡಿಪುಡಿ ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ.

ಕನ್ನಡಪ್ರಭ ವಾರ್ತೆ ಅರೇಹಳ್ಳಿ

ದೈವಸ್ಥಾನ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ವೇಳೆ ಕಾಡಾನೆ ದಾಂಧಲೆ ನಡೆಸಿ ಬೈಕ್, ಕಾರುಗಳನ್ನು ಪುಡಿಪುಡಿ ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ.

ಹಾಸನ ಜಿಲ್ಲೆ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿ ಲಿಂಗಾಪುರ ಗ್ರಾಮದಲ್ಲಿ ಕೋಟೆ ಬಬ್ಬುಸ್ವಾಮಿ, ಚಾಮುಂಡೇಶ್ವರಿ ಹಾಗೂ ಪರಿವಾರ ದೈವಗಳ ಪ್ರತಿಷ್ಠಾಪನೆಯನ್ನು ಗುರುವಾರ ಬೆಳಗ್ಗಿನಿಂದಲೇ ಆರಂಭಿಸಲಾಗಿತ್ತು. ಧಾರ್ಮಿಕ ಕಾರ್ಯಕ್ರಮಗಳು ಮುಂದುವರಿದು ರಾತ್ರಿ ಸುಮಾರು 9.30ರ ಸಮಯದಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ಕಣ್ಮರೆಯಾಗಿದ್ದ ಮೂರ್ನಾಲ್ಕು ಕಾಡಾನೆ ಪ್ರತ್ಯಕ್ಷವಾದವು. ಭಕ್ತರು ಕಾಡಾನೆ ನೋಡಲು ಮುಗಿಬಿದ್ದರು. ದೇವಸ್ಥಾನ ಆಡಳಿತ ಮಂಡಳಿಯವರು ಪಟಾಕಿ ಸಿಡಿಸಿದರು. ನಂತರ ಅರಣ್ಯ, ಪೊಲೀಸ್ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾಡಾನೆಗಳು ರಸ್ತೆ ದಾಟಲು ಅವಕಾಶ ಕಲ್ಪಿಸಿದರು. ಭಕ್ತರ ಕಿರುಚಾಟಕ್ಕೆ ರೊಚ್ಚಿಗೆದ್ದ ಒಂದು ಕಾಡಾನೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರು ಹಾಗೂ ಬೈಕ್‌ಗಳ ಮೇಲೆ ದಾಳಿ ಮಾಡಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರಸ್ತೆ ದಾಟುತ್ತಿದ್ದ ಕಾಡನೆಗಳಿಗೆ ಅಡಚಣೆ ಮಾಡಿದ್ದೆ ಅನಾಹುತಕ್ಕೆ ಕಾರಣ ಎನ್ನಲಾಗಿದೆ.