ದುಶ್ಚಟ: ಮನಸ್ಸು ಪರಿವರ್ತನೆಗೆ ಒಡ್ಡಿದರೆ ಸಮಾಜದಲ್ಲಿ ಮನ್ನಣೆ

| Published : Oct 10 2024, 02:31 AM IST

ಸಾರಾಂಶ

ಬದುಕನ್ನು ಸನ್ಮಾರ್ಗದಲ್ಲಿ ಒಯ್ಯುವುದಕ್ಕೆ ಅರಿವು ಅಗತ್ಯ. ಇದು ಸಾಧ್ಯ ಆಗದ ಸಂದರ್ಭದಲ್ಲಿ ಮತ್ತೊಬ್ಬರ ಮಾರ್ಗದರ್ಶನ ಪಡೆಯಲು ಮುಂದಾಗಬೇಕು.

ಧಾರವಾಡ:

ದುಶ್ಚಟಕ್ಕೆ ಸಿಲುಕಿದ ವ್ಯಕ್ತಿಯು ಮನಸ್ಸನ್ನು ಪರಿವರ್ತನೆಗೆ ಒಡ್ಡಿದರೆ ಸಮಾಜದಲ್ಲಿ ಮನ್ನಣೆ ಲಭಿಸುವುದರಲ್ಲಿ ಸಂದೇಹವಿಲ್ಲ ಎಂದು ಮನಸೂರ ರೇವಣಸಿದ್ಧೇಶ್ವರ ಮಠದ ಡಾ. ಬಸವರಾಜ ದೇವರು ಹೇಳಿದರು.

ತಾಲೂಕಿನ ಮನಸೂರ ಗ್ರಾಮದ ಬಳಿಯ ಶ್ರೀಮಠದ ಸಭಾಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾ ಘಟಕ, ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತ ಮತ್ತು ಸಂಶೋಧನಾ ಕೇಂದ್ರ ಆಯೋಜಿಸಿದ್ದ 1966ನೇ ಮದ್ಯವರ್ಜನ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ಬದುಕನ್ನು ಸನ್ಮಾರ್ಗದಲ್ಲಿ ಒಯ್ಯುವುದಕ್ಕೆ ಅರಿವು ಅಗತ್ಯ. ಇದು ಸಾಧ್ಯ ಆಗದ ಸಂದರ್ಭದಲ್ಲಿ ಮತ್ತೊಬ್ಬರ ಮಾರ್ಗದರ್ಶನ ಪಡೆಯಲು ಮುಂದಾಗಬೇಕು. ಇದರಿಂದ ಮುಂದಿನ ದಿನಗಳನ್ನು ಸುಖದಿಂದ ಕಳೆಯುವ ವಾತಾವರಣ ಸೃಷ್ಟಿಯಾಗಲಿದೆ ಎಂದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ರಾಜಣ್ಣ ಕೊರವಿ, ಜಿಲ್ಲಾ ಅಧ್ಯಕ್ಷ ಸಂತೋಷ ಶೆಟ್ಟಿ, ಸದಸ್ಯರಾದ ಕರಿಯಪ್ಪ ಅಮ್ಮಿನಭಾವಿ, ಪುಂಡಲೀಕ ಹಡಪದ ಮಾತನಾಡಿದರು.

ಇದೇ ವೇಳೆ ವೇದಿಕೆಯ ನೂತನ ಜಿಲ್ಲಾಧ್ಯಕ್ಷ ವಸಂತ ಅರ್ಕಾಚಾರ ಅವರಿಗೆ ಸಂತೋಷ ಶೆಟ್ಟಿ ಅಧಿಕಾರ ಹಸ್ತಾಂತರಿಸಿದರು. ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಂಕರ ಅಂಗಡಿ, ಗೌರವಾಧ್ಯಕ್ಷ ಮಲ್ಲನಗೌಡ ಗೌಡ್ರ, ಪ್ರಭಾಕರ ನಾಯಕ, ಸವಿತಾ ಅಮರಶೆಟ್ಟಿ, ಮೃತ್ಯುಂಜಯ ಸಾಲಿಮಠ, ಕಮಲಾ ಹೊಂಬಳ, ಆರತಿ ಹಿರೇಮಠ ಇದ್ದರು. ಜಿಲ್ಲಾ ನಿರ್ದೇಶಕ ಪ್ರದೀಪ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಜಯಲಕ್ಷ್ಮಿ ಪ್ರಾರ್ಥಿಸಿದರು. ಯೋಜನಾಧಿಕಾರಿ ಮಯೂರ ತೋರಸ್ಕರ್ ಸ್ವಾಗತಿಸಿದರು. ಬಸವರಾಜ ಸಿದ್ಧಲಿಂಗಣ್ಣವರ ನಿರೂಪಿಸಿದರು. ವಲಯ ಮೇಲ್ವಿಚಾರಕ ಮಹದೇವ ವಂದಿಸಿದರು. ಶಿಬಿರದಲ್ಲಿ ಪಾಲ್ಗೊಂಡಿದ್ದ 58 ಜನರು ಮದ್ಯ ತ್ಯಜಿಸುವ ಭರವಸೆಯಿತ್ತರು.