ಸಾರಾಂಶ
ಶಿರಾಳಕೊಪ್ಪ ಪಟ್ಟಣದಲ್ಲಿ ಈ ಬಾರಿ ದಸರಾ ಹಬ್ಬವನ್ನು ಅತ್ಯಂತ ವಿಶೇಷವಾಗಿ ಆಚರಿಸಲಾಯಿತು. ನಾಡದೇವತೆ ಚಾಮುಂಡೇಶ್ವರಿಯ ವಿಗ್ರಹವನ್ನು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ
ಪಟ್ಟಣದಲ್ಲಿ ಈ ಬಾರಿ ದಸರಾ ಹಬ್ಬವನ್ನು ಅತ್ಯಂತ ವಿಶೇಷವಾಗಿ ಆಚರಿಸಲಾಯಿತು. ನಾಡದೇವತೆ ಚಾಮುಂಡೇಶ್ವರಿಯ ವಿಗ್ರಹವನ್ನು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಲಾಯಿತು.ಊರಿನ ಎಲ್ಲಾ ದೇವಾಲಯಗಳ ಉತ್ಸವ ಮೂರ್ತಿಗಳನ್ನು ಪಟ್ಟಣದ ರಾಜಬೀದಿಗಳಾದ ಹೊಂಡದ ಕೇರಿ, ಕೆಳಗಿನ ಕೇರಿ, ಹಿರೆಕೆರೂರು ರಸ್ತೆ ಮೂಲಕ ಸೊರಬ ರಸ್ತೆಯ ಐಟಿಐ ಕಾಲೇಜುವರೆಗೆ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು.
ವಿವಿಧ ಕಲಾತ್ಮಕ ತಂಡಗಳು ತಮ್ಮ ಕಲಾ ಕೌಶಲ್ಯವನ್ನು ಪ್ರದರ್ಶಿಸುವ ಮೂಲಕ ಜನರ ಗಮನ ಸೆಳೆದವು. ಡೊಳ್ಳು, ತಮಟೆ, ಭಜನೆ, ರೋಡ್ ಆರ್ಕೇಷ್ಟ್ರ, ಪೂಜಾ ಕುಣಿತ, ಕರಡಿ ಕುಣಿತ, ಬೊಂಬೆಗಳು ಮತ್ತು ಹಾಸ್ಯ ಪಾತ್ರಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು. ಕಣ್ತುಂಬಿಸಿದ ನೃತ್ಯಗಳು, ವೇಷಭೂಷಣಗಳು ಮತ್ತು ವಿವಿಧ ಸಮಿತಿಗಳ ವಿನೂತನ ಕಲಾ ಪ್ರದರ್ಶನಗಳು ಹಬ್ಬದ ಸಡಗರವನ್ನು ಮತ್ತಷ್ಟು ಉತ್ತೇಜಿಸಿದವು.ಈ ಮೆರವಣಿಗೆಯು ದಸರಾ ಹಬ್ಬದ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದುವರಿಸಿದುದು ಮಾತ್ರವಲ್ಲ, ಹಬ್ಬದ ಸಂತಸವನ್ನು ಎಲ್ಲರೊಂದಿಗೆ ಹಂಚುವ ಪ್ರಮುಖ ವೇದಿಕೆ ಯಾಗಿ ಕಾರ್ಯನಿರ್ವಹಿಸಿತು.
ಈ ಮೆರವಣಿಗೆಯಲ್ಲಿ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಎಸ್.ಪಿ.ನಾಗರಾಜ್ ಗೌಡ, ಪುರಸಭೆ ಅಧ್ಯಕ್ಷ್ಯ ಮಮತಾ ನಿಂಗಪ್ಪ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. ದಸರಾ ಉತ್ಸವ ಸಮಿತಿ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಎಂ.ಆರ್.ರಾಘವೇಂದ್ರ ನೇತೃತ್ವದಲ್ಲಿ ಸೊರಬ ರಸ್ತೆಯ ಐಟಿಐ ಕಾಲೇಜು ಆವರಣದಲ್ಲಿ ಶಮ್ಮಿ ಪೂಜೆ ನೆರವೇರಿಸಿ ಬನ್ನಿ ಮುಡಿಯಲಾಯಿತು.ಸ್ಥಳೀಯ ಪೊಲೀಸ್ ಇಲಾಖೆ ಭದ್ರತೆಗಾಗಿ ಸಮರ್ಪಕ ವ್ಯವಸ್ಥೆ ಕಲ್ಪಿಸಿದ್ದು, ಮೆರವಣಿಗೆಯು ಶ್ರದ್ಧಾಪೂರ್ವಕ ಹಾಗೂ ಶಿಸ್ತಿನಿಂದ ನಡೆಯಿತು.
ಶಿರಾಳಕೊಪ್ಪದಲ್ಲಿ ನಡೆದ ಅದ್ಧೂರಿ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಶಾಸಕ ಬಿ.ವೈ.ವಿಜಯೇದ್ರ ಅವರನ್ನು ದಸರಾ ಉತ್ಸವ ಸಮಿತಿ ಸನ್ಮಾನಿಸಿ ಗೌರವಿಸಿತು. ಶಿರಾಳಕೊಪ್ಪದಲ್ಲಿ ನಡೆದ ಅದ್ಧೂರಿ ದಸರಾ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.