ಸಾರಾಂಶ
ಶಿಕಾರಿಪುರ: ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ ರಾಜ್ಯದ ಪ್ರಸಿದ್ಧ ನಾಡ ಹಬ್ಬ ದಸರಾ ಉದ್ಘಾಟನೆಗೆ ನಾಡದೇವಿ ಭುವನೇಶ್ವರಿ ಬಗ್ಗೆ ಗೌರವ ಭಾವನೆ ಹೊಂದಿರುವ ಹಲವು ಶ್ರೇಷ್ಠ ಖ್ಯಾತ ನಾಮ ವ್ಯಕ್ತಿಗಳು ರಾಜ್ಯದಲ್ಲಿದ್ದರೂ ಅವರನ್ನು ಬಿಟ್ಟು ರಾಜ್ಯ ಸರ್ಕಾರ ನಾಡದೇವಿಯನ್ನು ನಂಬದ ಬಾನು ಮುಷ್ತಾಕ್ ಅವರನ್ನು ಆಯ್ಕೆಮಾಡಿರುವುದು ನಾಡಿನ ಸಮಸ್ತ ಜನತೆಗೆ ಎಸಗುವ ದ್ರೋಹವಾಗಿದೆ. ಕೂಡಲೇ ಈ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಕಾವೇರಿ ರಾಯ್ಕರ್ ಆಗ್ರಹಿಸಿದರು.
ಮಂಗಳವಾರ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ಸರ್ಕಾರದ ನಿರ್ಧಾರವು ನಾಡ ಪ್ರೇಮಿಗಳಿಗೆ, ಭಕ್ತರಿಗೆ ತೀವ್ರ ಆಘಾತ ಉಂಟಾಗಿದೆ. ಮೈಸೂರು ದಸರಾ ಕೇವಲ ಸಾಂಸ್ಕೃತಿಕ ಹಬ್ಬವಲ್ಲ ಅದು ಕರ್ನಾಟಕದ ಅತಿ ದೊಡ್ಡ ಧಾರ್ಮಿಕ ಹಾಗೂ ಪಾರಂಪರಿಕ ಹಬ್ಬ. ಒಂಬತ್ತು ದಿನಗಳ ಕಾಲ ಸತತ ನವರಾತ್ರಿ ವೇಳೆ ಕಾಳಿ, ಮಹಾಲಕ್ಷ್ಮಿ, ಸರಸ್ವತಿ ದೇವಿ ಆರಾಧನೆ ನಡೆಯಲಿದ್ದು, ಹತ್ತನೇ ದಿನ ದೇವಿ ಚಾಮುಂಡೇಶ್ವರಿ ಮಹಿಷಾಸುರನ ಸಂಹರಿಸಿ ವಿಜಯೋತ್ಸವವನ್ನು ಆಚರಿಸಲಾಗುತ್ತದೆ. ಇಂತಹ ಪವಿತ್ರ ಹಬ್ಬದ ಉದ್ಘಾಟನೆಗೆ ಆಹ್ವಾನಿತ ಮುಖ್ಯ ಅತಿಥಿಯು ದೇವಿಯ ಮೇಲೆ ಶ್ರದ್ಧೆ, ಮೂರ್ತಿ ಪೂಜೆಯ ಮೇಲೆ ಭಕ್ತಿ ಹಾಗೂ ನಾಡದೇವಿ ಬಗ್ಗೆ ಗೌರವ ಹೊಂದಿರಬೇಕು. ಆದರೆ ಬಾನು ಮುಷ್ತಾಕ್ ಅವರು ಈ ಹಿಂದಿನ ಭಾಷಣಗಳಲ್ಲಿ ನಾಡದೇವಿ ಭುವನೇಶ್ವರಿ ದೇವಿಯನ್ನು ನಂಬುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದಾರೆ. ದತ್ತಪೀಠ ಹೋರಾಟದ ಸಂದರ್ಭದಲ್ಲಿಯೂ ಮುಸ್ಲಿಂ ಸಮುದಾಯದ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂತಹವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸುವುದು ಅನುಚಿತವಾಗಿದ್ದು, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಲಿದೆ ಎಂದು ಹೇಳಿದರು.
ಕರ್ನಾಟಕವು ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುವ ಅಸಂಖ್ಯಾತ ಗಣ್ಯರನ್ನು ಹೊಂದಿದೆ. ಪ್ರಸಿದ್ಧ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ರವರು ಭಾರತದ ಅತ್ಯುನ್ನತ ಸಾಹಿತ್ಯ ಸಮ್ಮಾನಗಳ ಜೊತೆಗೆ ಪದ್ಮಭೂಷಣ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಅವರ ಸಾಹಿತ್ಯ ಮತ್ತು ದಾರ್ಶನಿಕ ಕೃತಿಗಳು ರಾಷ್ಟ್ರ ಮಟ್ಟದಲ್ಲಿ ನಾಡಿಗೆ ಕೀರ್ತಿ ತಂದುಕೊಟ್ಟಿವೆ. ಇಂತಹ ಕೀರ್ತಿಶಾಲಿ ವ್ಯಕ್ತಿಯನ್ನು ಕಡೆಗಣಿಸಿ ವಿದೇಶಿ ಭೂಕರ್ ಪ್ರಶಸ್ತಿ ಪಡೆದವರನ್ನು ಆಹ್ವಾನಿಸುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.ಈ ದಿಸೆಯಲ್ಲಿ ರಾಜ್ಯದ ಕೋಟ್ಯಾಂತರ ಭಕ್ತರ ಪರವಾಗಿ, ಸರ್ಕಾರ ಬಾನು ಮುಷ್ತಾಕರನ್ನು ಆಹ್ವಾನಿಸುವ ನಿರ್ಧಾರವನ್ನು ಕೂಡಲೇ ಹಿಂಪಡೆದು ಪವಿತ್ರ ನಾಡ ಹಬ್ಬದ ಉದ್ಘಾಟನೆಗೆ ಡಾ.ಎಸ್.ಎಲ್.ಭೈರಪ್ಪ ರವರಂತಹ ಗಣ್ಯರನ್ನು ಆಹ್ವಾನಿಸಿ ನಾಡ ಹಬ್ಬದ ಹಿರಿಮೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಇಲ್ಲಿನ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಹಿಂದೂ ಜನ ಜಾಗೃತಿ ಸಮಿತಿಯ ಈರೇಶ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರದೀಪ, ಬಿ.ವಿ.ಮಂಜುನಾಥ್, ವಿಹಿಂಪ ಮಾಜಿ ಉಪಾಧ್ಯಕ್ಷ ಪ್ರಕಾಶ್ ಜಿನ್ನು, ಶ್ರೀ ಕಲ್ಪವೃಕ್ಷ ಸೇವಾ ಟ್ರಸ್ಟ್ ಅಧ್ಯಕ್ಷ ವಿ.ರಘು, ವೆಂಕಟೇಶ್, ಎಸ್.ವಿ.ಕೆ.ಮೂರ್ತಿ, ಮಧುಕುಮಾರ್, ಶಿವಯ್ಯ ಶಾಸ್ತ್ರಿ, ಶರತ್, ಮಾಲತೇಶ್, ಪ್ರಕಾಶ್ ನಳ್ಳಿನಕೊಪ್ಪ ಮತ್ತಿತರರಿದ್ದರು.