ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ವಿಜಯದಶಮಿ ಅಂಗವಾಗಿ ತಾಲೂಕಿನ ಹಿರೀಸಾವೆಯ ಚೌಡೇಶ್ವರಿ ದೇವಿಯವರ ದಸರಾ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ರಾತ್ರಿ ವಿಜೃಂಭಣೆಯಿಂದ ನಡೆದು ನವರಾತ್ರಿ ಆಚರಣೆ ಸಂಪನ್ನಗೊಂಡಿತು.ಬೆಳಗ್ಗೆ ಕೆರೆ ಏರಿಯಲ್ಲಿರುವ ದೇವಿಯ ಮೂಲ ವಿಗ್ರಹಕ್ಕೆ ಹಿರೀಸಾವೆ ಗ್ರಾಮಸ್ಥರು ಮತ್ತು ಕುರುಹಿನ ಶೆಟ್ಟಿ ಸೇವಾ ಸಮಿತಿ ವತಿಯಿಂದ ಅಭಿಷೇಕ ಮತ್ತು ವಿಶೇಷ ಪೂಜೆಗಳನ್ನು ಮಾಡಲಾಯಿತು. ರಾತ್ರಿ ೮ ಗಂಟೆಗೆ ಉತ್ಸವ ಮೂರ್ತಿಗೆ ವಿವಿಧ ಪುಷ್ಪಗಳು ಮತ್ತು ಆಭರಣಗಳಿಂದ ಶೃಂಗರಿಸಿ, ವಿದ್ಯುತ್ ದೀಪಗಳಿಂದ ಅಲಂಕೃತವಾದ ವಾಹನದಲ್ಲಿ ದೇವಿಯವರನ್ನು ಕೂರಿಸಲಾಯಿತು. ಶಾಸಕ ಬಾಲಕೃಷ್ಣ ಉತ್ಸವಕ್ಕೆ ಚಾಲನೆ ನೀಡಿದರು. ಭಕ್ತರ ಜಯ ಘೋಷಣೆ ಮತ್ತು ಹಿರೀಸಾವೆಯ ಮಂಜುನಾಥ ತಂಡದವರ ಮಂಗಳವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ. ಭಾನುವಾರ ಬೆಳಗಿನ ಜಾವ ೩ ಗಂಟೆಗೆ ದಸರಾ ಮಹೋತ್ಸವ ಮುಕ್ತಾಯವಾಯಿತು.
ಉತ್ಸವದಲ್ಲಿ ನಾಗಮಂಗಲದ ರುದ್ರೇಶ್ ತಂಡದವರಿಂದ ವೀರಭದ್ರನ ಕುಣಿತ, ಬೆಳ್ತಂಗಡಿಯ ಸೃಷ್ಟಿ ಆರ್ಟ್ಸ್ ತಂಡದ ಕೀಲುಕುದುರೆ- ಗೊಂಬೆಮೇಳ, ಸಾಗರದ ಬಸಪ್ಪ ತಂಡದವರ ಡೊಳ್ಳು ಕುಣಿತ, ಕೇರಳದ ಚಂಡೆವಾದ್ಯ ಮತ್ತು ತುಮಕೂರು ಜಿಲ್ಲೆಯ ಆಲ್ಬೂರಿನ ನಟರಾಜ್ ತಂಡದ ಸೋಮನ ಕುಣಿತ, ಸೇರಿದಂತೆ ಹಲವು ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಚೌಡೇಶ್ವರಿ ಸಮುದಾಯ ಭವನದಲ್ಲಿ ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಹಿರೀಸಾವೆಯ ಲಕ್ಷ್ಮೀ ದೇವಿ, ಬಸವೇಶ್ವರ, ಸಿದ್ದೇಶ್ವರ, ಉಡಿಸಲಮ್ಮ , ಸಿದ್ದಲಿಂಗೇಶ್ವರಸ್ವಾಮಿ, ಕಾಳಿಕಾಂಬ, ಮುದ್ರೆಕಲ್ ಆಂಜನೇಯ ಸ್ವಾಮಿ, ಚನ್ನಕೇಶವ ಸ್ವಾಮಿ ದೇವರುಗಳು ಮೆರವಣಿಗೆಯಲ್ಲಿ ಸಾಗಿದವು.ಚೌಡೇಶ್ವರಿ ಸೇವಾ ಸಮಿತಿ, ಗ್ರಾಮ ಪಂಚಾಯಿತಿ ಮತ್ತು ಪಟ್ಟಣದ ವಿವಿಧ ಸಂಘಟನೆಯವರು ಹಾಗೂ ಗ್ರಾಮದ ಮುಖಂಡರು ಕಾರ್ಯಕ್ರಮಗಳ ನೇತೃತ್ವವನ್ನು ವಹಿಸಿದ್ದರು. ಡಿಜಿಟಲ್ ಸೌಂಡ್ಸ್‌ನ ಹಾಡುಗಳಿಗೆ ಯುವಕರು ಕುಣಿದು ಕುಪ್ಪಳಿಸಿದರು. ಹಿರೀಸಾವೆಯ ನಿಶು ಲೈಟಿಂಗ್ಸ್ ನವರ ಬಣ್ಣ, ಬಣ್ಣದ ವಿದ್ಯುತ್ ದೀಪಾಲಂಕಾರ ದಸರಾಕ್ಕೆ ರಂಗು ತುಂಬಿತ್ತು. ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ, ಗಣೇಶನ ಮೂರ್ತಿಗಳ ವಿಸರ್ಜನಾ ಮಹೋತ್ಸವವೂ ಸಹ ನಡೆಯಿತು. ಕಳೆದ ಹತ್ತು ದಿನಗಳಿಂದ ವಿವಿಧ ದೇವರುಗಳ ಒಕ್ಕಲಿನವರು ಮತ್ತು ಸಮುದಾಯದವರು ನವರಾತ್ರಿ ಆಚರಣೆ ಮಾಡಿದ್ದರು.