ಸಾರಾಂಶ
- ನಗರ ಸೇರಿ ಜಿಲ್ಲಾದ್ಯಂತ ಆಯುಧ ಪೂಜೆ, ವಿಜಯದಶಮಿ ಸಂಭ್ರಮಕ್ಕೆ ಸಿದ್ಧತೆ
- - -- ಹೂವು-ಹಣ್ಣು, ತರಕಾರಿ, ದಿನಸಿ, ವಸ್ತ್ರ ಎಲ್ಲವುಗಳ ಬೆಲೆ ಏರಿಕೆ ।
- ವ್ಯಾಪಾರ ಭರಾಟೆ: ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರ ಹರಸಾಹಸ- - -
ಕನ್ನಡಪ್ರಭ ವಾರ್ತೆ ದಾವಣಗೆರೆಪ್ರತಿ ವರ್ಷಕ್ಕಿಂತ ಈ ವರ್ಷ ಆಯುಧ ಪೂಜೆ ಹಾಗೂ ನಾಡಹಬ್ಬ ವಿಜಯದಶಮಿ ಹಬ್ಬದ ಖರೀದಿ ಮಾರುಕಟ್ಟೆಯಲ್ಲಿ ಜೋರಾಗಿತ್ತು. ಪ್ರತಿವರ್ಷ ಅದ್ಧೂರಿಯಾಗಿ ಆಚರಿಸಲ್ಪಡುವ ಈ ಹಬ್ಬಗಳಿಗೆ ಮಾರುಕಟ್ಟೆಯಲ್ಲಿ ಹೂವು, ವಿವಿಧ ಬಗೆಯ ಹಣ್ಣುಗಳ ಮಾರಾಟ ಜೋರಾಗಿತ್ತು.
ಅಕ್ಟೋಬರ್ 1ರಂದು ಆಯುಧ ಪೂಜೆ, 2ರಂದು ವಿಜಯದಶಮಿ ಹಿನ್ನೆಲೆ ಮಂಗಳವಾರ ವಿವಿಧ ಬಗೆಯ ಹೂವುಗಳು, ಹಣ್ಣುಗಳು, ಮಾವಿನ ತೋರಣಗಳ ಎಲೆ, ಪೂಜಾ ಸಾಮಗ್ರಿ, ಕುಂಬಳಕಾಯಿ ಬಹಳಷ್ಟು ಬಂದಿದ್ದು, ಗ್ರಾಹಕರು ಖರೀದಿಯಲ್ಲಿ ಮಗ್ನರಾಗಿದ್ದರು. ಇನ್ನು ಬಟ್ಟೆ ಅಂಗಡಿಗಳಲ್ಲಿ ಖರೀದಿ ಜೋರಾಗಿದ್ದದ್ದು ಕಂಡುಬಂದಿತು. ಕೆಲವು ಅಂಗಡಿಗಳಲ್ಲಿ ಗ್ರಾಹಕರಿಗೆ ಹಬ್ಬದ ವಿಶೇಷ ರಿಯಾಯಿತಿ ನೀಡಿ, ವಸ್ತುಗಳ ಮಾರಾಟ ವ್ಯವಸ್ಥೆ ಕಲ್ಪಿಸಲಾಗಿತ್ತು.ಪ್ರತಿವರ್ಷ ಅದ್ಧೂರಿಯಾಗಿ ಮಾಡುವ ಈ ಹಬ್ಬಗಳಿಗೆ ಯಥಾಪ್ರಕಾರ ಹಣ್ಣುಗಳು, ಹೂವುಗಳ ದರಗಳು ಏರಿಕೆ ಕಂಡಿದ್ದವು. ಸೇವಂತಿಗೆ ಹೂವು 1 ಮಾರಿಗೆ ₹80-₹100, ಚಂಡು ಹೂವು ₹50-₹100, ಕನಕಾಂಬರಿ ₹100, ಕಾಕಡ ಮಲ್ಲಿಗೆ ₹100, ಬಣ್ಣದ ಸೇವಂತಿ ₹150, ವಿವಿಧ ಬಗೆಯ ಹೂವಿನ ಹಾರಗಳು ₹50 ರಿಂದ ಆರಂಭಗೊಂಡಿದ್ದವು. ಜೊತೆಗೆ ತುಳಸೀ, ಬಿಲ್ವಪತ್ರೆ ₹50 ದರ ಕಂಡಿವೆ. ಪೂಜೆಗೆ ಬೇಕಾದ ವೀಳ್ಯದ ಎಲೆ ಬೆಲೆಯೂ ಹೆಚ್ಚಾಗಿತ್ತು.
ಆಯುಧ ಪೂಜೆ, ವಿಜಯದಶಮಿ ಹಬ್ಬದ ಪೂಜೆಗೆ ಅವಶ್ಯವಾಗಿ ಬೇಕಾಗಿರುವ ತೆಂಗಿನಕಾಯಿ ಅವುಗಳ ಸೈಜಿಗೆ ತಕ್ಕಂತೆ ₹35- ₹50 ವರೆಗೆ ಇತ್ತು. ಬಾಳೆಹಣ್ಣು ಪ್ರತಿ ಕೆ.ಜಿ.ಗೆ ₹80-₹100, ಸೇಬು ₹150, ದ್ರಾಕ್ಷಿ ₹150, ಸೀತಾಫಲ ₹100, ಮೋಸಂಬಿ ₹100, ದಾಳಿಂಬೆ ₹200, ಸಪೋಟ ₹100 ಹಾಗೂ ಎಲ್ಲ ಹಣ್ಣುಗಳ ಮಿಕ್ಸ್ 1 ಕೆ.ಜಿ.ಗೆ ₹150 ಇತ್ತು. ಪೂಜೆಗೆ ಬೇಕಾಗುವಂತಹ ಬೂದುಗುಂಬಳ ಸಣ್ಣವು ₹80 ಹಾಗೂ ಅವುಗಳ ಸೈಜಿಗೆ ತಕ್ಕಂತೆ ಬೆಲೆ ಮಾರಾಟ ಮಾಡಲಾಗುತ್ತಿದ್ದ ದೃಶ್ಯ ಕಂಡುಬಂದಿತು.ಇಲ್ಲಿನ ಆರ್.ಎಚ್. ಧರ್ಮಛತ್ರ, ಕಾಯಿಪೇಟೆ, ಗಡಿಯಾರ ಕಂಬ ಸರ್ಕಲ್, ಮಹಾನಗರ ಪಾಲಿಕೆ ಮುಂಭಾಗ, ಕೆ.ಆರ್.ಮಾರುಕಟ್ಟೆ, ಮಂಡಿಪೇಟೆ, ಅಶೋಕ ರಸ್ತೆ, ಪ್ರವಾಸಿ ಮಂದಿರ ರಸ್ತೆ, ಜಯದೇವ ವೃತ್ತ, ಎಸ್.ನಿಜಲಿಂಗಪ್ಪ ಬಡಾವಣೆಯ ಕರ್ನಲ್ ರವೀಂದ್ರನಾಥ್ ವೃತ್ತ, ದೇವರಾಜ ಅರಸ್ ಬಡಾವಣೆ, ಸರಸ್ವತಿ ಬಡಾವಣೆ, ವಿದ್ಯಾನಗರ, ಹಳೇ ದಾವಣಗೆರೆ, ವಿನೋಬನಗರ, ನಿಟ್ಟುವಳ್ಳಿ ಸರ್ಕಲ್ ಗಳು ಸೇರಿದಂತೆ ಬೀದಿ ಬದಿಯಲ್ಲಿ ವ್ಯಾಪಾರ ವ್ಯಾಪಾರ ಜೋರಾಗಿತ್ತು.
ಆಯುಧ ಪೂಜೆಯಂದು ಗ್ಯಾರೇಜು, ವರ್ಕ್ ಶಾಪ್, ಚಿಕ್ಕಪುಟ್ಟ ಕಾಖಾನೆಗಳು, ಕಂಪ್ಯೂಟರ್ ಅಂಗಡಿಗಳು, ವಿವಿಧ ಬಗೆಯ ಬಿಡಿ ಭಾಗಗಳ ಅಂಗಡಿಗಳು ಸೇರಿದಂತೆ ಅನೇಕ ಅಂಗಡಿ- ಮುಂಗಟ್ಟು, ವಾಹನಗಳ ಸ್ವಚ್ಛತೆ ಕಂಡುಬಂದಿತು. ಗ್ಯಾರೇಜು, ಅಂಗಡಿಗಳು ವಿವಿಧ ಬಣ್ಣಬಣ್ಣದ ಅಲಂಕಾರಿಕ ವಸ್ತುಗಳಿಂದ ಅಲಂಕಾರ ಮಾಡುತ್ತಿರುವುದು ಕಂಡುಬಂದಿತು.ವಿವಿಧ ಸರ್ಕಲ್, ಪ್ರಮುಖ ರಸ್ತೆಗಳಲ್ಲಿ ಸುತ್ತಮುತ್ತಲ ಹಳ್ಳಿಗಳಿಂದ ಬಂದ ಜನರು ಬಾಳೆಕಂಬ, ಮಾವಿನಸೊಪ್ಪು, ವಿವಿಧ ಬಣ್ಣಬಣ್ಣದ ಅಲಂಕಾರಿಕ ವಸ್ತುಗಳ, ಇನ್ನಿತರೇ ವಸ್ತುಗಳನ್ನು ರಸ್ತೆಯ ಪಕ್ಕದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿರುವ ದೃಶ್ಯ ಕಂಡುಬಂದಿತು. ಈ ಭಾಗಗಳಲ್ಲಿ ವಾಹನ ಸಂಚಾರ ದಟ್ಟವಾಗಿತ್ತು. ಪೊಲೀಸರು ಸಂಚಾರ ನಿಯಂತ್ರಿಸಲು ಶ್ರಮಿಸುತ್ತಿದ್ದರು.
- - --30ಕೆಡಿವಿಜಿ47, 48, 49: ದಾವಣಗೆರೆಯಲ್ಲಿ ಆಯುಧ ಪೂಜೆ, ವಿಜಯದಶಮಿ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಹೂ, ಹಣ್ಣು ಖರೀದಿಯಲ್ಲಿ ಗ್ರಾಹಕರು.
-30ಕೆಡಿವಿಜಿ50: ದಾವಣಗೆರೆಯಲ್ಲಿ ಆಯುಧ ಪೂಜೆ ಹಿನ್ನಲೆಯಲ್ಲಿ ಅಂಗಡಿಗಳ ಅಲಂಕಾರಕ್ಕೆ ಅಲಂಕಾರಿಕ ವಸ್ತುಗಳನ್ನು ಖರೀದಿಸುತ್ತಿರುವುದು.