ದಸರಾ: ರಂಜಿಸಲಿದೆ ಡೊಳ್ಳು ಕುಣಿತ, ಪೂಜಾ ಕುಣಿತ, ವಸ್ತು ಪ್ರದರ್ಶನ
KannadaprabhaNewsNetwork | Published : Oct 18 2023, 01:01 AM IST
ದಸರಾ: ರಂಜಿಸಲಿದೆ ಡೊಳ್ಳು ಕುಣಿತ, ಪೂಜಾ ಕುಣಿತ, ವಸ್ತು ಪ್ರದರ್ಶನ
ಸಾರಾಂಶ
ಮಂಗಳೂರು ರಸ್ತೆಯ ವಿಶ್ರಾಂತಿ ಗೃಹ ಆವರಣದಿಂದ ವರ್ಣರಂಜಿತ ಮೆರವಣಿಗೆ ಆರಂಭಗೊಳ್ಳಲಿದೆ. ರಾಮನಗರದ ಪ್ರತಿಷ್ಠಿತ ಡೊಳ್ಳುಕುಣಿತ, ಪೂಜಾ ಕುಣಿತ, ವೀರಗಾಸೆ, ತಮಟೆ, ಕೊಡಗಿನ ಮುತ್ತಪ್ಪ ಚಂಡೆ ವಾದ್ಯ ಇತ್ಯಾದಿ ಕಲಾ ತಂಡಗಳು ಭಾಗವಹಿಸಲಿವೆ.
ಕನ್ನಡಪ್ರಭ ವಾರ್ತೆ ಮಡಿಕೇರಿ ಕರ್ನಾಟಕ ಜಾನಪದ ಪರಿಷತ್ ಕೊಡಗು ಜಿಲ್ಲಾ ಘಟಕವು ಅದ್ಧೂರಿಯ ಜಾನಪದ ದಸರಾ ಮೆರವಣಿಗೆ ಮತ್ತು ಕಾರ್ಯಕ್ರಮವನ್ನು ರೂಪಿಸಿದ್ದು, ಮಡಿಕೇರಿ ನಗರ ದಸರಾ ಸಮಿತಿಯ ಸಹಕಾರದೊಂದಿಗೆ ಅ.19ರಂದು ವಿಶೇಷ ಕಾರ್ಯಕ್ರಮ ರೂಪಿಸಿದೆ ಎಂದು ಜಿಲ್ಲಾ ಘಟಕ ಅಧ್ಯಕ್ಷ ಬಿ.ಜಿ. ಅನಂತಶಯನ ತಿಳಿಸಿದ್ದಾರೆ. ಅಂದು ಬೆಳಗ್ಗೆ 9 ಗಂಟೆಗೆ ಮಂಗಳೂರು ರಸ್ತೆಯ ವಿಶ್ರಾಂತಿ ಗೃಹ ಆವರಣದಿಂದ ವರ್ಣರಂಜಿತ ಮೆರವಣಿಗೆ ಆರಂಭಗೊಳ್ಳಲಿದೆ. ರಾಮನಗರದ ಪ್ರತಿಷ್ಠಿತ ಡೊಳ್ಳುಕುಣಿತ, ಪೂಜಾ ಕುಣಿತ, ವೀರಗಾಸೆ, ತಮಟೆ, ಕೊಡಗಿನ ಮುತ್ತಪ್ಪ ಚಂಡೆ ವಾದ್ಯ ಇತ್ಯಾದಿ ಕಲಾ ತಂಡಗಳು ಭಾಗವಹಿಸಲಿವೆ. ಶಾಸಕ ಡಾ. ಮಂತರ್‌ಗೌಡ, ಎಂ.ಎಲ್.ಸಿ. ಸುಜಾ ಕುಶಾಲಪ್ಪ, ದಸರಾ ಸಮಿತಿ ಅಧ್ಯಕ್ಷೆ ಅನಿತಾಪೂವಯ್ಯ, ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಜಿ ಅರುಣ್ ಶೆಟ್ಟಿ, ಜಿಲ್ಲಾಧಿಕಾರಿ ವೆಂಕಟ್‌ರಾಜ ಹಾಗೂ ಇತರರು ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಜಾನಪದ ದಸರಾ ಸಂಚಾಲಕ ಅನಿಲ್ ಎಚ್.ಟಿ. ತಿಳಿಸಿದ್ದಾರೆ. ಈ ಸಂದರ್ಭ ಜಾನಪದ ಪರಿಷತ್ ನಡೆಸಿದ ವಿವಿಧ ಸ್ಪರ್ಧೆಗಳ ಬಹುಮಾನಗಳನ್ನೂ ವಿತರಿಸಲಾಗುವುದು. ಪರಿಷತ್ ಏರ್ಪಡಿಸಿದ್ದ ಕೊಡಗಿನ ಕಲೆ, ಸಂಸ್ಕೃತಿ ಆಧಾರಿತ ಜಾನಪದ ಕಥೆ ಹೇಳುವ ಆನ್‌ಲೈನ್ ಸ್ಪರ್ಧೆಯಲ್ಲಿ ಕವಯತ್ರಿ ಭಾಗೀರಥಿ ಹುಲಿತಾಳ ಪ್ರಥಮ ಬಹುಮಾನ ಗಳಿಸಿದ್ದಾರೆ. ಸೋಮವಾರಪೇಟೆಯ ಬರಹಗಾರ್ತಿ ಶರ್ಮಿಳಾ ರಮೇಶ್ ದ್ವಿತೀಯ ಹಾಗೂ ಕಾನ್ವೆಂಟ್ ವಿದ್ಯಾರ್ಥಿನಿ ಅನಗ ತೃತೀಯ ಬಹುಮಾನ ಗಳಿಸಿದ್ದಾರೆ. ಮೆರವಣಿಗೆಗೆ ಆಹ್ವಾನ: ಜಿಲ್ಲೆಯ ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು, ಸ್ವಸಹಾಯ ಸಂಘಗಳ ಸದಸ್ಯರು, ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸುವಂತೆ ಜಾನಪದ ಪರಿಷತ್ ಮನವಿ ಮಾಡಿದೆ. ಬೊಂಬೆ ಮನೆಗೆ ಬಹುಮಾನ: ದಸರಾ ಪ್ರಯುಕ್ತ ಹಲವು ಮನೆಗಳಲ್ಲಿ ಬೊಂಬೆ ಪ್ರದರ್ಶನ ನಡೆಸುವ ಪದ್ಧತಿ ಇದ್ದು, ಈ ಸಾಲಿನಿಂದ ಉತ್ತಮ ಪ್ರದರ್ಶನ ಏರ್ಪಡಿಸುವವರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲು ಜಿಲ್ಲಾ ಜಾನಪದ ಪರಿಷತ್ ತೀರ್ಮಾನಿಸಿದೆ. ಸಭಾ ಕಾರ್ಯಕ್ರಮದ ಬಳಿಕ ಜಿಲ್ಲೆಯ ಎಲ್ಲೆಡೆಯಿರುವ ಜಾನಪದ ಪರಿಷತ್ ಘಟಕಗಳ ವತಿಯಿಂದ ವೈವಿಧ್ಯಮಯ, ಜಾನಪದ ನೃತ್ಯ, ಸಂಗೀತ, ಹಾಡು ಕಾರ್ಯಕ್ರಮಗಳು ಜರುಗಲಿವೆ. ಬಳಿಕ ಸಂಜೆ ಆರು ಗಂಟೆಗೆ ಸಾಂಸ್ಕೃತಿಕ ಸಮಿತಿಯ ಆಶ್ರಯದಲ್ಲೂ ಕಾರ್ಯಕ್ರಮಗಳು ನಡೆಯಲಿವೆ ಎಂದು ಬಿ.ಜಿ. ಅನಂತಶಯನ ತಿಳಿಸಿದ್ದಾರೆ.