ಸಾರಾಂಶ
ಪ್ರತಿಯೊಬ್ಬರು ಕನ್ನಡ ದಿನಪತ್ರಿಕೆಗಳನ್ನ ಓದುವ ಅಭ್ಯಾಸ ಬೆಳೆಸಿಕೊಳ್ಳು
ಕನ್ನಡಪ್ರಭ ವಾರ್ತೆ ಮೈಸೂರು
ಕನ್ನಡ ದಿನಪತ್ರಿಕೆಗಳನ್ನು ಪ್ರತಿದಿನ ಓದಿದರೇ ಸಮಾಜದ ಜ್ಞಾನ ಪಡೆದುಕೊಳ್ಳಬಹುದು, ಭಾಷಾ ಶಕ್ತಿ ವೃದ್ಧಿಯಾಗುತ್ತದೆ ಎಂದು ಶಾಸಕ ಟಿ.ಎಸ್. ಶ್ರೀವತ್ಸ ತಿಳಿಸಿದರು.ನಗರದ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಸಂದೀಪ್ ಸ್ನೇಹ ಬಳಗವು ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ದಿ.ಆರ್. ಚಂದ್ರಶೇಖರ್ ಅವರ 20ನೇ ವರ್ಷದ ನೆನಪಿನಾರ್ಥವಾಗಿ ಸೋಮವಾರ ಆಯೋಜಿಸಿದ್ದ ಕನ್ನಡ ಪತ್ರಿಕೆಗಳ ಓದುವ ವಾಚನಾಲಯ- ಕನ್ನಡ ಬೆಳಸಿ ಕನ್ನಡ ಉಳಿಸಿ ಅಭಿಯಾನಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.ದಸರಾ ವಸ್ತುಪ್ರದರ್ಶನ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು, ನಾಗರೀಕರು ಮತ್ತು ಮಳಿಗೆದಾರರು ವ್ಯಾಪಾರಸ್ಥರಲ್ಲಿ ಕನ್ನಡ ಪತ್ರಿಕೆಗಳನ್ನು ಓದುವ ಅಭ್ಯಾಸ, ಭಾಷಾಭಿಮಾನ ಮತ್ತು ಸಾಮಾಜಿಕ ಜ್ಞಾನವನ್ನ ಮೂಡಿಸಲು ವಾಚಾನಾಲಯ ಪ್ರಾರಂಭಿಸಿರುವುದು ಅರ್ಥಪೂರ್ಣವಾದುದು ಎಂದು ಅವರು ಶ್ಲಾಘಿಸಿದರು.ಶಿಕ್ಷಣ, ಉದ್ಯಮ, ಆಹಾರ, ಆರೋಗ್ಯ, ಕ್ರೀಡೆ, ಮನರಂಜನೆ, ಸಾಂಸ್ಕೃತಿಕ, ಸರ್ಕಾರದ ಕಾರ್ಯಕ್ರಮಗಳು, ರಾಜಕೀಯ, ಸಾಮಾಜಿಕ, ಧಾರ್ಮಿಕ, ಪರಿಸರ ಸೇರಿದಂತೆ ಸಾಕಷ್ಟು ವಿಷಯಗಳು ಒಂದು ಪತ್ರಿಕೆಯಲ್ಲಿ ನಿಮಗೆ ಮಾಹಿತಿ ಸಿಗುತ್ತದೆ. ಹೀಗಾಗಿ, ಪ್ರತಿಯೊಬ್ಬರು ಕನ್ನಡ ದಿನಪತ್ರಿಕೆಗಳನ್ನ ಓದುವ ಅಭ್ಯಾಸ ಬೆಳೆಸಿಕೊಳ್ಳುವಂತೆ ಅವರು ಕರೆ ನೀಡಿದರು.ಕನ್ನಡ ಸಾಹಿತ್ಯ ಕಲಾ ಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ಮಾತನಾಡಿ, ಎಷ್ಟೇ ದೃಶ್ಯವಾಹಿನಿ, ಡಿಜಿಟಲ್ ಮೀಡಿಯಾ ಬಂದರೂ ಕನ್ನಡ ಪತ್ರಿಕೆಗಳಿಗೆ ತನ್ನದೇ ಆದ ಓದುಗರ ಬಳಗ ಮೌಲ್ಯತೆ ಶಕ್ತಿಯಿದೆ. ಹೀಗಾಗಿ, ಕನ್ನಡ ಪತ್ರಿಕೋದ್ಯಮವನ್ನು ಬೆಳೆಸಲು ವಾರ್ತಾ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯೋಜನೆಗಳನ್ನ ರೂಪಿಸಲಿ ಎಂದು ಆಗ್ರಹಿಸಿದರು.ಬಸವ ಬಳಗದ ಚಾಮುಂಡಿಪುರಂ ಅಧ್ಯಕ್ಷ ಸಂದೀಪ್ ಚಂದ್ರಶೇಖರ್, ಸಾರ್ವಜನಿಕ ಕುಂದು ಕೊರತೆ ವಿಭಾಗದ ಅಧ್ಯಕ್ಷ ಅಹಮದ್, ಉಪಾಧ್ಯಕ್ಷರಾದ ವೆಂಕಟೇಶ್, ಶಂಕರ್, ಪ್ರಾಧಿಕಾರ ವ್ಯವಸ್ಥಾಪಕ ವೆಂಕಟೇಶ್, ಕುಟುಂಬ ವರ್ಗದವರಾದ ಗಾಯತ್ರಿ, ಸಂತೋಷ್, ಪಾರ್ವತಿ, ಸುರೇಶ್, ಆರ್. ಶಿವಶಂಕರ್ ಸ್ವಾಮಿ, ಮುಖಂಡರಾದ ಅಜಯ್ ಶಾಸ್ತ್ರಿ, ಅಂಬಳೆ ಶಿವಣ್ಣ, ಶ್ರೀಧರ್ ಭಟ್, ಪುರುಷೋತ್ತಮ್, ಶಿವಣ್ಣ, ಮಹೇಶ್, ಬಸವರಾಜು, ಕಿರಣ್, ವಿನಯ್, ಮಧುಸೂಧನ್, ದೀಪಕ್, ಧನುಷ್, ರೂಪೇಶ್, ದೀಪಕ್ ಇದ್ದರು.