ಅರಸೀಕೆರೆಯಲ್ಲಿ ದಸರಾ ಉತ್ಸವ ನಿಮಿತ್ತ ಶಮಿಪೂಜೆ ಮಾಡಿ ಸಂಭ್ರಮ

| Published : Oct 13 2024, 01:05 AM IST

ಅರಸೀಕೆರೆಯಲ್ಲಿ ದಸರಾ ಉತ್ಸವ ನಿಮಿತ್ತ ಶಮಿಪೂಜೆ ಮಾಡಿ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಅರಸೀಕೆರೆ ನಗರದ ಶ್ರೀಪ್ರಸನ್ನ ಗಣಪತಿ ಆಸ್ಥಾನ ಮಂಟಪದ ಮುಂಭಾಗದಲ್ಲಿ ವಿಜಯದಶಮಿ ಪ್ರಯುಕ್ತ ಗ್ರಾಮದೇವತೆ ಶ್ರೀಕರಿಯಮ್ಮ, ಶ್ರೀಮಲ್ಲಿಗಮ್ಮ ಹಾಗೂ ಮೆಳೇಯಮ್ಮ ದೇವಿ ಸಮ್ಮುಖದಲ್ಲಿ ಶಮಿಪೂಜೆ ಮಾಡಿ ಸಂಭ್ರಮಿಸಿದರು.

ಗ್ರಾಮದೇವತೆ ಶ್ರೀಕರಿಯಮ್ಮ, ಶ್ರೀಮಲ್ಲಿಗಮ್ಮ, ಮೆಳೇಯಮ್ಮ ದೇವಿಗೆ ಪೂಜೆ । ಬಾಳೇಕಂದು ಕಡಿದು, ಅಂಬು ಒಡೆದು ಆಚರಣೆ

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ಶ್ರೀಪ್ರಸನ್ನ ಗಣಪತಿ ಆಸ್ಥಾನ ಮಂಟಪದ ಮುಂಭಾಗದಲ್ಲಿ ವಿಜಯದಶಮಿ ಪ್ರಯುಕ್ತ ಗ್ರಾಮದೇವತೆ ಶ್ರೀಕರಿಯಮ್ಮ, ಶ್ರೀಮಲ್ಲಿಗಮ್ಮ ಹಾಗೂ ಮೆಳೇಯಮ್ಮ ದೇವಿ ಸಮ್ಮುಖದಲ್ಲಿ ಶಮಿಪೂಜೆ ಮಾಡಿದ ನಂತರ ಬಾಳೇಕಂದನ್ನು ಕಡಿಯುವ ಮೂಲಕ ಅಂಬು ಹೊಡೆಯುವ ಮೂಲಕ ಭಕ್ತಾಧಿಗಳು ಸಂಭ್ರಮದಿಂದ ನೆರವೇರಿಸಿದರು.

ನಗರದ ಶ್ರೀಪ್ರಸನ್ನ ಗಣಪತಿಯ 83 ನೇ ವರ್ಷಧ ಆಸ್ಥಾನ ಮಂಟಪದ ಮುಂಭಾಗ ವಿಜಯ ದಶಮಿ ಹಬ್ಬದ ಪ್ರಯುಕ್ತ ಪ್ರತಿವರ್ಷದ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಅಂಬು ಹೊಡೆದು ಧಾರ್ಮಿಕ ಕೈಂಕರ್ಯವನ್ನು ನೇರವೇರಿಸಿದರು.

ಪೂಜೆ ಸಲ್ಲಿಸಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಸನಾತನ ಹಿಂದು ಧರ್ಮದಲ್ಲಿ ಗಣೇಶನ ಪೂಜೆಗೆ ಅಗ್ರಸ್ಥಾನ ನೀಡಲಾಗಿದೆ. ಸರ್ವ ವಿಘ್ನ ನಿವಾರಕ ಶ್ರೀಗಣೇಶ ಮತ್ತು ಗ್ರಾಮದೇವತೆಗಳಾದ ಕರಿಯಮ್ಮ ಮತ್ತು ಮಲ್ಲಿಗಮ್ಮ ದೇವಿಯವರ ಸಮ್ಮುಖದಲ್ಲಿ 56 ವರ್ಷಗಳಿಂದ ವಿಜಯ ದಶಮಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ದುಷ್ಟ ಸಂಹಾರ ಶಿಷ್ಟರ ಪರಿಪಾಲನೆ ವಿಶೇಷತೆಯ ವಿಜಯದ ಸಂಕೇತವಾಗಿ ಶಮಿಪೂಜೆಯನ್ನು ನೆರವೇರಿಸಲಾಗಿದೆ. ವಿಜಯದಶಮಿ ಹಬ್ಬದ ಧಾರ್ಮಿಕ ಆಚರಣೆ ಮಾಡುವ ಮೂಲಕ ಸತತ ಬರಗಾಲ ಪೀಡಿತ ನಮ್ಮ ತಾಲೂಕಿನಲ್ಲಿ ಉತ್ತಮ ಮಳೆ, ಬೆಳೆಯಾಗಲಿ ಹಾಗೂ ನಾಡಿನೆಲ್ಲೆಡೆ ಜನತೆಯೂ ಸುಖ ಶಾಂತಿ ನೆಮ್ಮದಿಯಿಂದ ಸಮೃದ್ದಿಯ ಬದುಕು ಬಾಳಲು ಭಗವಂತ ಆಶೀರ್ವಾದ ನೀಡಲಿ ಎಂದು ಪ್ರಾರ್ಥಿಸೋಣ ಎಂದು ಹೇಳಿದರು.

ಸನಾತನ ಧರ್ಮದ ಪ್ರತಿಯೊಂದು ಹಬ್ಬದ ಆಚರಣೆಗಳೂ ವೈಜ್ಞಾನಿಕ ಕಾರಣಗಳಿಂದ ಕೂಡಿದ್ದು, ನಮ್ಮ ಪೂರ್ವಿಕರ ಮುಂದಾಲೋಚನೆ ಬಗ್ಗೆ ನಿಜಕ್ಕೂ ಎಲ್ಲರಿಗೂ ಅಚ್ಚರಿಯನ್ನು ಉಂಟು ಮಾಡುತ್ತಿದೆ. ಯಾವ ಯಾವ ಕಾಲಕ್ಕೆ ಹಬ್ಬಗಳನ್ನು ಯಾವ ಕಾರಣಕ್ಕೆ ಆಚರಣೆ ಮಾಡಬೇಕು ಆದರ ಪ್ರಾಮುಖ್ಯತೆ ಏನು ಎಂಬುದನ್ನು ತಿಳಿದು ನಾವು ಶ್ರದ್ಧೆ, ಭಕ್ತಿಯಿಂದ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಎಂದು ಭಾವಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಭಕ್ತಮಂಡಳಿ ಭಕ್ತಮಂಡಲಿ ಕಾರ್ಯದರ್ಶಿ ನಾಗಭೂಷಣ್, ಸ್ವಾಮಿ, ಎಸ್.ವಿ.ಟಿ ಬಾಬು, ಮಹೇಶ್‌ ಹಾಗೂ ಸಾವಿರಾರು ಭಕ್ತರು ಭಾಗವಹಿಸಿದ್ದರು.

ವಿಜಯ ದಶಮಿ ಅಂಗವಾಗಿ ಶಿವಾಲಯದ ಚಂದ್ರಮೌಳೇಶ್ವರ, ದೇವಾಲಯ ಕಾಳನ ಕೊಪ್ಪಲು ಗ್ರಾಮದ ಶ್ರೀಮರುಳಸಿದ್ದೇಶ್ವರ ದೇವಾಲಯ, ನಗರದ ಶಾನುಭೋಗರ ಬೀದಿಯ ಮೇಗಲ ಮಠದಲ್ಲಿನ ಶ್ರೀಗುರು ಸಿದ್ದರಾಮೇಶ್ವರ ದೇವಾಲಯ ಸೇರಿದಂತೆ ತಾಲೂಕಿನಾದ್ಯಂತ ವಿವಿಧ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮತ್ತು ವಿಶೇಷ ಪೂಜಾ ಕೈಕಂರ್ಯಗಳನ್ನು ನೆರವೇರಿಸಲಾಯಿತು.

ಭಕ್ತಾದಿಗಳು ಮುಂಜಾನೆಯಿಂದ ಸಂಜೆವರೆಗೂ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ದೇವತೆಗಳಿಗೆ ಪೂಜೆ ಸಲ್ಲಿಸಿ ದರ್ಶನ ಭಾಗ್ಯವನ್ನು ಪಡೆಯುವ ಮೂಲಕ ಪುನೀತರಾಗಿ ತಮ್ಮ ಭಕ್ತಿ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿ ಎಲ್ಲೆಡೆ ಕಂಡು ಬಂತು.