ಸಾರಾಂಶ
ರಂಗಭೂಮಿ ಕಲೆ ಇನ್ನು ಹೆಚ್ಚಿನ ರೀತಿಯಲ್ಲಿ ಪೀಳಿಗೆಯಿಂದ ಪೀಳಿಗೆಗೆ ಹೋಗಬೇಕು. ಈ ನಿಟ್ಟಿನಲ್ಲಿ ದಸರಾ ರಂಗಗೀತೆಗಳ ಗಾಯನ ಕಾರ್ಯಕ್ರಮ ಉಪಯುಕ್ತವಾಗಿದೆ.
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ರಂಗಭೂಮಿ ಕಲೆ ಉಳಿದರೆ ಮಾತ್ರ ನಮ್ಮ ದೇಶದ ಕಲೆ, ಸಂಸ್ಕೃತಿ ಹಾಗೂ ಪರಂಪರೆಯು ಉಳಿಯುತ್ತದೆ. ಆಧುನಿಕ ಯುಗದಲ್ಲಿಯು ನಾಟಕ ಕಲೆಗೆ ಜನರ ಪ್ರೋತ್ಸಾಹ ಹೆಚ್ಚಿನದಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ತಿಳಿಸಿದರು. ನಗರದ ಡಾ. ರಾಜಕುಮಾರ್ ಕಲಾಮಂದಿರದಲ್ಲಿ ಚೆಲುವ ಚಾಮರಾಜನಗರ ದಸರಾ ಮಹೋತ್ಸವದ ಕಾರ್ಯಕ್ರಮದಲ್ಲಿ ರಂಗ ಗೀತೆಗಳ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ, ರಂಗಭೂಮಿ ಕಲಾವಿದರಿಗೆ ಪ್ರಮಾಣ ಪತ್ರ ನೀಡಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ನಾಟಕ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ದಸರಾ ಮಹೋತ್ಸವ-೨೦೨೪ರದಲ್ಲಿ ಡಾ. ರಾಜಕುಮಾರ್ ಕಲಾಮಂದಿರದಲ್ಲಿ ಮೂರು ದಿನಗಳ ನಾಟಕಗಳ ಉತ್ಸವವೇ ನಡೆಯುತ್ತಿದೆ. ನಾಟಕಗಳನ್ನು ವೀಕ್ಷಣೆ ಮಾಡಲು ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದಕ್ಕೆ ಸಂತೋಷ ತಂದಿದೆ. ಹೀಗಾಗಿ ಸಿನಿಮಾ ಮತ್ತು ಧಾರಾವಾಹಿಗಳು, ಸಾಮಾಜಿಕ ಜಾಲತಾಣಗಳ ಭರಾಟೆಯ ನಡುವೆಯೂ ನಾಟಕ ಕಲೆಗೆ ಹೆಚ್ಚಿನ ಬೆಂಬಲ ಇದೆ ಎನ್ನುವುದಕ್ಕೆ ಮೂರು ದಿನಗಳ ನಾಟಕ ಕಾರ್ಯಕ್ರಮ ಯಶಸ್ವಿಯಾಗಿರುವುದೇ ಸಾಕ್ಷಿ ಎಂದರು. ಚಾಮರಾಜನಗರ ಜಿಲ್ಲೆ ಜನಪದರ ತವರೂರು. ಹೀಗಾಗಿ ಇಲ್ಲಿ ನಾಟಕ ಮತ್ತು ರಂಗಭೂಮಿ ಕಲಾವಿದರು, ಜಾನಪದ ಗಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ರಂಗಭೂಮಿ ಕಲೆ ಇನ್ನು ಹೆಚ್ಚಿನ ರೀತಿಯಲ್ಲಿ ಪೀಳಿಗೆಯಿಂದ ಪೀಳಿಗೆಗೆ ಹೋಗಬೇಕು. ಈ ನಿಟ್ಟಿನಲ್ಲಿ ದಸರಾ ರಂಗಗೀತೆಗಳ ಗಾಯನ ಕಾರ್ಯಕ್ರಮ ಉಪಯುಕ್ತವಾಗಿದೆ ಎಂದರು. ರಂಗಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ೬೦ಕ್ಕೂ ಹೆಚ್ಚು ಮಂದಿ ಕಲಾವಿದರು ರಂಗಗೀತೆಗಳನ್ನು ಹಾಡಿ ರಂಜಿಸಿದರು. ಎಲ್ಲ ಕಲಾವಿದರಿಗೂ ದಸರಾ ಮಹೋತ್ಸವ ಆಚರಣೆ ಸಮಿತಿಯಿಂದ ಪ್ರಮಾಣ ಪತ್ರವನ್ನು ನೀಡಲಾಯಿತು. ನಂತರ ಮಂಗಲ ಗ್ರಾಮದ ಶಿವಪಾರ್ವತಿ ಕಲಾಸಂಘದ ಡ್ರಾಮ್ ಮಾಸ್ಟರ್ ಶಿವಣ್ಣ ಅವರ ನಿರ್ದೇಶನದಲ್ಲಿ ಚಂದ್ರಮನ ಪರಿಭವ ಪೌರಾಣಿಕ ನಾಟಕ ಪ್ರದರ್ಶನ ವಾಯಿತು. ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜು ಉಪನಿರ್ದೇಶಕ ಮಂಜುನಾಥ ಪ್ರಸನ್ನ, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಮಂಜುನಾಥ, ಸಹಾಯಕ ನಿರ್ದೇಶಕ ಪ್ರಶಾಂತ್, ಶ್ರೀನಿವಾಸಮೂರ್ತಿ, ಉಪಸ್ಥಿತರಿದ್ದರು. ಮಾದಾಪುರ ರವಿಕುಮಾರ್ ನಿರೂಪಿಸಿದರು.