ಮಡಿಕೇರಿಯಲ್ಲಿ ಸಂಭ್ರಮದ ಜಾನಪದ ದಸರಾ: ವೈಭವದ ಮೆರವಣಿಗೆ

| Published : Oct 11 2024, 11:50 PM IST

ಸಾರಾಂಶ

ರಾಷ್ಟ್ರದಲ್ಲಿ ಹಲವು ಸಂಸ್ಕೃತಿ, ಜಾನಪದ ಕಲೆಗಳನ್ನು ಒಳಗೊಂಡಿದ್ದರೂ ಸಹ ಮೂಲ ಒಂದೇ ಆಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಗರದ ಗಾಂಧಿ ಮೈದಾನದಲ್ಲಿ ಮಡಿಕೇರಿ ದಸರಾ ಸಮಿತಿ ವತಿಯಿಂದ ನಡೆದ ಜಾನಪದ ದಸರಾಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಷ್ಟ್ರದಲ್ಲಿ ಹಲವು ಸಂಸ್ಕೃತಿ, ಜಾನಪದ ಕಲೆಗಳನ್ನು ಒಳಗೊಂಡಿದ್ದರೂ ಸಹ ಮೂಲ ಒಂದೇ ಆಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರದ ಗಾಂಧಿ ಮೈದಾನದಲ್ಲಿ ಮಡಿಕೇರಿ ದಸರಾ ಸಮಿತಿ ವತಿಯಿಂದ ನಡೆದ ಜಾನಪದ ದಸರಾಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜಾನಪದ ಕಲೆಗಳು ಭಾರತೀಯ ಸಂಸ್ಕೃತಿ ಮತ್ತು ಇತಿಹಾಸ ತಿಳಿಸುತ್ತವೆ. ಆ ನಿಟ್ಟಿನಲ್ಲಿ ಕಲೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಹಿಂದಿನ ಕಲೆ ಮತ್ತು ಸಂಸ್ಕೃತಿ ಸಂಬಂಧಿಸಿದಂತೆ ಮಕ್ಕಳಿಗೆ ಮಾಹಿತಿ ನೀಡುವಂತಾಗಬೇಕು. ಜಿಲ್ಲಾಡಳಿತ ವತಿಯಿಂದ ಜಾನಪದ ಪರಿಷತ್‌ಗೆ ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡಲಾಗುವುದು. ಜಾನಪದ ಪರಿಷತ್‌ಗೆ ಜಾಗ ಕಲ್ಪಿಸುವ ಸಂಬಂಧ ಕ್ರಮವಹಿಸಲಾಗುವುದು ಎಂದು ಹೇಳಿದರು.

ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಕೊಡಗಿನ ಜಾನಪದ ಸಂಸ್ಕೃತಿ ಶ್ರೀಮಂತಿಕೆ ಹೊಂದಿದೆ ಎಂದರು.

ಜಾನಪದ ಕಲೆಗಳ ಸಂಬಂಧ ಪದವಿ ಕೋರ್ಸ್ ಇದ್ದು, ಇದನ್ನು ಆಸಕ್ತರು ಅಧ್ಯಯನ ಮಾಡುವಂತಾಗಬೇಕು. ಜಾನಪದ ಪರಿಷತ್‌ಗೆ ಜಿಲ್ಲಾಡಳಿತ ವತಿಯಿಂದ ಅಗತ್ಯ ಭೂಮಿ ಮಂಜೂರು ಮಾಡಬೇಕು ಎಂದು ಕೋರಿದರು.

ಕೊಡಗು ಜಿಲ್ಲೆಯಲ್ಲಿ ಜಾನಪದ ಪರಿಷತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಇಲ್ಲಿನ ಸ್ಥಳೀಯ ಸಂಸ್ಕೃತಿ ಆಚಾರ-ವಿಚಾರ ಉಳಿಸಲು ಶ್ರಮಿಸುತ್ತಿದೆ ಎಂದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಜಾನಪದವೇ ಭಾಷೆಯಾಗಿದೆ. ಬಹು ಸಂಸ್ಕೃತಿಯ ನಾಡಿನಲ್ಲಿ ಜಾನಪದ ಕಲೆಗಳು ಉಳಿಸುವಲ್ಲಿ ಜಾನಪದ ಪರಿಷತ್ತು ಶ್ರಮಿಸುತ್ತಿದೆ ಎಂದರು.

ಜಾನಪದ ಕಲೆಗಳು ಪ್ರತಿಯೊಬ್ಬರನ್ನೂ ಒಟ್ಟುಗೂಡಿಸುತ್ತವೆ. ಇದರಿಂದ ಪ್ರತಿಯೊಬ್ಬರಲ್ಲಿಯೂ ಸಹಬಾಳ್ವೆ ಹೆಚ್ಚಾಗುತ್ತದೆ. ಜಾನಪದ ಮತ್ತು ಸಂಗೀತಕ್ಕೆ ಯಾವುದೇ ರೀತಿಯ ಜಾತಿ, ಧರ್ಮ ಭೇದವಿಲ್ಲ ಎಂದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ, ಜಾನಪದ ಕಲೆಗಳು ಉಳಿದಾಗ ನಾಡಿನ ಸಂಸ್ಕೃತಿ ಉಳಿಯಲು ಸಾಧ್ಯ. ಆ ನಿಟ್ಟಿನಲ್ಲಿ ಜಾನಪದ ಕಲೆಗಳನ್ನು ಮಕ್ಕಳಿಗೆ ತಿಳಿಸಬೇಕು ಮತ್ತು ಕಲಿಸಬೇಕು ಎಂದರು.

ಜಾನಪದ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹೀಗೆ ವಿವಿಧ ಅಕಾಡೆಮಿಗಳು ಹಾಗೂ ಸಂಘಟನೆಗಳ ಸಹಕಾರದಲ್ಲಿ ಜಾನಪದ ದಸರಾ ಆಚರಿಸಲಾಗುತ್ತಿದೆ ಎಂದರು.

ಸಾಹಿತಿ ಫ್ಯಾನ್ಸಿ ಮುತ್ತಣ್ಣ ಹಾಗೂ ಕಿಗ್ಗಾಲು ಗಿರೀಶ್ ಅವರು ಹೊರ ತಂದಿರುವ ಪುಸ್ತಕ ಬಿಡುಗಡೆ ಮಾಡಲಾಯಿತು. ನಿವೃತ್ತ ಶಿಕ್ಷಕ ಬಿ.ಸಿ.ಶಂಕರಯ್ಯ ಅವರನ್ನು ಸನ್ಮಾನಿಸಲಾಯಿತು.

ಹಲವು ದಶಕಗಳ ಹಳೇ ಪರಿಕರಗಳ ಪ್ರದರ್ಶನಕ್ಕೆ ಅವಕಾಶ ಮಾಡಿದ ಪೊನ್ನಚ್ಚನ ಮಧುಸೂದನ್, ಸರ್ವೋದಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಜಾನಪದ ಪರಿಷತ್ತಿನ ಪ್ರಕಾಶ್, ದಿಲನ್, ಥಾಮಸ್, ಪ್ರಶಾಂತ್, ಸುಶಾನದೇವಿ ಮತ್ತಿತರರು ಇದ್ದರು.

ಜಾನಪದ ಪರಿಷತ್ತಿನ ಮುನೀರ್ ಅಹ್ಮದ್ ಸ್ವಾಗತಿಸಿದರು. ಜಯಲಕ್ಷ್ಮಿ ಮತ್ತು ಪ್ರತಿಮಾ ರೈ ನಿರೂಪಿಸಿದರು. ಸಂಪತ್ ಕುಮಾರ್ ವಂದಿಸಿದರು.

ಜಾನಪದ ದಸರಾ ಮೆರವಣಿಗೆಗೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಚಾಲನೆ ನೀಡಿದರು.