ರಾಷ್ಟ್ರೀಯ ಕ್ರೀಡೆಗಳಿಗೆ ದಸರಾ ಕ್ರೀಡಾಕೂಟ ವೇದಿಕೆ

| Published : Sep 21 2024, 01:48 AM IST

ಸಾರಾಂಶ

ಪ್ರತಿಯೊಬ್ಬರಲ್ಲೂ ಕ್ರೀಡಾ ಪ್ರತಿಭೆಗೆ ಅಡಕವಾಗಿರುತ್ತದೆ. ಅದನ್ನು ಹೊರಗೆಳೆಯುವಲ್ಲಿ ಸೂಕ್ತ ವೇದಿಕೆ ಕಲ್ಪಿಸಿ ಈ ಮೂಲಕ ಸ್ಫೂರ್ತಿ ತುಂಬಬೇಕು.

ರೋಣ: ಗ್ರಾಮೀಣ ಭಾಗದ ಕ್ರೀಡಾಪಟುಗಳನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನಾಗಿ ಗುರುತಿಸುವಲ್ಲಿ ದಸರಾ ಕ್ರೀಡೆ ಅತ್ಯಂತ ಸೂಕ್ತ ವೇದಿಕೆಯಾಗಿದ್ದು, ಯುವ ಜನತೆ ಇದರ ಪ್ರಯೋಜನ ಪಡೆದು ಅಂತಾರಾಷ್ಟ್ರೀಯ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಅವರು ಶುಕ್ರವಾರ ಪಟ್ಟಣದ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ತಾಪಂ ರೋಣ ಹಾಗೂ ಪವನಸುತ ವಿವಿದೋದ್ದೇಶಗಳ ಸಂಘ ರೋಣ ಸಂಯುಕ್ತಾಶ್ರಯದಲ್ಲಿ 2024-25 ನೇ ಸಾಲಿನ ಜರುಗಿದ ರೋಣ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಕ್ರೀಡಾಪಟುಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ದಸರಾ ಕ್ರೀಡಾಕೂಟವು ಸಾಂಸ್ಕೖತಿಕ ಮತ್ತು ಸಾಮೂದಾಯಕ ಭಾವನೆಗಳ ಬೆಸೆಯುವ ಕೊಂಡಿಯಾಗಿದೆ. ಕ್ರೀಡಾಕೂಟಗಳು ಕೇವಲ ಪುರುಷರಿಗೆ ಸೀಮಿತವಾಗದೇ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಈ ದಿಶೆಯಲ್ಲಿ ರೋಣ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ತಾಲೂಕಿನ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಜಿಲ್ಲಾ ನಿರ್ದೇಶಕ ಶರಣರು ಗೋಗೇರಿ ಮಾತನಾಡಿ, ಪ್ರತಿಯೊಬ್ಬರಲ್ಲೂ ಕ್ರೀಡಾ ಪ್ರತಿಭೆಗೆ ಅಡಕವಾಗಿರುತ್ತದೆ. ಅದನ್ನು ಹೊರಗೆಳೆಯುವಲ್ಲಿ ಸೂಕ್ತ ವೇದಿಕೆ ಕಲ್ಪಿಸಿ ಈ ಮೂಲಕ ಸ್ಫೂರ್ತಿ ತುಂಬಬೇಕು. ಕ್ರೀಡೆಯಿಂದ ದೈಹಿಕವಾಗಿ ಸದೃಢವಾಗುವದರ ಜತೆಗೆ ಮಾನಸಿಕವಾಗಿ ಸದೃಢತೆ ಹೊಂದಬಹುದು. ಯೋಗ, ವ್ಯಾಯಾಮ ಕ್ರೀಡೆಯಲ್ಲಿ ತೊಡಗುವ ವ್ಯಕ್ತಿಯು ಆರೋಗ್ಯಯುತವಾಗಿರುತ್ತಾನೆ. ಆರೋಗ್ಯಯುತ ವ್ಯಕ್ತಿಯು ಸಮಾಜ, ದೇಶದ ಆಸ್ತಿಯಾಗುವದು. ಯುವಕರು ದಸರಾ ಕ್ರೀಡಾಕೂಟದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಧನೆ ಗೈಯಬೇಕು ಆ. 24 ರಲ್ಲಿ ಜಿಲ್ಲಾ ಮಟ್ಟದ ದಸರಾ, ಆ. 28 ರಂದು ಬೆಳಗಾವಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ಜರುಗಲಿವೆ ಎಂದರು.

ಧ್ವಜಾರೋಹನವನ್ನು ತಹಸೀಲ್ದಾರ ನಾಗರಾಜ.ಕೆ ನೆರವೇರಿಸಿದರು. ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ, ಉಪಾಧ್ಯಕ್ಷ ದುರ್ಗಪ್ಪ ಹಿರೇಮನಿ, ತಹಸೀಲ್ದಾರ್‌ ನಾಗರಾಜ‌.ಕೆ, ಬಿಇಒ ರುದ್ರಪ್ಪ ಹುರಳಿ, ಕೃಷಿ ಉಪ ನಿರ್ದೇಶಕ ಬಿ.ಆರ್. ಫಾಲಾಕ್ಷಗೌಡ, ತಾಪಂ ಯೋಜನಾಧಿಕಾರಿ ಸಿ.ಎಸ್. ನೀಲಗುಂದ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿರ್ದೇಶಕ ಶರಣು ಗೋಗೇರಿ,ವಿ.ಬಿ. ಸೋಮನಕಟ್ಟಿಮಠ, ಆರ್.ಎಸ್. ನರೇಗಲ್ಲ, ಪುರಸಭೆ ಸದಸ್ಯರಾದ ಮಲ್ಲಯ್ಯ ಮಹಾಪುರುಷಮಠ, ವಿದ್ಯಾ ಬಡಿಗೇರ, ರಂಗವ್ವ ಭಜಂತ್ರಿ, ಗದಿಗೆಪ್ಪ ಕಿರೇಸೂರ, ಅಂದಪ್ಪ ಗಡಗಿ, ಅಭಿಷೇಕ ನವಲಗುಂದ, ಶಂಕರಗೌಡ ಪಾಟೀಲ ಹೊನ್ನಾಪೂರ, ಅಮೀನಸಾಬ್‌ ಮಾಗಿ, ಎ.ಎಸ್. ದಾನರಡ್ಡಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕ ಎಸ್.ಐ.ನೀಲಪ್ಪಗೌಡ್ರ ನಿರೂಪಿಸಿದರು. ಬಸವರಾಜ ಹೊಸಳ್ಳಿ ಸ್ವಾಗತಿಸಿದರು. ಯಲ್ಲಪ್ಪ ಕಿರೇಸೂರ ವಂದಿಸಿದರು.