ಸಾರಾಂಶ
ಪಟ್ಟಣದ ಹೊರವಲಯದ ದೇವಿ ಗುಡಿಯಿಂದ ತೊಟ್ಟಿಲಿನಲ್ಲಿ ಅಮ್ಮನವರ ಆಯುಧಗಳಾದ ಕುದುರೆ ವಾಹನ, ಕತ್ತಿ, ಗುರಾಣಿ ಮತ್ತಿತರ ಅಸ್ತ್ರಗಳನ್ನು ಇಡಲಾಯಿತು.
ಕಿಕ್ಕೇರಿ: ಲಕ್ಷ್ಮೀಪುರ ಹಾಗೂ ಕಿಕ್ಕೇರಿಯ ಗ್ರಾಮದೇವತೆ ಕಿಕ್ಕೇರಮ್ಮನವರ ಶಸ್ತ್ರಾಸ್ತ್ರಗಳನ್ನು ಮೆರವಣಿಗೆ ಮೂಲಕ ಆಯುಧಪೂಜೆಯ ಹಬ್ಬವನ್ನು ಆಚರಿಸಲಾಯಿತು. ಪಟ್ಟಣದ ಹೊರವಲಯದ ದೇವಿ ಗುಡಿಯಿಂದ ತೊಟ್ಟಿಲಿನಲ್ಲಿ ಅಮ್ಮನವರ ಆಯುಧಗಳಾದ ಕುದುರೆ ವಾಹನ, ಕತ್ತಿ, ಗುರಾಣಿ ಮತ್ತಿತರ ಅಸ್ತ್ರಗಳನ್ನು ಇಡಲಾಯಿತು. ಅರ್ಚಕರು ಆಯುಧಗಳಿಗೆ ಪೂಜಿಸಿ ಗುಡಿಯ ಸುತ್ತ ಮೂರು ಪ್ರದಕ್ಷಿಣೆ ಹಾಕಿದರು. ನಂತರ ದೇವಿ ತೊಟ್ಟಿಲಿನ ಮೆರವಣಿಗೆ ಮಂಗಳವಾದ್ಯದೊಂದಿಗೆ ಸಾಗಿತು. ಹೊಸಬೀದಿ, ರಥಬೀದಿ, ಕೆ.ಎಸ್. ನರಸಿಂಹಸ್ವಾಮಿ ಬೀದಿ, ಸುಬ್ಬರಾಯರ ಛತ್ರದ ಬೀದಿ, ಬ್ರಹ್ಮೇಶ್ವರ ಬೀದಿಯಲ್ಲಿ ದೇವಿಯ ಆಯುಧಗಳ ಮೆರವಣಿಗೆ ಸಾಗಿ ಅಂತಿಮವಾಗಿ ಮೂಲಗುಡಿಗೆ ಸಾಗಿತು. ಭಕ್ತರು ದೇವಿ ಆಯುಧಗಳಿಗೆ ಭಕ್ತಿಯಿಂದ ನಮಿಸಿ ಪುಷ್ಪ ಪ್ರಸಾದವನ್ನು ಸ್ವೀಕರಿಸಿದರು.