ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಹಳೇ ಅಂಚೆಕೇರಿ ಬೀದಿ ನಾಗರತ್ನ ನಾರಾಯಣ ಭಟ್ ಜ್ಞಾನ ಮಂದಿರದಲ್ಲಿ ಸರ್ವಮಂಗಳ- ಕೃಷ್ಣಭಟ್ ದಂಪತಿ ಕೂರಿಸಿರುವ ದಸರಾ ಬೊಂಬೆಗಳ ಪ್ರದರ್ಶನವು ಜನರನ್ನು ಆಕರ್ಷಿಸುತ್ತಿದೆ.ಪಟ್ಟಣ ಮುಖ್ಯ ರಸ್ತೆಯ ಶ್ರೀ ಲಕ್ಷ್ಮೀ ದೇವಸ್ಥಾನದ ಪ್ರಧಾನ ಅರ್ಚಕರೂ ಆಗಿರುವ ಕೃಷ್ಣ ಭಟ್ ದಂಪತಿ ಪ್ರತಿ ವರ್ಷವೂ ನವರಾತ್ರಿ ವೇಳೆ ಬೊಂಬೆಗಳನ್ನು ವಿಶೇಷ ರೀತಿಯಲ್ಲಿ ಅಲಂಕರಿಸಿ ಸಾರ್ವಜನಿಕರ ವೀಕ್ಷಣೆಗೆ ಅನುಕೂಲ ಮಾಡಿಕೊಡುತ್ತಿದ್ದಾರೆ.
ಬಗೆ ಬಗೆಯ ಬೊಂಬೆಗಳನ್ನು ಖರೀದಿಸಿ ತಂದು ಜೊತೆಗೆ ತಾವೇ ಸಿದ್ಧಪಡಿಸಿದ ಬಗೆ ಬಗೆಯ ಉಡುಪಿನಿಂದ ಸಿಂಗರಿಸಿ, ನಾಡಿನ ಹಾಗೂ ದೇಶದ ಸಾಂಸ್ಕೃತಿಕ ಕಲೆಗಳನ್ನು ಅನಾವರಣಗೊಳಿಸುತ್ತಾ ಬಂದಿದ್ದಾರೆ.ಬೊಂಬೆಗಳ ಪ್ರದರ್ಶನದಲ್ಲಿ ದಸರಾ ಅಂಬಾರಿ ಮೆರವಣಿಗೆ, ಶ್ರೀ ನಾರಾಯಣ ಸ್ವಾಮಿಯ ದಶಾವತಾರ, ಅಷ್ಟ ದುರ್ಗಿಯರು, ಅಷ್ಟ ಲಕ್ಷ್ಮೀಯರು, ಋಷಿ ಮುನಿಗಳ ತಪಸ್ಸು, ಯುದ್ಧ ಬಿಂಬಿತ ಚಿತ್ರಗಳು, ಕುಸ್ತಿ, ಮಲ್ಲಗಂಭ, ವೀರಗಂಭ, ಕೋಲಾಟ, ಸಹಪಂಕ್ತಿ ಭೋಜನ, ಗ್ರಾಮೀಣ ಸೊಗಡು ಬಿಂಬಿಸುವ ಚಿತ್ರಣ. ಧಾರ್ಮಿಕ ಹಿನ್ನೆಲೆಯುಳ್ಳ ಕೃಷ್ಣ- ರುಕ್ಮಿಣಿಯ ಚಂದನದ ಗೊಂಬೆ, ತಿರುಪತಿ ವೆಂಕಟೇಶ್ವರ ಸ್ವಾಮಿ ದೇವರ ಮುಖವಾಡಗಳಿಗೆ ವಿಶೇಷವಾಗಿ ಕೈಯಲ್ಲಿ ಅಲಕೃಂತಗೊಂಡಿದ್ದ ಬೊಂಬೆಗಳು ಸೇರಿದಂತೆ ಸಾಂಸ್ಕೃತಿಕ ಉಡುಗೆ- ತೊಡುಗೆಗಳು ಹಾಗೂ ತಲ ತಲಾಂತರದಿಂದ ನಡೆದುಕೊಂಡು ಬಂದಿರುವ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಸುಮಾರು ೩ ಸಾವಿರಕ್ಕೂ ಹೆಚ್ಚು ಬೊಂಬೆಗಳು ಇಲ್ಲಿ ನೋಡ ಸಿಗಲಿರುವುದು ವಿಶೇಷವಾಗಿದೆ.
ನವರಾತ್ರಿ ಆರಂಭದಿಂದ 15 ದಿನಗಳವರೆಗೆ ಬೊಂಬೆಗಳ ಪ್ರದರ್ಶನ ಇರಲಿದೆ. ವಿಶೇಷ ವಿದ್ಯುತ್ ದೀಪಾಲಂಕಾರಗಳಿಂದ ಅಲಂಕೃತಗೊಳಿಸಿದ್ದು, ನೋಡಲು ಬಂದ ಸಾಕಷ್ಟು ಮಕ್ಕಳನ್ನು ಈ ಬೊಂಬೆಗಳು ತನ್ನತ್ತ ಸೆಳೆಯುತ್ತಿವೆ. ಕಳೆದ 40 ವರ್ಷಗಳಿಂದ ಈ ದಸರಾ ಬೊಂಬೆ ಪ್ರರ್ಶನ ನಡೆಸಿಕೊಂಡು ಬರುತ್ತಿರುವ ಈ ಕುಟುಂಬವು ಧಾರ್ಮಿಕ ನೆಲೆಗಟ್ಟಿನ ಹಾಗೂ ನಮ್ಮ ಸಂಸ್ಕೃತಿ ಆಚರಣೆಯ ಪರಂಪರೆಯನ್ನು ಇಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನ ಮಾಡುತ್ತಿದೆ.ಧಾರ್ಮಿಕ ಕೇಂದ್ರಗಳಿಗೆ ತೆರಳಿದ್ದ ಸಮಯದಲ್ಲಿ ಕಣ್ಣಿಗೆ ಬಿದ್ದ ಆಕರ್ಷಿತ ಬೊಂಬೆಗಳನ್ನು ಖರೀದಿ ಮಾಡಿ ತಂದು ಬೊಂಬೆಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಬಾರಿ ಪ್ರದರ್ಶನವಾದ ಎಲ್ಲಾ ಬೊಂಬೆಗಳನ್ನು ಸುರಕ್ಷಿತವಾಗಿ ಪೇಪರ್‌ಗಳಲ್ಲಿ ಸುತ್ತಿ, ಸಂರಕ್ಷಿಸಿ ಮುಂದಿನ ನವರಾತ್ರಿವರೆಗೂ ಬೃಹತ್ ಬಾಕ್ಸ್‌ಗಳಲ್ಲಿ ಭದ್ರಪಡಿಸಲಾಗುವುದು ಎಂದು ಕೃಷ್ಣ ಭಟ್ ದಂಪತಿ ತಿಳಿಸಿದರು.