ದಸರಾ ವಿಶೇಷ: ನವರಾತ್ರಿಗೆ ಅಂದಚೆಂದದ ಬೊಂಬೆಗಳ ಪ್ರದರ್ಶನ

| Published : Oct 10 2024, 02:26 AM IST

ಸಾರಾಂಶ

ಬೊಂಬೆಗಳನ್ನು ಕೂರಿಸುವುದರಲ್ಲಿ ಪತ್ನಿ ಉಷಾ ಅವರಿಗೆ ಪತಿ ಸೀತಾರಾಮ್ ನೆರವಾಗುತ್ತಿದ್ದಾರೆ. ವಯಸ್ಸಾಗಿದ್ದರೂ ಬೊಂಬೆಗಳನ್ನು ಕೂರಿಸುವ ಬಗೆಗಿನ ಆಸಕ್ತಿ ಕಡಿಮೆಯಾಗಿಲ್ಲ. ಅದನ್ನು ದಂಪತಿ ಶ್ರಮ ಎಂದುಕೊಂಡೂ ಇಲ್ಲ. ಶಿಸ್ತು ಮತ್ತು ಶ್ರದ್ಧೆಯಿಂದ ಬೊಂಬೆಗಳನ್ನು ಕೂರಿಸುತ್ತಾ ನವರಾತ್ರಿಯ ಸೊಬಗನ್ನು ಬೊಂಬೆಗಳನ್ನು ಕೂರಿಸುವುದರೊಂದಿಗೆ ಹೆಚ್ಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನವರಾತ್ರಿ ಸಮಯದಲ್ಲಿ ಬೊಂಬೆಗಳನ್ನು ಕೂರಿಸುವ ಸಂಪ್ರದಾಯವನ್ನು ಹಲವರು ಹಿಂದಿನಿಂದಲೂ ರೂಢಿಸಿಕೊಂಡು ಬಂದಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ದಸರಾ ಬೊಂಬೆಗಳು ನೋಡುಗರನ್ನು ಆಕರ್ಷಿಸುತ್ತಿವೆ. ಅಂದ- ಚೆಂದದ ಬೊಂಬೆಗಳು ತಮ್ಮದೇ ವೈಶಿಷ್ಟ್ಯತೆಯಿಂದ ಎಲ್ಲರ ಗಮನಸೆಳೆಯುತ್ತಿವೆ.

ಇಲ್ಲಿನ ನೆಹರು ನಗರದಲ್ಲಿರುವ ಸೀತಾರಾಮ್ ಮತ್ತು ಉಷಾ ಸೀತಾರಾಮ್ ನಿವಾಸದಲ್ಲಿ ಬೊಂಬೆಗಳ ವೈಭವ ಮನೆ ಮಾಡಿದೆ. ಮನೆಯೊಳಗಿನ ವಿಶಾಲ ಜಾಗದಲ್ಲಿ ೨೦೦ಕ್ಕೂ ಹೆಚ್ಚು ಗೊಂಬೆಗಳನ್ನು ಬಹಳ ಶಿಸ್ತುಬದ್ಧವಾಗಿ ಜೋಡಿಸಿಡಲಾಗಿದೆ. ಆರು ಹಂತಗಳಲ್ಲಿ ವಿವಿಧ ದೇವರ ಮೂರ್ತಿಗಳು, ದೇವಾನುದೇವತೆಗಳನ್ನು ಸುಂದರವಾಗಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.

ಶ್ರೀ ಗಣೇಶ, ಆಂಜನೇಯ, ಅಷ್ಟಲಕ್ಷ್ಮೀಯರು, ಸಪ್ತಮಾತೃಕೆಯರು, ಅಖಿಲಾಂಡೇಶ್ವರಿ, ದಶಾವತಾರ, ದಕ್ಷಿಣಾಮೂರ್ತಿ, ಕಾಳಿಂಗ ಮರ್ದನ, ಭೂ ವರಾಹನಾಥ ಸ್ವಾಮಿ, ಶಿವ- ಪಾರ್ವತಿ, ವಿಷ್ಣು, ಚಾಮುಂಡೇಶ್ವರಿ, ಅರ್ಧನಾರೀಶ್ವರ, ಮಹಾಲಕ್ಷ್ಮೀಯನ್ನು ತೊಡೆಯಮೇಲೆ ಕೂರಿಸಿಕೊಂಡಿರುವ ವಿಷ್ಣು, ಗಾಯಿತ್ರಿ ಜಪ, ಶಿವಲಿಂಗ, ನಂದಿ ಹೀಗೆ ನೂರಾರು ಬೊಂಬೆಗಳು ಆಕರ್ಷಣೆಯ ಕೇಂದ್ರಬಿಂದುಗಳಾಗಿವೆ.

ಹಲವು ಹೆಣ್ಣು ಬೊಂಬೆಗಳಿಗೆ ಸೀರೆಯುಡಿಸಿ, ಮೂಗುತಿ ಇಟ್ಟು, ಸರ ಹಾಕಿ, ಬಳೆ ತೊಡಿಸಿ, ಕಾಲ್ಗೆಜ್ಜೆ ಹಾಕಿ, ಹೂ ಮಾಲೆ ತೊಡಿಸಿ ಅವುಗಳಿಗೆ ಮೆರುಗು ನೀಡಲಾಗಿದೆ. ಶ್ರೀಕೃಷ್ಣನ ಬೃಂದಾವನವನ್ನು ಮೋಹಕವಾಗಿ ಚಿತ್ರಿಸಲಾಗಿದೆ. ಒಂದೊಂದು ಬೊಂಬೆಗಳ ಹಿಂದೆ ಒಂದೊಂದು ಕತೆ ಇದೆ. ಬೊಂಬೆಗಳಿಗೆ ಜೀವವಿಲ್ಲದಿದ್ದರೂ ನಂಬಿಕೆ, ಭಾವನೆಗಳಿಂದಲೂ ಪೂಜನೀಯ ಸ್ಥಾನ ಪಡೆದುಕೊಡು ನಮ್ಮ ಸಂಸ್ಕೃತಿಯ ರಾಯಭಾರಿಗಳಂತೆ ಕಂಡುಬರುತ್ತಿವೆ.

ಸೀತಾರಾಮ್ ಮತ್ತು ಅವರ ಪತ್ನಿ ಉಷಾ ನವರಾತ್ರಿಗೆ ಹದಿನೈದು ದಿನಗಳಿರುವಂತೆಯೇ ಮನೆಯಲ್ಲಿ ಬೊಂಬೆ ಕೂರಿಸುವುದಕ್ಕೆ ಸಿದ್ಧತೆ ಆರಂಭಿಸುತ್ತಾರೆ. ತಮ್ಮ ಸಂಗ್ರಹಾಗಾರದಲ್ಲಿರುವ ಬೊಂಬೆಗಳನ್ನು ಹೊರತೆಗೆದು, ಸ್ವಚ್ಛಗೊಳಿಸಿ ಬಣ್ಣ ಕಳೆದುಕೊಂಡು ಕಳಾಹೀನವಾಗಿದ್ದ ಬೊಂಬೆಗಳಿಗೆ ಹೊಸ ಬಣ್ಣ ಹಾಕುವ ಜೊತೆಗೆ ಅಂದ- ಚೆಂದವೆನಿಸುವಂತಹ ವಸ್ತ್ರಾಲಂಕಾರ, ಸಿಂಗಾರ ಮಾಡಿ ಅವುಗಳಿಗೆ ಹೊಸ ರೂಪವನ್ನು ನೀಡುತ್ತಾ ಬಂದಿದ್ದಾರೆ. ಪ್ರವಾಸದ ಸಮಯದಲ್ಲಿ ತಮ್ಮ ಕಣ್ಣಿಗೆ ಬಿದ್ದಂತಹ ಯಾವುದೇ ಬೊಂಬೆಗಳನ್ನು ತಂದು ಮನೆಯಲ್ಲಿಟ್ಟುಕೊಳ್ಳುತ್ತಾರೆ. ಬೊಂಬೆಗಳ ಸಂಗ್ರಹವನ್ನು ಹವ್ಯಾಸವನ್ನಾಗಿಯೂ ಮಾಡಿಕೊಂಡಿದ್ದಾರೆ.

ದಂಪತಿ ಬಳಿ ಸುಮಾರು ೪೦ ವರ್ಷದಷ್ಟು ಹಳೆಯದಾದ ಬೊಂಬೆಗಳಿವೆ. ಅಷ್ಟು ಹಳೆಯ ಬೊಂಬೆಗಳು ಎಂದು ಹೇಳುವುದಕ್ಕೆ ಸಾಧ್ಯವಾಗದ ರೀತಿಯಲ್ಲಿ ಅವುಗಳನ್ನು ಬಹಳ ಮುತುವರ್ಜಿಯಿಂದ ಸಂಗ್ರಹಿಸಿಟ್ಟುಕೊಂಡು ಬಂದಿದ್ದಾರೆ. ಇವುಗಳ ಜೊತೆಗೆ ಹೊಸ ಬೊಂಬೆಗಳನ್ನೂ ತಂದಿರಿಸಿದ್ದಾರೆ. ಆಕರ್ಷಕ ದೀಪಾಲಂಕಾರವನ್ನೂ ಮಾಡಲಾಗಿದೆ.

ದಸರಾ ಬೊಂಬೆಗಳನ್ನು ನೋಡುವುದಕ್ಕೆ ನೆರೆಹೊರೆಯವರು, ನೆಂಟರು, ಸ್ನೇಹಿತರು, ಬಂಧುಗಳು ಮನೆಗೆ ಬಂದು ವೀಕ್ಷಿಸಿಕೊಂಡು ಖುಷಿಯಿಂದ ತೆರಳುತ್ತಿದ್ದಾರೆ. ನವರಾತ್ರಿ ಹಬ್ಬದ ಸಂಭ್ರಮವನ್ನು ಗೊಂಬೆಗಳ ಪ್ರದರ್ಶನದೊಂದಿಗೆ ಸಂತಸದಿಂದ ಕಳೆಯುತ್ತಿರುವ ದಂಪತಿ ವಿವಿಧ ಭಾವ-ಭಂಗಿಗಳಲ್ಲಿರುವ, ವಿಭಿನ್ನ ಅವತಾರಗಳ ದೇವರ ಮೂರ್ತಿಗಳು, ತಮ್ಮಲ್ಲಿ ಇಲ್ಲದ ದೇವಾನುದೇವತೆಗಳನ್ನು ಹುಡುಕಿ ತೆಗೆಯುವುದರೊಂದಿಗೆ ಪ್ರತಿ ವರ್ಷ ವಿಭಿನ್ನ ರೀತಿಯಲ್ಲಿ ಬೊಂಬೆಗಳನ್ನು ಜೋಡಿಸಿಡುತ್ತಿದ್ದಾರೆ.

ಬೊಂಬೆಗಳನ್ನು ಕೂರಿಸುವುದರಲ್ಲಿ ಪತ್ನಿ ಉಷಾ ಅವರಿಗೆ ಪತಿ ಸೀತಾರಾಮ್ ನೆರವಾಗುತ್ತಿದ್ದಾರೆ. ವಯಸ್ಸಾಗಿದ್ದರೂ ಬೊಂಬೆಗಳನ್ನು ಕೂರಿಸುವ ಬಗೆಗಿನ ಆಸಕ್ತಿ ಕಡಿಮೆಯಾಗಿಲ್ಲ. ಅದನ್ನು ದಂಪತಿ ಶ್ರಮ ಎಂದುಕೊಂಡೂ ಇಲ್ಲ. ಶಿಸ್ತು ಮತ್ತು ಶ್ರದ್ಧೆಯಿಂದ ಬೊಂಬೆಗಳನ್ನು ಕೂರಿಸುತ್ತಾ ನವರಾತ್ರಿಯ ಸೊಬಗನ್ನು ಬೊಂಬೆಗಳನ್ನು ಕೂರಿಸುವುದರೊಂದಿಗೆ ಹೆಚ್ಚಿಸಿದ್ದಾರೆ.

‘ನವರಾತ್ರಿ ಸಮಯದಲ್ಲಿ ಬೊಂಬೆಗಳನ್ನು ಕೂರಿಸುವುದು ನಮ್ಮ ಸಂಸ್ಕೃತಿ. ಅದನ್ನು ಚಾಚೂತಪ್ಪದೇ ಹಲವು ದಶಕಗಳಿಂದ ಮುನ್ನಡೆಸಿಕೊಂಡು ಬರುತ್ತಿದ್ದೇವೆ. ಅದನ್ನು ಶ್ರಮ ಎಂದು ನಾವೆಂದೂ ಪರಿಭಾವಿಸಿಲ್ಲ. ಬೊಂಬೆಗಳನ್ನು ಕೂರಿಸುವುದರಲ್ಲೇ ನಾವು ಖುಷಿಯನ್ನು ಕಾಣುತ್ತಿದ್ದೇವೆ. ನಮ್ಮಲ್ಲಿ ವೈವಿಧ್ಯಮಯ, ವೈಶಿಷ್ಟ್ಯಪೂರ್ಣವಾದ ೨೦೦ಕ್ಕೂ ಹೆಚ್ಚು ಬೊಂಬೆಗಳಿವೆ.’

- ಸೀತಾರಾಮ್, ನೆಹರು ನಗರ, ಮಂಡ್ಯ