ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಕಳೆದ ಬಾರಿಗಿಂತ ಈ ಬಾರಿ ಹಾಸನಾಂಬ ಜಾತ್ರೋತ್ಸವವನ್ನು ಇನ್ನಷ್ಟು ಅದ್ಧೂರಿಯಾಗಿ ಆಚರಿಸಲಾಗುವುದು. ಹಾಸನಾಂಬೆ ಬಾಗಿಲು ತೆರೆಯುವ ವೇಳೆ ಹಾಸನ ನಗರವನ್ನು ಮೈಸೂರು ದಸರಾದ ರೀತಿ ಅಲಂಕಾರ ಮಾಡಲು ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಾಸನಾಂಬೆ ಜಾತ್ರಾ ಮಹೋತ್ಸವದ ಪೋಸ್ಟರ್ ಹಾಗೂ ಆ್ಯಪ್ ಬಿಡುಗಡೆ ಮಾಡಿದ ನಂತರ ಸಭೆಯಲ್ಲಿ ಹಾಸನಾಂಬೆ ದೇವಾಲಯದ ಆಡಳಿತಾಧಿಕಾರಿ ಹಾಗೂ ಹಾಸನ ಉಪವಿಭಾಗಧಿಕಾರಿ ಮಾರುತಿ ಸಭೆಗೆ ಮಾಹಿತಿ ನೀಡಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಸನಾಂಬೆ ದೇವಾಲಯದ ಬಾಗಿಲು ತೆರೆಯುತ್ತಾರೆ. ದೇವಾಲಯದ ಜಾತ್ರೋತ್ಸವ ಅಹ್ವಾನ ಪತ್ರಿಕೆ ಮುದ್ರಣವಾಗಿದ್ದು, ಮುಂದಿನ ವಾರದಿಂದ ಗಣ್ಯರಿಗೆ ಹಂಚಿಕೆ ಮಾಡಲಾಗುತ್ತದೆ. ಹೂವಿನ ಅಲಂಕಾರಕ್ಕೆ ಲಾಲ್‌ಬಾಗ್‌ನಲ್ಲಿ ಕೆಲಸ ಮಾಡಿರುವ ಪರಿಣಿತರನ್ನು ಬಳಸಲಾಗುತ್ತಿದೆ. ವಿದ್ಯುತ್ ದೀಪಾಲಂಕಾರ ಮೈಸೂರು ದಸರಾ ಮಾದರಿ ಅಳವಡಿಸಿಕೊಳ್ಳಲಾಗಿದೆ. ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಎಲ್‌ಇಡಿ ಪರದೆಯಲ್ಲಿ ದೇವರ ದರ್ಶನ ವೀಕ್ಷಣೆ ಮಾಡಬಹುದಾಗಿದೆ. ದೇವಾಲಯದ ಸುತ್ತಲೂ ರಸ್ತೆ ಸರಿಪಡಿಸುವ ಕೆಲಸ ಮುಕ್ತಾಯವಾಗಿದೆ. ಲಾಡು ಪ್ರಸಾದ. ಜೊನ್ನೆ ಪ್ರಸಾದ ವಿತರಣೆ ೩೦೦ ಹಾಗೂ ೧೦೦೦ ಟಿಕೆಟ್ ಪಡೆದವರಿಗೆ ವಿತರಣೆ ಮಾಡುವುದಾಗಿ ತಿಳಿಸಿದರು.
ಭಕ್ತಾದಿಗಳಿಗೆ ನೀರು ಮತ್ತು ಮಜ್ಜಿಗೆ ವ್ಯವಸ್ಥೆಗೆ ಸ್ಕೌಟ್ಸ್ ಹಾಗೂ ಗೈಡ್ಸ್ ಮಕ್ಕಳನ್ನು ಬಳಕೆ ಮಾಡಿಕೊಳ್ಳಲಾಗುವುದು. ವಿ ಐ ಪಿ. ವಿವಿಐಪಿ ಪಾಸ್‌ಗಳನ್ನು ಅಪರ ಜಿಲ್ಲಾಧಿಕಾರಿಯವರು ವಿತರಣೆ ಮಾಡುತ್ತಾರೆ. ಫ್ಲೆಕ್ಸ್ ಬ್ಯಾನರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ವಹಿಸಲಾಗಿದೆ. ಫ್ಲೆಕ್ಸ್ ಬ್ಯಾನರ್‌ನಲ್ಲಿ ಕಡ್ಡಾಯವಾಗಿ ಮಾಜಿ ಪ್ರಧಾನಿ ದೇವೇಗೌಡರ ಭಾವಚಿತ್ರ ಅಳವಡಿಸುವಂತೆ ಸಚಿವರು ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿದರು. ಸ್ಕೌಟ್ಸ್ ಮತ್ತು ಎನ್.ಸಿ.ಸಿ. ಮಕ್ಕಳಿಗೆ ವಸತಿ ಸೌಕರ್ಯ ಮಾಡಲು ಸೂಚನೆ ನೀಡಿದರು. ಜಿಲ್ಲೆಯ ಎಲ್ಲಾ ಸರ್ಕಾರಿ ಕಟ್ಟಡಗಳಿಗೆ ದೀಪಾಲಂಕಾರ ಮಾಡಲಾಗುವುದು. ಹೆಲಿ ಟೂರಿಸಂ, ಪ್ಯಾರಾ ಗ್ಲೈಂಡಿಗ್ ಆಯೋಜನೆ ಮಾಡಲಾಗುತ್ತದೆ ಎಂದು ಜಾತ್ರಾ ಮಹೋತ್ಸವ ತಯಾರಿ ಬಗ್ಗೆ ಮಾಹಿತಿ ನೀಡಿದರು.ಕೊನೆಯ ಬಾರಿ ಹಾಸನಾಂಬೆ ಉತ್ಸವದಲ್ಲಿ ಕೆಲಸ ಮಾಡಿದ ಅಧಿಕಾರಿಗಳು ಈ ಬಾರಿ ಇದ್ದಾರೆ. ಅರ್ಚಕರು ಗಂಟೆಗಳ ಲೆಕ್ಕದಲ್ಲಿ ನೈವೇದ್ಯ ಮಾಡುವುದು ಬೇಡ. ಭಕ್ತರನ್ನು ಕಾಯಿಸದೆ ಸರತಿ ಸಾಲಿನಲ್ಲಿ ಭಕ್ತರಿಗೆ ದರ್ಶನ ನೀಡಲು ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ನಾನು ನೋಡಿದ ಹಾಗೆ ಅಧಿಕಾರಿಗಳೇ ದರ್ಶನ ಮಾಡುತ್ತಿರುತ್ತಾರೆ. ಕಳೆದ ಬಾರಿ ದರ್ಶನದಲ್ಲಿ ೧೪ ಲಕ್ಷ ಜನ ಭಕ್ತರು ಬಂದಿದ್ದರು. ಈ ಬಾರಿ ಕಡಿಮೆ ದಿನಗಳು ಇರುವ ಕಾಲ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ದರ್ಶನದ ವ್ಯವಸ್ಥೆ ಹೆಚ್ಚಳ ಮಾಡಬೇಕು ಎಂದರು. ಶಾಸಕ ಸ್ವರೂಪ ಪ್ರಕಾಶ್ ಮಾತನಾಡಿ, ಡೇರಿ ವೃತ್ತದಿಂದ ಸರ್ಕಾರಿ ಕಟ್ಟಡಗಳಿಗೆ ಪೈಂಟಿಂಗ್ ಮಾಡಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಸಂಸದರಾದ ಶ್ರೇಯಸ್ ಪಟೇಲ್, ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಎಸ್ಪಿ ಮಹಮ್ಮದ್ ಸುಜೀತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ, ತಹಸೀಲ್ದಾರ್ ಶ್ವೇತಾ, ಮುಜರಾಯಿ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.