ಭಾರತದ ಮಾರುಕಟ್ಟೆಗೆ ಡಸ್ಟರ್ನ ನೂತನ ಹೈಬ್ರಿಡ್ ಆವೃತ್ತಿಯನ್ನು ರೆನಾಲ್ಟ್ ಇಂಡಿಯಾ ಶನಿವಾರ ಪರಿಚಯಿಸಿದೆ.
ನಿಂಗರಾಜ ಕೆ.ಯತ್ನಾಳ
ಕನ್ನಡಪ್ರಭ ವಾರ್ತೆ ಮುಂಬೈಭಾರತದ ಮಾರುಕಟ್ಟೆಗೆ ಡಸ್ಟರ್ನ ನೂತನ ಹೈಬ್ರಿಡ್ ಆವೃತ್ತಿಯನ್ನು ರೆನಾಲ್ಟ್ ಇಂಡಿಯಾ ಶನಿವಾರ ಪರಿಚಯಿಸಿದೆ.
ಮುಂಬೈನ ಖಾಸಗಿ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೆಟ್ರೋಲ್ ಎಂಜಿನ್ ಹಾಗೂ ಎಲೆಕ್ಟ್ರಿಕ್ ಮೋಟಾರ್ ಇರುವ ಹೈಬ್ರಿಡ್ ಮಾದರಿಯ ಇ–ಟೆಕ್ 160 ಅನ್ನು ಕಂಪನಿಯ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಫ್ರಾನ್ಸಿಸ್ಕೊ ಹಿಡಾಲ್ಗೊ ಮಾರ್ಕವಿಸ್ ಅನಾವರಣಗೊಳಿಸಿದರು.ಭಾರತದಲ್ಲಿ ಕಾರು ಖರೀದಿಸುವವರ ಅಪೇಕ್ಷೆಗಳು ಬದಲಾಗುತ್ತಿವೆ. ಡೀಸೆಲ್ ಅಥವಾ ಪೆಟ್ರೋಲ್ ಎಂಜಿನ್ ಎಂಬ ಆಯ್ಕೆಯ ಬದಲು ಈಗ ಹೈಬ್ರಿಡ್ ಎಂಜಿನ್ಗೆ ಬೇಡಿಕೆ ಹೆಚ್ಚುತ್ತಿದೆ. ಗ್ರಾಹಕರ ಅಪೇಕ್ಷೆಗೆ ಪೂರಕವಾಗಿ ಕಳೆದ ಕೆಲ ತಿಂಗಳ ಹಿಂದೆ ಬಿಡುಗಡೆಗೊಂಡಿರುವ ಡಸ್ಟರ್ನಲ್ಲೂ ಕೆಲವು ಬದಲಾವಣೆ ತರಲಾಗಿದೆ ಎಂದು ಅವರು ತಿಳಿಸಿದರು.
ಕಂಪನಿಯ ಮುಖ್ಯ ಎಂಜಿನಿಯರ್ ಡಾ। ವಿ.ವಿಕ್ರಮನ್ ಅವರು ಕಾರಿನ ಸೌಕರ್ಯಗಳ ಕುರಿತು ಮಾಹಿತಿ ನೀಡಿ, ‘1.8 ಲೀಟರ್ ಸಾಮರ್ಥ್ಯದ ನಾಲ್ಕು ಸಿಲಿಂಡರ್ಗಳ ಪೆಟ್ರೋಲ್ ಎಂಜಿನ್ ಸುಮಾರು 110 ಅಶ್ವಶಕ್ತಿ ಹಾಗೂ 208 ನ್ಯೂಟನ್ ಮೀಟರ್ನಷ್ಟು ಟಾರ್ಕ್ ಅನ್ನು ಉತ್ಪಾದಿಸಬಲ್ಲದು. ಇದರೊಂದಿಗೆ 1.4 ಕಿಲೋ ವಾಟ್ ಬ್ಯಾಟರಿಯನ್ನೂ ಹೊಂದಿದೆ. ಹೊರಗಿನ ಚಾರ್ಜರ್ನ ಅಗತ್ಯವಿಲ್ಲದೆ, ಪೆಟ್ರೋಲ್ ಎಂಜಿನ್ ಮೂಲಕವೇ ಈ ಬ್ಯಾಟರಿ ಮರುಪೂರಣವಾಗಲಿದೆ. ಶೇ.20ರಷ್ಟು ಕೋಬಾಲ್ಟ್ ಇರುವುದರಿಂದ ಗರಿಷ್ಠ ಶಕ್ತಿಯನ್ನು ಇದು ನಿರಂತರವಾಗಿ ಪೂರೈಕೆ ಮಾಡಬಲ್ಲದು. ಇದರಿಂದ ಉಂಟಾಗುವ ಅತ್ಯಧಿಕ ಉಷ್ಣತೆಯನ್ನು ನಿಯಂತ್ರಿಸುವ ವ್ಯವಸ್ಥೆಯೂ ಇದರಲ್ಲಿದೆ ಎಂದು ಅವರು ವಿವರಿಸಿದರು.ಎಲೆಕ್ಟ್ರಿಕ್ನ ಎರಡು ಹಾಗೂ ಪೆಟ್ರೋಲ್ನ ನಾಲ್ಕು ಗೇರ್ಗಳನ್ನು ನಿರ್ವಹಿಸಲು ಬಹುಮಾದರಿಯ ಸ್ವಯಂಚಾಲಿತ ಗೇರ್ಬಾಕ್ಸ್ ಅನ್ನು ಕೂಡ ಇದು ಹೊಂದಿದೆ. ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟರ್ಗಳ ನಡುವಿನ ಶಕ್ತಿಯ ವರ್ಗಾವಣೆಯನ್ನು ಇದು ನಿರ್ವಹಿಸುತ್ತದೆ.
ನಗರ ಪ್ರದೇಶಗಳಲ್ಲಿ ವಾಹನದ ವೇಗ ಕಡಿಮೆ ಇದ್ದಾಗ ವಿದ್ಯುತ್ ಚಾಲಿತ ಮೋಟಾರು ಶೇ.80ರಷ್ಟು ಬಳಕೆಯಾಗಲಿದೆ. ದಹಿಸುವ ಪೆಟ್ರೋಲ್ ಎಂಜಿನ್ನ ಬಳಕೆ ಶೇ.20ರಷ್ಟು ಮಾತ್ರ ಇರುವುದರಿಂದ ಒಂದು ಪೂರ್ಣ ಟ್ಯಾಂಕ್ ಇಂಧನಕ್ಕೆ ಗರಿಷ್ಠ 1400 ಕಿ.ಮೀ. ದೂರವನ್ನು ಇದು ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಅಂದರೆ ಫುಲ್ ಟ್ಯಾಂಕ್ ಮಾಡಿಸಿ ಬೆಂಗಳೂರಿನಿಂದ ಬೀದರ್ಗೆ ಹೋಗಿ ಬರಬಹುದು. ಈ ಕಾರು 29 ಕಿ.ಮೀ. ಮೈಲೇಜ್ ನೀಡಲಿದೆ ಎಂದು ಡಾ। ವಿಕ್ರಮನ್ ವಿವರಿಸಿದರು.ಒಳಾಂಗಣದಲ್ಲೂ ಡಸ್ಟರ್ನ ಈ ಹೊಸ ಆವೃತ್ತಿ ಹೊಸತನವನ್ನು ಹೊಂದಿದೆ. ಡ್ಯೂನ್ ಬ್ರೌನ್ ಬಣ್ಣದ ಲೆದರ್ ಅಪ್ಹೋಲ್ಸ್ಟ್ರಿ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಡಸ್ಟರ್ ಶ್ರೇಣಿಯಲ್ಲಿ ಟರ್ಬೊ ಟಿಸಿಇ 100, ಟರ್ಬೊ ಟಿಸಿಇ 160 ಮತ್ತು ಸ್ಟ್ರಾಂಗ್ ಹೈಬ್ರಿಡ್ ಇ-ಟೆಕ್ 160 ಸೇರಿದಂತೆ ಹಲವು ಪವರ್ಟ್ರೇನ್ ಆಯ್ಕೆಗಳಿವೆ. ಎವಲೂಷನ್ ಮಾದರಿಗೆ ಎಕ್ಸ್ ಶೋರೂಂ ಬೆಲೆ ₹16.99 ಲಕ್ಷ, ಟೆಕ್ನೊ ಮಾದರಿಗೆ ₹18.99 ಲಕ್ಷ ಹಾಗೂ ಎಮೋಷನ್ ಮಾದರಿಯದ್ದು ₹19.49 ಲಕ್ಷ ಎಂದು ಫ್ರಾನ್ಸಿಸ್ಕೊ ಹಿಡಾಲ್ಗೊ ತಿಳಿಸಿದರು.
ಇದರೊಂದಿಗೆ ಹೈಬ್ರಿಡ್ ಬ್ಯಾಟರಿಗೆ ಎಂಟು ವರ್ಷ ಅಥವಾ 1.6 ಲಕ್ಷ ಕಿ.ಮೀ. ವಾರಂಟಿ ನೀಡುವ ಮಾಹಿತಿಯೂ ಪ್ರಕಟಿಸಲಾಗಿದೆ. ₹89,900ಕ್ಕೆ ಮೂರು ವರ್ಷಗಳ ವಿಮೆ, ನಿರ್ವಹಣೆ ಮತ್ತು ಮರುಮಾರಾಟದ ಮೌಲ್ಯವೂ ಸೇರಿದೆ. ನ.6ರ ನಂತರ ಗ್ರಾಹಕರಿಗೆ ಕಾರು ಲಭ್ಯವಾಗಲಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕಂಪನಿಯ ಭಾರತ ವಿಭಾಗದ ಸಿಇಒ ಸ್ಟೀಫನ್ ಡೆಬ್ಲಿಸ್ ಇದ್ದರು.