ಸ್ಟಾರ್‌ವಾರ್ಸ್‌ ಚಿತ್ರಗಳಲ್ಲಿ ತೋರಿಸುವ ಕಾಲ್ಪನಿಕ ಕಾರುಗಳನ್ನೇ ಹೋಲುವ ಹಾರುವ, ಗುರುತ್ವಾಕರ್ಷಣ ಶಕ್ತಿ ಮೀರಿ ನಿಲ್ಲುವ ಮತ್ತು ಗಾಳಿಯಲ್ಲೇ ಪಲ್ಟಿ ಹೊಡೆವ ಯುದ್ಧ ವಿಮಾನಗಳ ರೀತಿಯ ಅತ್ಯಾಧುನಿಕ ಕಾರೊಂದನ್ನು ಜಗತ್ತಿನ ಅತಿ ಸಿರಿವಂತ ಎಲಾನ್ ಮಸ್ಕ್‌ ಅವರ ಕಂಪನಿ ಸಿದ್ದಪಡಿಸಿದೆ.

ಸ್ಯಾನ್‌ ಫ್ರಾನ್ಸಿಸ್ಕೋ: ಸ್ಟಾರ್‌ವಾರ್ಸ್‌ ಚಿತ್ರಗಳಲ್ಲಿ ತೋರಿಸುವ ಕಾಲ್ಪನಿಕ ಕಾರುಗಳನ್ನೇ ಹೋಲುವ ಹಾರುವ, ಗುರುತ್ವಾಕರ್ಷಣ ಶಕ್ತಿ ಮೀರಿ ನಿಲ್ಲುವ ಮತ್ತು ಗಾಳಿಯಲ್ಲೇ ಪಲ್ಟಿ ಹೊಡೆವ ಯುದ್ಧ ವಿಮಾನಗಳ ರೀತಿಯ ಅತ್ಯಾಧುನಿಕ ಕಾರೊಂದನ್ನು ಜಗತ್ತಿನ ಅತಿ ಸಿರಿವಂತ ಎಲಾನ್ ಮಸ್ಕ್‌ ಅವರ ಕಂಪನಿ ಸಿದ್ದಪಡಿಸಿದೆ.

ಮಸ್ಕ್‌ ಅವರ ಟೆಸ್ಲಾ ಹಾಗೂ ಸ್ಪೇಸ್‌ಎಕ್ಸ್‌ ಜಂಟಿಯಾಗಿ ಉತ್ಪಾದಿಸಿರುವ 2 ಆಸನಗಳ ‘ಟೆಸ್ಲಾ ರೋಡ್‌ಸ್ಟರ್’ ವಿದ್ಯುತ್‌ ಕಾರ್‌ ಅನ್ನು ಗುರುವಾರ ಅನಾವರಣ ಮಾಡಲಾಗಿದೆ. ಈ ಮಾದರಿಯ ಕಾರುಗಳ ಉತ್ಪಾದನೆ 2028ರಿಂದ ಆರಂಭವಾಗಲಿದೆ.

ಸಿನಿಮೀಯ ಅನಾವರಣ:

ಹಾರುವ ಕಾರ್‌ ಅನ್ನು ಟೆಕ್ಸಾಸ್‌ನ ಸ್ಪೇಸ್‌ಎಕ್ಸ್‌ ಪರೀಕ್ಷಾ ಸ್ಥಳದಲ್ಲಿ ನಡೆಸಲಾಗಿದೆ. ಲಂಬವಾದ ರ್‍ಯಾಂಪ್ ಒಂದನ್ನು ಅಳವಡಿಸಲಾಗಿದ್ದು, ರೋಡ್‌ಸ್ಟರ್ ಕಾರು ಅದನ್ನೇರಿ ಸಾಗಿ, ತುದಿಯಲ್ಲಿ ತಲೆಕೆಳಗಾಗಿದೆ. ಈ ವೇಳೆ ಕಾರಿನಡಿಯಲ್ಲಿ ನಿರ್ವಾತ ಸೃಷ್ಟಿಸಿ ಅದು ಬೀಳದಂತೆ ಮಾಡಲಾಗಿತ್ತು. ಆ ಹೊತ್ತಿಗೆ ಕಾರ್‌ನ ಥ್ರಸ್ಟರ್‌ಗಳು ಸಕ್ರಿಯಗೊಂಡಿದ್ದು, ಕಾರು ಗಾಳಿಯಲ್ಲಿ ಪಲ್ಟಿ ಹೊಡೆಯುತ್ತ ಕೆಳಗೆ ಬಂದಿದೆ. ಇದೇ ಸ್ಥಳದಲ್ಲಿ ಇನ್ನೊಂದು ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ ಥ್ರಸ್ಟ್‌ ನೆರವಿನಿಂದ ಹಾರಿದ ರೋಡ್‌ಸ್ಟರ್ ಕಾರು, ಸಾಲಾಗಿ ನಿಲ್ಲಿಸಲಾದ 4 ಕಾರ್‌ ಮತ್ತು 1 ಟ್ರಕ್‌ನ ಮೇಲಿಂದ ಪಲ್ಟಿ ಹೊಡೆಯುತ್ತಾ ಹಾರಿ ಇಳಿದಿದೆ. ಮಸ್ಕ್‌ರ ಈ ಹೊಸ ಸಾಹಸ ಜಗತ್ತನ್ನ ನಿಬ್ಬೆರಗಾಗಿಸಿದೆ.

ಕಾರ್‌ ಹಾರೋದು ಹೇಗೆ?:

ಕಾರ್‌ ಹಾರುವಂತೆ ಮಾಡಲು, ಇದರ ಅಡಿಯ ನಾಲ್ಕೂ ಮೂಲೆಗಳಲ್ಲಿ 10 ಥ್ರಸ್ಟರ್‌ಗಳನ್ನು ಅಳವಡಿಸಲಾಗಿದೆ. ರಾಕೆಟ್‌ಗಳನ್ನು ನಭಕ್ಕೆ ಚಿಮ್ಮಿಸಲು ಬಳಸಲಾಗುವ ಥ್ರಸ್ಟರ್‌ ರೀತಿಯೇ ಇರುವ ಇವುಗಳಲ್ಲಿ 600 ಲೀ. ಸಂಕುಚಿತ ಅನಿಲವನ್ನು ತುಂಬಿಸಲಾಗಿರುತ್ತದೆ. ಈ ಅನಿಲವು ಒಮ್ಮೆಲೆ ಹೊರತಳ್ಳಲ್ಪಟ್ಟಾಗ ಆ ರಭಸಕ್ಕೆ ಕಾರು ಮೇಲೆ ಚಿಮ್ಮುತ್ತದೆ.

ಇನ್ನು, ತಲೆಕೆಳಗಾದ ಹೊರತಾಗಿಯೂ ರ್‍ಯಾಂಪ್‌ಗೆ ಅಂಟಿಕೊಂಡು ನಿಲ್ಲುವಂತೆ ಮಾಡಲು, ಕಾರಿನ ಕೆಳಭಾಗದಲ್ಲಿರುವ ಫ್ಯಾನ್‌ಗಳು ಗಾಳಿಯನ್ನು ಹೀರಿಕೊಂಡು ನಿರ್ವಾತ ಸೃಷ್ಟಿಸುತ್ತವೆ. ವ್ಯಾಕ್ಯೂಮ್‌ ಕ್ಲೀನರ್‌ಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ತಂತ್ರವಿದು.

ಈ ಕಾರ್‌ 1 ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ಶೂನ್ಯದಿಂದ ಗಂಟೆಗೆ 97 ಕಿಮೀ ವೇಗವನ್ನು ಹೆಚ್ಚಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ ಮತ್ತು ಗಂಟೆಗೆ 370 ಕಿಮೀಗಿಂತ ಅಧಿಕ ವೇಗವನ್ನು ತಲುಪಬಲ್ಲದು ಎಂದು ಟೆಸ್ಲಾ ತಿಳಿಸಿದೆ.

ಕಾರು ಹಾರಾಟ, ನೆಗೆತ ಹೇಗೆ?

- ಕಾರಿಗೆ ರಾಕೆಟ್‌ಗಳಲ್ಲಿ ಬಳಸುವ ಥ್ರಸ್ಟರ್‌ ಅಳವಡಿಸಿ ಈ ವಿಶಿಷ್ಟ ಪ್ರಯೋಗ

- ಗುರುತ್ವಾಕರ್ಷಣ ಶಕ್ತಿ ಮೀರಿ ನಿಲ್ಲುವ ಮತ್ತು ಗಾಳಿಯಲ್ಲೇ ಪಲ್ಟಿ ಹೊಡೆವ ಕಾರು

- ಸ್ಟಾರ್‌ವಾರ್ಸ್‌ ಸಿನಿಮಾ ರೀತಿಯ 2 ಆಸನದ ರೋಡ್‌ಸ್ಟರ್‌ ಕಾರು ಪ್ರದರ್ಶನ

- ಎಲಾನ್‌ ಮಸ್ಕ್‌ರ ಟೆಸ್ಲಾ ಹಾಗೂ ಸ್ಪೇಸ್‌ಎಕ್ಸ್‌ನಿಂದ ಇದರ ಜಂಟಿ ಉತ್ಪಾದನೆ