ಪೆಟ್ರೋಲ್ ಬಂಕ್‌ಗೆ ಜಾಗ್ವಾರ್ ಕಾರು ನುಗ್ಗಿ ಡಿಕ್ಕಿ ಹೊಡೆದಿದ್ದರಿಂದ ಪೆಟ್ರೋಲ್ ಬಂಕ್ ಬೆಂಕಿಗಾಹುತಿಯಾದ ಘಟನೆ ಅತ್ತಿಬೆಲೆ ಠಾಣಾ ವ್ಯಾಪ್ತಿಯ ವರಸಿದ್ದಿ ಫಿಲ್ಲಿಂಗ್ ಸ್ಟೇಷನ್‌ನಲ್ಲಿ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ಆನೇಕಲ್
ಪೆಟ್ರೋಲ್ ಬಂಕ್‌ಗೆ ಜಾಗ್ವಾರ್ ಕಾರು ನುಗ್ಗಿ ಡಿಕ್ಕಿ ಹೊಡೆದಿದ್ದರಿಂದ ಪೆಟ್ರೋಲ್ ಬಂಕ್ ಬೆಂಕಿಗಾಹುತಿಯಾದ ಘಟನೆ ಅತ್ತಿಬೆಲೆ ಠಾಣಾ ವ್ಯಾಪ್ತಿಯ ವರಸಿದ್ದಿ ಫಿಲ್ಲಿಂಗ್ ಸ್ಟೇಷನ್‌ನಲ್ಲಿ ಸಂಭವಿಸಿದೆ.ಅಪಘಾತವಾಗುತ್ತಿದ್ದಂತೆ ಕಾರಿನಲ್ಲಿದ್ದ ಯುವತಿ ಪರಾರಿಯಾಗಿದ್ದು ಸಾರ್ವಜನಿಕರು ಜಾಗ್ವಾರ್ ಕಾರಿನ ಮಾಲೀಕ ಸಂಜಯ್‌ನನ್ನು ಪೊಲೀಸರಿಗೊಪ್ಪಿಸಿದ್ದಾರೆ. ಐಷಾರಾಮಿ ಜಾಗ್ವಾರ್ ಕಾರು ಸೇರಿದಂತೆ ಪೆಟ್ರೋಲ್ ಪಂಪ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಗಾಯಗೊಂಡಿದ್ದ ಪೆಟ್ರೋಲ್ ಬಂಕ್ ಸಿಬ್ಬಂದಿ ಗುಡ್ಡು ಕುಮಾರ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನೆರೆಯ ತಮಿಳುನಾಡಿನ ಸಿಪ್ ಕಾಟ್ ಅಗ್ನಿಶಾಮಕ ಠಾಣೆ ಸಿಬ್ಬಂದಿ ಮತ್ತು ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಠಾಣೆ ಸಿಬ್ಬಂದಿ ಹರಸಾಹಸಪಟ್ಟು ಬೆಂಕಿ ನಂದಿಸಿದ್ದಾರೆ. ಸಿಬ್ಬಂದಿ ಪೆಟ್ರೋಲ್ ಮತ್ತು ಡಿಸೇಲ್ ಸಂಪರ್ಕವನ್ನು ಬಂದ್ ಮಾಡಿದ್ದರಿಂದ ಹೆಚ್ಚಿನ ಅನಾಹುತ ಆಗಲಿಲ್ಲ. ಪಂಪ್‌ನಲ್ಲಿದ್ದ ಪೆಟ್ರೋಲ್ ಮತ್ತು ಡಿಸೇಲ್ ಮಾತ್ರ ಉರಿದು ಬೂದಿಯಾಗಿದೆ.ಘಟನೆ ವಿವರ: ಜಾಗ್ವಾರ್ ಕಾರು ಹೊಸೂರು ಹೆದ್ದಾರಿಯಿಂದ ವೇಗವಾಗಿ ನುಗ್ಗಿ ಬಂದು ಬಂಕ್‌ನ ಪಂಪ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪೆಟ್ರೋಲ್ ಪಂಪ್ ಸಿಬ್ಬಂದಿ ಮೇಲೆ ಉರುಳಿ ಬಿದ್ದಿದ್ದು, ಪೆಟ್ರೋಲ್ ಗನ್ ಸ್ಪಾರ್ಕ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ತಾಗುತ್ತಿದ್ದಂತೆ ಪಂಪ್ ಕೆಳಗೆ ಸಿಲುಕಿದ್ದ ಸಿಬ್ಬಂದಿ ಕಾಪಾಡುವಂತೆ ಕಿರುಚಾಡಿದ್ದಾನೆ. ಇತರೆ ಸಿಬ್ಬಂದಿ ನೆರವಿಗೆ ಧಾವಿಸಿದ್ದಾರೆ. ಕಾರಿನ ಮಾಲೀಕ ಸಂಜಯ್ ಮತ್ತು ಯುವತಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ.
ಪೆಟ್ರೋಲ್ ಬಂಕ್ ಸಿಬ್ಬಂದಿ ಕಾರಿನ ಮಾಲೀಕ ಸಂಜಯ್ ನನ್ನು ಹಿಡಿದು ಅತ್ತಿಬೆಲೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಕ್ ಟ್ಯಾಂಕ್‌ನಲ್ಲಿ 90 ಸಾವಿರ ಲೀ. ಪೆಟ್ರೋಲ್ ಮತ್ತು ಡಿಸೇಲ್ ಇತ್ತು. ಅಗ್ನಿ ಅವಘಡದಿಂದ 1 ಕೋಟಿ ರು.ನಷ್ಟ ಉಂಟಾಗಿದೆ. ಅಪಘಾತ ನಡೆಸಿರುವ ಕಾರು ಚಾಲಕನ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪೆಟ್ರೋಲ್ ಬಂಕ್ ಮಾಲೀಕ ಆಗ್ರಹಿಸಿದ್ದಾರೆ.